ಆರೋಗ್ಯವಂತ ಜೀವನಕ್ಕಾಗಿ ಯೋಗ ಕಲಿಸಲು ಬದ್ಧ
ಕೋಲಾರ,ಸೆ,೬- ಮಾನಸಿಕ ಮತ್ತು ದೈಹಿಕ ಶಕ್ತಿ ವೃದ್ಧಿಗೆ ಯೋಗಾಭ್ಯಾಸ ಅತ್ಯವಶ್ಯಕವಾಗಿದ್ದು ಯಾರೇ ಬಯಸಿ ಬಂದರೂ ಅವರಿಗೆ ಯೋಗಾಭ್ಯಾಸ ಕಲಿಸಲು ಬದ್ದ ಎಂದು ಬೆಂಗಳೂರಿನ ಪ್ರಸಿದ್ಧ ಯೋಗ ಗುರು ಶ್ರೀ ಯೋಗಿ ಆನೀಷ್ ಹೇಳಿದರು.
ಬಂಗಾರಪೇಟೆಯ ಕನ್ನಡ ಸಂಘದಿಂದ ಕನ್ನಡ ಕಾರ್ಯಕ್ರಮಗಳ ರಸದೌತಣವಾದ ೧೨೪ನೇ ತಿಂಗಳ ಕನ್ನಡ ಹಬ್ಬದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಯೋಗವನ್ನು ಕಲಿತವರು ದೀರ್ಘಕಾಲ ಮಾನಸಿಕವಾಗಿ, ದೈಹಿಕವಾಗಿ ಸದೃಢರಾಗಿರುತ್ತಾರೆಂದು ಅಭಿಪ್ರಾಯಪಟ್ಟರು.
ನಮ್ಮ ಪೂರ್ವಿಕರು ಯೋಗವನ್ನು ಪ್ರತಿದಿನ ಅಭ್ಯಾಸ ಮಾಡುತ್ತಿದ್ದರಿಂದ ಆರೋಗ್ಯವಂತ ಜೀವನ ಸಾಗಿಸುತ್ತಿದ್ದರು, ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರಮೋದಿ, ಪ್ರಾಚೀನ ಕಾಲದ ಯೋಗಾಸನಕ್ಕೆ ವಿಶೇಷ ಮಾನ್ಯತೆ ಸಿಗಲು ಪ್ರಯತ್ನಿಸಿದ್ದರಿಂದ ಜಗತ್ತಿನಾದ್ಯಂತ ಯೋಗ ದಿನವನ್ನು ಆಚರಣೆ ಮಾಡಲು ಅವಕಾಶ ಲಭಿಸಿದೆ ಎಂದು ಪ್ರಧಾನಿಯನ್ನು ಶ್ಲಾಘಿಸಿದ ಅವರು ಯೋಗ ಕಲಿಯಲು ಜನತೆ ಆಸಕ್ತಿ ತೋರಿದಲ್ಲಿ ನನ್ನಲ್ಲಿರುವ ಜ್ಞಾನವನ್ನು ಧಾರೆ ಎರೆಯುವುದಾಗಿ ತಿಳಿಸಿದರು.
ಬಂಗಾರಪೇಟೆ ಕನ್ನಡ ಸಂಘ ಉತ್ತಮ ರೀತಿಯಲ್ಲಿ ನಾಡು,ನುಡಿಗಾಗಿ ಸೇವೆ ಸಲ್ಲಿಸುತ್ತಿದೆ, ಕಳೆದ ೧೦ ವರ್ಷ ೪ ತಿಂಗಳಿಂದ ಪ್ರತಿ ತಿಂಗಳ ೧ನೇ ತಾರೀಖು ಕನ್ನಡ ಹಬ್ಬದ ಮೂಲಕ ಜನತೆಗೆ ಸಾಂಸ್ಕೃತಿಕ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ, ಈ ಕಾರ್ಯವನ್ನು ಅತ್ಯಂತ ಶ್ರದ್ಧೆಯಿಂದ ಆಚರಿಸುವ ಮೂಲಕ ಕನ್ನಡ ಸಂಘದ ಅಧ್ಯಕ್ಷ ಪಲ್ಲವಿಮಣಿ ಅವರು ಮಾದರಿ ಆಗಿದ್ದಾರೆಂದು ಸಂತಸ ವ್ಯಕ್ತಪಡಿಸಿದರು.
ಮನ್ವಂತರ ಪ್ರಕಾಶನದ ಅಧ್ಯಕ್ಷ, ಪಾ.ಶ್ರೀ.ಅನಂತರಾಮ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಆನ್ ಲೈನ್ ತರಗತಿಗೆ ಅನುಕೂಲವಾಗಲಿ ಎಂದು ಮಕ್ಕಳಿಗೆ ತಂದುಕೊಟ್ಟಿರುವ ಮೊಬೈಲ್ ಫೋನ್‌ಗಳನ್ನು ಅನೇಕರು ದುರುಪಯೋಗ ಪಡಿಸಿಕೊಂಡು ದಾರಿ ತಪ್ಪುತ್ತಿದ್ದಾರೆ, ಪೋಷಕರು ಮಕ್ಕಳ ಮೇಲೆ ನಿಗಾ ವಹಿಸದಿದ್ದರೆ ಮುಂದೊಂದು ದಿನ ಪಶ್ಚಾತ್ತಾಪ ಪಡಬೇಕಾಗಬಹುದು ಎಂದು ಎಚ್ಚರಿಸಿದರು.
ಕನ್ನಡ ಸಂಘದ ಅಧ್ಯಕ್ಷ ಡಾ.ಸುಬ್ರಮಣಿ (ಪಲ್ಲವಿ ಮಣಿ) ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಸಂಘ ಎಲ್ಲಾ ಜಾತಿ.ಧರ್ಮದ ಜನರ ಸಹಕಾರದಿಂದ ಕನ್ನಡಮ್ಮನ ಹಬ್ಬವನ್ನು ಪ್ರತಿ ತಿಂಗಳ ೧ನೇ ತಾರೀಖು ಆಚರಿಸುತ್ತಿದೆ, ನಾಡು,ನುಡಿಯ ಬಗ್ಗೆ ಜನತೆಯಲ್ಲಿ ಪ್ರೀತಿ ಮತ್ತು ಅರಿವು ಮೂಡಿಸಲು ಕನ್ನಡಮ್ಮನ ಹಬ್ಬದ ಪ್ರಯುಕ್ತ ಪ್ರತಿ ತಿಂಗಳು ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ವಿವರಿಸಿದರು.
ಪಟ್ಟಣದ ಕುವೆಂಪು ವೃತ್ತದಲ್ಲಿ ಪ್ರತಿವರ್ಷ ಕನ್ನಡದ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಗುತ್ತಿದೆ. ಆದರೆ ೧೨೪ನೇ ಕಾರ್ಯಕ್ರಮ ನಡೆಸುತ್ತಿರುವ ವೇಳೆ ಅನಾಮಧೇಯ ವ್ಯಕ್ತಿಯೊಬ್ಬ ಪುರಸಭೆಗೆ ಮೂಖರ್ಜಿ ನೀಡಿ ಕುವೆಂಪು ವೃತ್ತದಲ್ಲಿ ಕಾರ್ಯಕ್ರಮ ನಡೆಯುವುದರಿಂದ ಸಾರ್ವಜನಿಕ ಕೆಲಸಕ್ಕೆ ಅಡಚಣೆ ಆಗುತ್ತದೆ ಎಂದು ದೂರು ನೀಡಿರುವ ವಿಷಯ ಸಾಧುವಲ್ಲ ಎಂದರು.
ಬಂಗಾರಪೇಟೆಯ ಎಸ್‌ಡಿಸಿ ಕಾಲೇಜಿನ ವಿದ್ಯಾರ್ಥಿಗಳು, ಶೈನಿಂಗ್ ಸ್ಟಾರ್ ಡ್ಯಾನ್ಸ್ ಅಕಾಡೆಮಿ, ನಾನಿ ಡ್ಯಾನ್ಸ್ ಅಕಾಡೆಮಿ, ವೆಂಕಟ್ ಡ್ಯಾನ್ಸ್ ಇನ್ಸ್‌ಟಿಟ್ಯುಟ್, ಡ್ತಾನ್ಸ್ ಫ್ರೀಕ್ ಅಕಾಡೆಮಿ ಹಾಗೂ ಕೆಜಿಎಫ್‌ನ ಸ್ಟೆಪ್ ಬ್ರೇಕರ್‍ಸ್ ತಂಡದ ಕಲಾವಿದರು ನಡೆಸಿ ಕೊಟ್ಟ ನ್ಯತ್ಯ ಪ್ರದರ್ಶನ ಅಮೋಘವಾಗಿತ್ತು.
ಇತ್ತೀಚೆಗೆ ನಡೆದ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಪಲ್ಲವಿ ಚಾನೆಲ್ ವತಿಯಿಂದ ಹಮ್ಮಿಕೊಂಡಿದ್ದ ವರಮಹಾಲಲಕ್ಷ್ಮೀ ಅಲಂಕಾರ ಸ್ಪರ್ಧೆಯಲ್ಲಿ ವಿಜೇತರಾವರಿಗೆ ಪಲ್ಲವಿ ಚಾನೆಲ್ ಮಾಲೀಕ ಪಲ್ಲವಿ ಮಣಿ ಅವರು ಬೆಳ್ಳಿ ನಾಣ್ಯದ ಜೊತೆಗೆ ಫೋಟೋ ಪ್ರೇಮ್ ನೀಡಿದರು.
ಕಳೆದ ೧೨೩ ತಿಂಗಳಿಂದ ಬಂಗಾರಪೇಟೆಯಲ್ಲಿ ಕನ್ನಡ ಹಬ್ಬವನ್ನು ಆಚರಿಸುವ ಮೂಲಕ ಮಾದರಿ ಆಗಿರುವ ಕನ್ನಡ ಸಂಘದ ಅಧ್ಯಕ್ಷ ಪಲ್ಲವಿ ಮಣಿ ಅವರಿಗೆ ಮನ್ವಂತರ ಪ್ರಕಾಶನ ಕೋಲಾರ ಇವರಿಂದ ಕನ್ನಡ ಪರಿಚಾರಕ ಬಿರುದು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ಯಾಮ್ ಆಸ್ಪತ್ರೆಯ ಮುಖ್ಯಸ್ಥ ಡಾ.ಅಶೋಕ ವರ್ಧನ್, ಎಸ್.ಡಿ.ಸಿ ಕಾಲೇಜಿನ ಪ್ರಾಂಶುಪಾಲ ಜಗದೀಶ್, ಕನ್ನಡ ಸಂಘದ ಉಪಾಧ್ಯಕ್ಷ ನಂಜಪ್ಪ, ಪ್ರಧಾನ ಕಾರ್ಯದರ್ಶಿ ಹೇಮಂತ್, ಪದಾಧಿಕಾರಿಗಳಾದ ಮುರಳೀಧರ್, ಪ್ರಸಾದ್, ವೈ.ಎ.ರಮೇಶ್, ವಕೀಲರಾದ ವೇಣುಗೋಪಾಲ್, ಜಯಪ್ರಕಾಶ್, ಕೋಲಾರದ ಪರ್ವತ್ ಸ್ಟೋರ್‍ಸ್ ಮಾಲೀಕ ಆನಂದರೆಡ್ಡಿ, ಸೂರ್ಯನಾರಾಯಣರಾವ್, ಶ್ರೀನಿವಾಸರಾವ್, ವೆಂಕಟೇಶ್ವರಾಚಾರಿ, ಮನ್ವಂತರ ಪ್ರಕಾಶನದ ಪ್ರಧಾನ ಸಂಚಾಲಕ ಎಸ್.ಎನ್.ಪ್ರಕಾಶ್ ಇದ್ದರು.