ಸೆ.೨೯ ಸ್ತನ ಕ್ಯಾನ್ಸರ್ ಜಾಗೃತಿಗೆ ಪಿಂಕ್ ಪವರ್ ರನ್
ಬೆಂಗಳೂರು, ಸೆ.೬- ವಿಶ್ವದಾದ್ಯಂತ ದಿನೇ ದಿನೇ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಮಹತ್ವಾಕಾಂಕ್ಷೆಯೊಂದಿಗೆ ಸುಧಾರೆಡ್ಡಿ ಫೌಂಡೇಶನ್ ಮತ್ತು ಮೆಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ (ಎಂಇಐಎಲ್) ಫೌಂಡೇಶನ್ ಇದೇ ೨೯ರಂದು ಬೃಹತ್ ಪ್ರಮಾಣದ ಪಿಂಕ್ ಪವರ್ ರನ್ ಏರ್ಪಡಿಸಿದ್ದು ಆ ಮೂಲಕ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸುವ ಗುರಿ ಹೊಂದಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಧಾರೆಡ್ಡಿ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷೆ ಸುಧಾರೆಡ್ಡಿ ಮತ್ತು ಒಲಿಂಪಿಕ್ಸ್ ಪದಕ ವಿಜೇತರಾಗಿ ಕ್ರೀಡಾಪಟು ಪಿ.ವಿ. ಸಿಂಧು, “ಪಿಂಕ್ ಪವರ್ ರನ್ ಮೂರು ವಿಭಿನ್ನ ವಿಭಾಗಗಳನ್ನು ಒಳಗೊಂಡಿರುತ್ತದೆ- ೩ ಕಿಮೀ, ೫ ಕಿ.ಮೀ ಮತ್ತು ೧೦ ಕಿ.ಮೀ ಓಟದಲ್ಲಿ ವಿವಿಧ ವಯಸ್ಸಿನವರು ಈ ಜಾಗೃತಿ ಓಟದಲ್ಲಿ ಭಾಗವಹಿಸಬಹುದಾಗಿದ್ದು, ಓಟದಲ್ಲಿ ಪಾಲ್ಗೊಳ್ಳುವವರಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ವಿವರಿಸಿದರು.
ಈ ಬೃಹತ್ ಓಟ ಮತ್ತು ಗುಲಾಬಿ ಪಕ್ಷಿ ಸೃಷ್ಟಿ ಮೂಲಕ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸುವ ಉದ್ಧೇಶ ಹೊಂದಲಾಗಿದ್ದು, ಇದರಿಂದ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲಾಗುವುದು. ತಮ್ಮ ಈ ಪ್ರಯತ್ನದಲ್ಲಿ ಪಾಲ್ಗೊಳ್ಳಲಿರುವ ಹಿರಿಯ- ಕಿರಿಯರು ಸಂಪೂರ್ಣವಾಗಿ ಗುಲಾಬಿ ಬಣ್ಣದಲ್ಲಿ ಅಲಂಕರಿಸಲಾದ ಪಕ್ಷಿಯ ಬೃಹತ್ ಮಾನವ ಚಿತ್ರವನ್ನು ರಚಿಸುವ ಮೂಲಕ ಇಡೀ ಜಗತ್ತಿಗೆ ಸ್ತನ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿನ ಐಕ್ಯತೆ ಪ್ರದರ್ಶಿಸಲಾಗುವುದು ಎಂದರು.
ಯುನಿಸೆಫ್‌ನ ಅಂತಾರಾಷ್ಟ್ರೀಯ ಮಂಡಳಿಯ ಸದಸ್ಯೆ ಮತ್ತು ಸಮಾಜ ಸೇವಕಿಯಾಗಿರುವ ಸುಧಾರೆಡ್ಡಿ, ಸ್ತನ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಆರಂಭಿಕ ಪತ್ತೆ ಮತ್ತು ನಿಯಮಿತ ತಪಾಸಣೆಯ ಮಹತ್ವವನ್ನು ಒತ್ತಿ ಹೇಳಿ, ಈ ಬಗ್ಗೆ ಅರಿವು ಅಗತ್ಯವಾಗಿದೆ. “ಪಿಂಕ್ ಪವರ್ ರನ್ ಕೇವಲ ಒಂದು ಓಟವಲ್ಲ, ಇದು ಬದುಕುಳಿದವರಿಗೆ ತಮ್ಮ ಸ್ಪೂರ್ತಿದಾಯಕ ಕ್ಷಣಗಳನ್ನು ಹಂಚಿಕೊಳ್ಳಲು, ಇತರರಿಗೆ ಸ್ಫೂರ್ತಿ ನೀಡಲು ಮತ್ತು ಸಮುದಾಯ ಬೆಂಬಲವನ್ನು ಕೃಢೀಕರಿಸಲು ಒಂದು ವೇದಿಕೆಯಾಗಲಿದೆ ಎಂದರು.