ಸಹಕಾರ ಸಂಘದ ಬೆಳವಣಿಗೆಯಲ್ಲಿ ಷೇರುದಾರರ ಪಾತ್ರ ಮಹತ್ತರ
ಚಿಕ್ಕನಾಯಕನಹಳ್ಳಿ, ಸೆ. ೬– ಸಹಕಾರ ಸಂಘದ ಬೆಳವಣಿಗೆಯಲ್ಲಿ ಷೇರುದಾರರ ಬಂಡವಾಳ ಹಿರಿದಾಗಿರಬೇಕು ಎಂದು ನಿವೃತ್ತ ಲೆಕ್ಕ ಪರಿಶೋಧಕ ಕೆ.ವಿ. ವೆಂಕಟರಮಣಪ್ಪ ಹೇಳಿದರು.
ತಾಲ್ಲೂಕಿನ ಹುಳಿಯಾರಿನ ಶ್ರೀಸೀತಾರಾಮ ಪ್ರತಿಷ್ಠಾನ ಟ್ರಸ್ಟ್‌ನಲ್ಲಿ ಶ್ರೀ ಗಾಯತ್ರಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಬ್ರಾಹ್ಮಣ ಸಮುದಾಯ ಒಂದುಗೂಡಿ ಸಮುದಾಯದ ಏಳ್ಗೆಯ ಸದುದ್ದೇಶದಿಂದ ಆರಂಭಿಸಿದ ಈ ಸಹಕಾರ ಸಂಘ ಉತ್ತಮ ಸಾಧನೆ ತೋರಿದೆ. ಆದರೆ ಇದರ ಬೆಳವಣಿಗೆ ಇನ್ನೂ ಹೆಚ್ಚುವಂತಾಗಿ ಸಂಘದ ಸೌಲಭ್ಯ ವಿಸ್ತರಣೆಯಾಗಬೇಕು. ಷೇರುದಾರರ ಹಿತಾಸಕ್ತಿಗನುಗುಣವಾಗಿ ಸಹಕಾರ ಸಂಘ ಹೆಚ್ಚು ಮಂದಿಯ ಸದಸ್ಯರನ್ನು ನೊಂದಾಯಿಸಿ ಮುಂದಿನ ದಿನಗಳಲ್ಲಿ ವಹಿವಾಟನ್ನು ದ್ವಿಗುಣಗೊಳಿಕೊಳ್ಳಬೇಕು ಎಂದರು.
ಹಿರಿಯ ನಿರ್ದೇಶಕ ಎಚ್.ಎಸ್. ಲಕ್ಷ್ಮಿನರಸಿಂಹಯ್ಯ ಮಾತನಾಡಿ, ೧೦ನೇ ವರ್ಷಕ್ಕೆ ಸಾಗುತ್ತಿರುವ ಸಂಘ ಉತ್ತಮ ಧ್ಯೇಯೋದ್ದೇಶ ಹೊಂದಿದ್ದು ಎಲ್ಲರ ಸಹಕಾರದೊಂದಿಗೆ ಮುನ್ನಡೆದಿದೆ ಎಂದರು.
ನಿವೃತ್ತ ಶಿಕ್ಷಕ ಹು.ಲ. ವೆಂಕಟೇಶಯ್ಯ ಸಂಘದ ಬೆಳವಣಿಗೆಯನ್ನು ಶ್ಲಾಘಿಸಿದರು. ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಣಿಸಿದ ಸಮುದಾಯದ ೧೦ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಹು.ಕೃ. ವಿಶ್ವನಾಥ್ ವಹಿಸಿದ್ದರು. ಸಿ.ಡಿ. ರವಿ, ರಶ್ಮಿ, ಆರ್.ಮಾನ್ಯ, ಮಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಮಂಜುನಾಥ್, ಆಡಿಟರ್ ವರದಿ ಓದಿದರು.