ಗಣೇಶ ಮೂರ್ತಿಗಳಿಗೆ ಹೆಚ್ಚಿದ ಬೇಡಿಕೆ
ಮಾಲೂರು.ಸೆ೬: ತಾಲ್ಲೂಕಿನಲ್ಲಿ ಸೆ.೦೬, ೦೭ರಂದು ಅದ್ದೂರಿಯಾಗಿ ಗೌರಿ ಗಣೇಶ ಹಬ್ಬ ಆಚರಣೆ ಹಿನ್ನಲೆಯಲ್ಲಿ ಗಣೇಶ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬಂದಿದೆ. ಮೂರ್ತಿಗಳನ್ನು ಈಗಗಲೇ ವ್ಯಾಪಾರಸ್ಥರು ಮುಖ್ಯರಸ್ತೆಯ ಬದಿಗಳಲ್ಲಿ ಪುರಸಭೆ ಪೋಲಿಸ್ ಠಾಣೆಯಲ್ಲಿ ಅನುಮತಿ ಪಡೆದು ಟೆಂಟುಗಳನ್ನು ಹಾಕಿ ಅಂಗಡಿಗಳನ್ನು ಇಟ್ಟಿದ್ದು, ಗೌರಿ ಗಣೇಶ ಮೂರ್ತಿಗಳನ್ನು ಖರೀದಿಸಲು ಗ್ರಾಹಕರು ಮುಗಿಬಿದ್ದಿರುವುದರಿಂದ ಹಬ್ಬದ ಸಂಭ್ರಮ ಜೋರಾಗಿದೆ.
ಗಣೇಶ ಮೂರ್ತಿಗಳ ತಯಾರಿಕರಿಗೆ ಈ ವರ್ಷ ಹೆಚ್ಚಿನ ಆಧಾಯದ ನಿರೀಕ್ಷೆ ಹೊಂದಿದ್ದಾರೆ. ವರ್ಷದಿಂದ ಗಣೇಶ ಮೂರ್ತಿಗಳನ್ನು ತಯಾರಿಸಿರುವವರಿಗೆ ಈಗಾಗಲೇ ಬಹುತೇಕ ಕಡೆಗಳಲ್ಲಿ ತಯಾರಿಸಿರುವ ವಿವಿಧ ಭಂಗಿಗಳಲ್ಲಿರುವ ಗಣೇಶನ ಮೂರ್ತಿಗಳ ಭರ್ಜರಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ತಯಾರಕರು ಸಹ ದೊಡ್ಡ ದೊಡ್ಡ ಗಣೇಶನ ಮೂರ್ತಿಗಳಿಗೆ ಕಳೆದ ವರ್ಷಕ್ಕಿಂತ ಬೆಲೆ ಹೆಚ್ಚಾಗಿದೆ. ಅಂತೂ ಈ ವರ್ಷ ಗಣೇಶನ ತಯಾರಿಕರು ಒಳ್ಳೆಯ ಲಾಭಗಳಿಸಲು ಮುಂದಾಗಿದ್ದಾರೆ. ಮಾರುಕಟ್ಟೆಯಲ್ಲಿ ೧ ಅಡಿಯಿಂದ ೧೦ ಅಡಿಯವರೆಗೆ ವಿವಿಧ ವಿನ್ಯಾಸಗಳ ಗಣಪತಿ ಮುರ್ತಿಗಳ ಮಾರಟವು ಭರದಿಂದ ಸಾಗಿದೆ. ಮುಕ್ಕಾಲು ಅಡಿ ೨೦೦ ರೂಗಳಿಂದ ೫ ಅಡಿ ೧೦೦೦೦, ೧೦ ಅಡಿಗಳ ವರೆಗಿನ ವಿವಿಧ ರೀತಿಯ ವಿನ್ಯಾಸದ ಗಣಪತಿ ಮೂರ್ತಿಗಳು ಮಾರಾಟವಾಗುತ್ತಿದೆ.
ಮಾಲೂರು ಪಟ್ಟಣದ ಕೃಷ್ಣಬಾಬು ಸೇರಿದಂತೆ ಚಿಕ್ಕತಿರುಪತಿ ಗ್ರಾಪಂ ವ್ಯಾಪ್ತಿಯ ಎಟ್ಟಕೊಡಿ ಗ್ರಾಮದ ಕಾಂತರಾಜ್, ಕೆ.ರಾಮಯ್ಯ, ಎಂ.ವೆಂಕಟೇಶ್, ಆರ್.ಶ್ರೀನಿವಾಸ್, ಕೃಷ್ಣಮೂರ್ತಿ, ಎಂ.ಮುನಿರಾಜ್ ಸೇರಿದಂತೆ ಹಲವು ಕುಟುಂಬದವರು ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಂಡಿಸಿದ್ದಾರೆ. ಇಲ್ಲಿ ತಯಾರಾಗುವ ಮಣ್ಣಿನ ಗಣಪತಿ ಮೂರ್ತಿಗಳಿಗೆ ರಾಜ್ಯವೂ ಸೇರಿದಂತೆ ಹಲವಾರು ರಾಜ್ಯಗಳಿಂದ ಹೆಚ್ಚಿನ ಬೇಡಿಕೆ ಇರುವುದರಿಂದ ಹಾಗೂ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಈ ವರ್ಷದಲ್ಲಿ ೨ ಲಕ್ಷಕ್ಕೂ ಹೆಚ್ಚಿನ ಮಣ್ಣಿನ ಗಣೇಶನ ಮೂರ್ತಿಗಳು ತಯಾರಾಗಿದ್ದು, ಕೋಟಿ ರೂ.ಗಳ ವ್ಯಾಪಾರ ವಹಿವಾಟು ನಡೆಸಲಾಗಿದೆ.
ಗಣಪತಿಯ ರೂಪಗಳು : ವಿದ್ಯಾಗಣಪ, ಹಂಸವಾಹನ, ನಂದಿವಾಹನ, ಮಯೂರ, ಗಜರೂಢ, ಜಿಂಕೆವಾಹನ, ಮೂಷಕವಾಹನ, ಸಿಂಹವಾಹನ, ಗಣೇಶನ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬಂದಿದೆ. ಆಧುನಿಕತೆಗೆ ತಕ್ಕಂತೆ ಹಲವಾರು ರೂಪಗಳಲ್ಲಿ ಪರಿಸರ ಸ್ನೇಹಿ ಗಣಪತಿಗಳನ್ನು ತಯಾರಿಸಲಾಗುತ್ತಿದೆ. ಹಲವು ಭಾಗಳಿಗೆ ಇಲ್ಲಿನ ಮೂರ್ತಿಗಳು ರಫ್ತ್ತಾಗುತ್ತಿರುವುದು ಇಲ್ಲಿನ ವಿಶೇಷವಾಗಿದೆ. ಪ್ರತಿವರ್ಷವು ಚುನಾವಣೆ ವರ್ಷದಲ್ಲಿ ರಾಜಕಾರಣಿಗಳು ಸಾರ್ವಜನಿಕರಿಗೆ, ಸಂಘ ಸಂಸ್ಥೆಗಳಿಗೆ ಗಣೇಶ ಮೂರ್ತಿಗಳನ್ನು ಉಚಿತವಾಗಿ ನೀಡುತ್ತಿದ್ದರು, ಆದರೆ ಈ ಬಾರಿ ಗಣೇಶ ಹಬ್ಬಕ್ಕೆ ಯಾವ ರಾಜಕಾರಣಿಗಳು ಗಣೇಶ ಮೂರ್ತಿಗಳನ್ನು ವಿತರಿಸಿಲ್ಲ.
ಗೌರಿ ಗಣೇಶ ಹಬ್ಬಕ್ಕೆ ಸಂಘ ಸಂಸ್ಥೆಗಳು,ಸಾರ್ವಜನಿಕರು ಪರಿಸರ ಸ್ನೇಹಿ ಮಣ್ಣಿನ ಗಣಪನ ಮೂರ್ತಿಗಳನ್ನು ಇಟ್ಟು ಪೂಜೆ ಮಾಡಿ ವಿಸರ್ಜನೆ ಮಾಡುವ ವೇಳೆ ಪುರಸಭೆಯು ಗಣೇಶ ವಿಸರ್ಜನೆಗೆ ನಿಗಧಿ ಪಡಿಸಿರುವ ಎಪಿಎಂಸಿ ಪ್ರಾಂಗಣ ಹಿಂಭಾಗದಲ್ಲಿರುವ ಮೂರಾರಾಯನ ತೋಪಿನ ಕಲ್ಯಾಣಿಯನ್ನು ಸ್ವಚ್ಚಗೊಳಿಸಿ ನೀರನ್ನು ಬಿಡಲಾಗಿದೆ. ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಪುರಸಭೆಯಿಂದ ಈಜು ಬರುವ ಪೌರ ಕಾರ್ಮಿಕರನ್ನು ನಿಯೋಜಿಸಿದೆ. ಪ್ರತಿಯೊಬ್ಬರು ಗಣೇಶ ಮೂರ್ತಿಗಳನ್ನು ಪುರಸಭೆ ನಿಗಧಿ ಪಡಿಸಿದ ಸ್ಥಳದಲ್ಲಿಯೇ ವಿಸರ್ಜನೆ ಮಾಡಬೇಕು, ಅಲ್ಲದೆ ಗಣೇಶೋತ್ಸವ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಹಿತ ದೃಷ್ಟಿಯಿಂದ ಪೇಪರ್ ಪ್ಲೇಟ್ ಗ್ಲಾಸ್‌ಗಳನ್ನು ಬಳಸುವುದರ ಮೂಲಕ ಪರಸರವನ್ನು ಕಾಪಾಡಬೇಕು ಎಂದು ಮುಖ್ಯಾಧಿಕಾರಿ ನವೀನ್ ಚಂದ್ರ ತಿಳಿಸಿದ್ದಾರೆ.
ಪೋಟೊ ೨. ಮಾಲೂರು ಪಟ್ಟಣದ ಮುಖ್ಯರಸ್ತೆಯ ಬದಿಯಲ್ಲಿ ಪ್ರವೀಣ್ ಕುಂಬಾರ ಅವರು ಮಾರಾಟಕ್ಕಾಗಿ ಇಟ್ಟಿರುವ ಗಣಪತಿ ಮೂರ್ತಿಗಳು.