ಸೆ. ೧೩ಕ್ಕೆ ಸಿರಾ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ;ಅಲ್ಪಸಂಖ್ಯಾತರಿಗೆ ಅಧ್ಯಕ್ಷ ಪಟ್ಟ ಬಹುತೇಕ ಖಚಿತ;ಮರಡಿ ಮಂಜು
ಸಿರಾ, ಸೆ. ೬- ಇಲ್ಲಿನ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಸೆ. ೧೩ ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಪಕ್ಷದ ಅಜೆಂಡಾದಂತೆ ಅಧ್ಯಕ್ಷ ಸ್ಥಾನ ಅಲ್ಪಸಂಖ್ಯಾತರ ಪಾಲಾಗಲಿದೆ ಎಂಬುದು ಪ್ರತಿಯೊಬ್ಬರ ಮನೆ, ಮನದ ಮಾತಾಗಿದೆ.
ದಲಿತರನ್ನು ದೂರ ತಳ್ಳಿ, ಹಿಂದುಳಿದ ವರ್ಗವನ್ನು ಹಿಂದಕ್ಕೆ ಸರಿಸಿದ ಅಹಿಂದ ಶಾಸಕ ಜಯಚಂದ್ರರವರ ಬೆಳಕಿನಲ್ಲಿ ನೂರಕ್ಕೆ ನೂರು ಅಲ್ಪಸಂಖ್ಯಾತರದ್ದೇ ದರ್ಬಾರು ನಡೆಯಲಿದ್ದು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಋಣ ತೀರಿಸುವ ಕಾಲ ಬಂದೊದಗಿರುವುದರಿಂದ ಆಸೆ ಹೊತ್ತ ಸಾಮಾನ್ಯ ವರ್ಗದ ಸದಸ್ಯರು ಗಾಂಧಿ ತತ್ವ ಪರಿಪಾಲನೆ ಮಾಡುವಂತಹ ಪರಿಸ್ಥಿತಿ ಬಂದೊದಗಿದೆ.
ತುಮಕೂರು ಜಿಲ್ಲೆಯಲ್ಲಿಯೇ ಅತಿದೊಡ್ಡ ಎರಡನೇ ನಗರಸಭೆ ಸಿರಾ. ಜಿಲ್ಲಾ ಕೇಂದ್ರವಾಗುವ ಕನಸು ಹೊತ್ತು, ಸ್ವಚ್ಚ ನಗರದಿಂದ ಹಿಂಬಡ್ತಿ ಪಡೆದು ಗಬ್ಬು ನಗರವಾಗಿ ರಾರಾಜಿಸುತ್ತಿದೆ. ೩೧ ವಾರ್ಡ್‌ಗಳನ್ನು ಹೊಂದಿರುವ ಸಿರಾ ನಗರಸಭೆಗೆ ಬಿಜೆಪಿ ಶಾಸಕ ಡಾ. ಸಿ.ಎಂ. ರಾಜೇಶ್‌ಗೌಡ ಅಧಿಕಾರಾವಧಿಯಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿಯ ನಾಲ್ಕು ಮಂದಿ ಸದಸ್ಯರು ಗೆದ್ದಿದ್ದು ಇತಿಹಾಸವಾದರೂ ಜೆಡಿಎಸ್ ಮತ್ತು ಪಕ್ಷೇತರರ ಜತೆ ಸೇರಿ ಸಮ್ಮಿಶ್ರ ಆಡಳಿತ ನಡೆಸುವಂತಾಯಿತು. ಮೊದಲ ಅವಧಿಗೆ ಪರಿಶಿಷ್ಟ ಜಾತಿಗೆ ಸೀಮಿತವಾದ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ ಬಿ. ಆಂಜಿನಪ್ಪ ಆಯ್ಕೆಯಾಗಿ, ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿಯ ಅಂಬುಜಾ ನಟರಾಜ್ ಅಲಂಕರಿಸಿದರು.
ತದ ನಂತರ ಬದಲಾದ ರಾಜಕೀಯ ಸನ್ನಿವೇಶಗಳಿಂದಾಗಿ ಶಾಸಕರು ಬದಲಾದಂತೆ ಅಧ್ಯಕ್ಷ ಬಿ. ಆಂಜಿನಪ್ಪ ರೋಸಿ ಹೋಗಿ ಸ್ವತಃ ರಾಜೀನಾಮೆ ನೀಡುವಂತಾದ ಪರಿಣಾಮ ನಗರಸಭಾಡಳಿತ ಕೈ ವಶವಾಯಿತು.
ಈ ಸಮಯದಲ್ಲಿ ದಲಿತ ಸಮುದಾಯಕ್ಕೆ ಅಧ್ಯಕ್ಷರಾಗುವ ಅವಕಾಶವಿದ್ದರೂ ಸಹ ಸದಸ್ಯರಾದ ಲಕ್ಷ್ಮೀಕಾಂತ್ ಅವಕಾಶ ಪಡೆಯಲು ಸಾಧ್ಯವಾಗದೇ ವಂಚಿತರಾದದ್ದು ದುರ್ದೈವವಾದರೆ, ಸಾಮಾನ್ಯ ವರ್ಗಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಸಮ್ರೀನ್ ಖಾನ್ ಆಯ್ಕೆಯಾಗುವ ಮೂಲಕ ಲಡ್ಡು ಬಂದು ಬಾಯಿಗೆ ಬಿದ್ದಂತಾಯಿತು.
ಕಳೆದ ಎರಡೂವರೆ ವರ್ಷದ ಆಡಳಿತದ ಅವಧಿಯಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ನೀತಿ ಸಂಹಿತೆಗೆ ಸುಮಾರು ಆರು ತಿಂಗಳು ವ್ಯರ್ಥವಾದರೆ, ಇನ್ನುಳಿದ ಎರಡು ವರ್ಷ ಆಡಳಿತ ನಿಯಮ ಬಾಹಿರ ಲೇಔಟ್ ನಿರ್ಮಾಣ, ಅಕ್ರಮ ಖಾತೆ, ಅನುದಾನ ದುರ್ಬಳಕೆ, ಅಧ್ಯಕ್ಷ-ಸದಸ್ಯರ ನಡುವಿನ ಹಗ್ಗಜಗ್ಗಾಟ ಹಾಗೂ ಅಧ್ಯಕ್ಷೆ-ಆಯುಕ್ತರ ನಡುವಿನ ಹೋರಾಟ ತಿಕ್ಕಾಟಗಳಲ್ಲಿ ಮುಳುಗಿ ಹೋಗಿದ್ದು, ಅಲ್ಲಿಗೆ ಒಂದು ಅವಧಿಗೆ ಇತಿಶ್ರೀ ಹಾಡಿದ್ದು ಆಯಿತು.
ಇನ್ನುಳಿದ ಮತ್ತೊಂದು ಅವಧಿಯ ಅಧಿಕಾರಕ್ಕೆ ತಾಳ-ಮೇಳ ಚುರುಕುಗೊಂಡಿದೆ. ಪ್ರಸ್ತುತ ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾದ ಸದಸ್ಯರು-೧೩, ಶಾಸಕರು, ವಿಧಾನ ಪರಿಷತ್ ಸದಸ್ಯರು ಇವರ ಜೊತೆಯಲ್ಲಿ ೬ ಮಂದಿ ಪಕ್ಷೇತರರು ಸೇರಿ ಈಗ ೨೧ ಸಂಖ್ಯಾಬಲವನ್ನು ಕಾಂಗ್ರೆಸ್ ಪಕ್ಷ ಹೊಂದಿದ್ದರೆ, ಬಿಜೆಪಿಯು ೪ ಮಂದಿ, ಜೆಡಿಎಸ್‌ನ ೬ ಹಾಗೂ ಸಂಸದರು ಸೇರಿ ಒಟ್ಟು ೧೧ ಮಂದಿ ಸಂಖ್ಯಾಬಲ ಹೊಂದಿದೆ.
ಹಿಂದುಳಿದ ವರ್ಗದ ಕಡೆಗಣನೆ
ಸುಮಾರು ೨೦ ವರ್ಷಗಳಿಂದ ೪ ನಗರಸಭೆ ಚುನಾವಣೆಗಳು ನಡೆದು ಹೋಗಿದ್ದು, ಒಂದು ಬಾರಿಯಾದರೂ ಹಿಂದುಳಿದ ವರ್ಗಕ್ಕೆ ಅವಕಾಶ ಲಭಿಸದೇ ಇರುವುದು ದುರಂತದ ಸಂಗತಿ. ಇನ್ನು ಸಾಮಾನ್ಯ ಮೀಸಲಾತಿಯಲ್ಲಿಯೇ ಅವಕಾಶ ಕಲ್ಪಿಸಿಕೊಡಿ ಎಂದು ದಿವಂಗತ ಪಾರ್ವತಮ್ಮ ಎಸ್.ಕೆ. ದಾಸಪ್ಪ ಅಂಗಲಾಚಿ ಬೇಡಿಕೊಂಡಿದ್ದರೂ ಸಹ ಕಡೆಗಣಿಸಿದ್ದು ಇಂದಿಗೂ ಇತಿಹಾಸದ ಗರ್ಭದಲ್ಲಿ ಅಡಗಿ ಹೋಗಿದೆ. ಹಾಗಾಗಿ ಪ್ರಸ್ತುತ ಸದಸ್ಯೆ ತೇಜು ಭಾನುಪ್ರಕಾಶ್ ಈ ಬಾರಿಯಾದರೂ ಅವಕಾಶ ಪಡೆಯಬೇಕೆಂಬ ಉದ್ದೇಶದಿಂದ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ದಲಿತರನ್ನು ದೂರ ತಳ್ಳಿದ ಶಾಸಕರು
ಕಳೆದ ನಗರಸಭಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದರೂ ಸಹ ಯಾವುದೇ ರಾಜಕೀಯ ಪಕ್ಷಗಳು ಅವಕಾಶ ಮಾಡಿಕೊಡದೇ ಇದ್ದು, ಅಹಿಂದ ಶಾಸಕ ಜಯಚಂದ್ರ ಸಹ ದಲಿತ ಸಮುದಾಯ ಕಡೆಗಣಿಸಿರುವುದು ಕಂಡು ಬರುತ್ತದೆ. ಇದರಿಂದ ದಲಿತರ ಸಂಘಟನೆಯಲ್ಲಿಯೇ ಬಂದ ಸದಸ್ಯ ಲಕ್ಷ್ಮೀಕಾಂತ್ ಕೊನೆಗೂ ಅವಕಾಶ ಪಡೆಯದೇ ವಂಚಿತರಾದದ್ದು ವಿಷಾದನೀಯ.
ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ
ಕಾಂಗ್ರೆಸ್‌ನ ೧೩ ಮಂದಿ ಸದಸ್ಯರಲ್ಲಿ ಅತಿ ಹೆಚ್ಚು ಅಲ್ಪಸಂಖ್ಯಾತ ಸದಸ್ಯರೇ ಇರುವ ಕಾರಣ ಹಾಗೂ ಹಿರಿಯ ಕಾಂಗ್ರೆಸ್ ಮುತ್ಸದ್ದಿ ದಿವಂಗತ ಅಲ್ಲಾಭಕಾಶ್ ಕೆ. ಪ್ಯಾರೂ ಅವರ ಋಣ ತೀರಿಸುವ ಕಾರಣ ಅದೇನೆ ಇರಲಿ ಈ ಬಾರಿ ಅಲ್ಪಸಂಖ್ಯಾರದ್ದೇ ಅಧ್ಯಕ್ಷ ಸ್ಥಾನ ಎಂಬುದು ಹಗಲಿನಷ್ಟೆ ಸತ್ಯ.
ಇನ್ನುಳಿದಂತೆ ಬಿಜೆಪಿಯ ಉಮಾ ವಿಜಯರಾಜ್, ಕಾಂಗ್ರೆಸ್ ಬೆಂಬಲಿತ ಎಸ್.ಎಸ್. ಅಜಯ್ ಕುಮಾರ್ ಮತ್ತು ಎಸ್.ಎಲ್. ರಂಗನಾಥ್ ಇವರು ಸಹ ರೇಸ್‌ನಲ್ಲಿದ್ದು, ಎಷ್ಟೇ ಪ್ರಯತ್ನಪಟ್ಟರೂ ಒಣ ಮರಕ್ಕೆ ಗಿಣಿ ಕಾದಂಗೆ ಎಂಬುದು ಸತ್ಯ ಸಂಗತಿ.
ಇನ್ನುಳಿದಂತೆ ಮಾಜಿ ಪುರಸಭಾಧ್ಯಕ್ಷ ಜೆಡಿಎಸ್‌ನ ಆರ್. ರಾಮು ನನ್ನದು ಒಂದಿರಲಿ ಎಂದು ಟವಲ್ ಹಾಕುವುದು ಖಚಿತ. ಏಕೆಂದರೆ ಅಧ್ಯಕ್ಷ ಸ್ಥಾನ ಸಿಗುವುದು ಕನಸಿನ ಮಾತು. ಆದರೂ ಸಹ ಸೋಲಿನಲ್ಲಿಯೇ ಲಾಭ ಮಾಡಿಕೊಳ್ಳುವ ಚಾಣಾಕ್ಷ ರಾಜಕಾರಣಿ.
ಒಟ್ಟಾರೆ ಕಾಂಗ್ರೆಸ್ ಪಕ್ಷದ ಅಜೆಂಡಾ ಏನೆಂಬುದು ಗೊತ್ತಿರುವ ಸಂಗತಿ. ಜತೆಗೆ ಸಾಮಾನ್ಯ ವರ್ಗದಲ್ಲಿ ಸಂಪನ್ಮೂಲ ಒದಗಿಸುವ ಸಾಮರ್ಥ್ಯ ಬೇರೆ ಯಾರಲ್ಲೂ ಇಲ್ಲದಿರುವುದರಿಂದ ಅಲ್ಪಸಂಖ್ಯಾತರದ್ದೇ ದರ್ಬಾರು ಉಳಿದವರೆಲ್ಲಾ ಬೀದಿ ಪಾಲು ಎಂಬುದು ಜನಜನಿತವಾಗಿದೆ.