ಸಮಾಜ ತಿದ್ದುವಲ್ಲಿ ಶಿಕ್ಷಕರ ಪಾತ್ರ ಮಹತ್ತರ
ಮಧುಗಿರಿ, ಸೆ. ೬- ಶಿಕ್ಷಕರು ಸಮಾಜಮುಖಿಗಳು, ಸಮಾಜ ತಿದ್ದುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಸಾಹಿತಿ ಮ.ಲ.ನ ಮೂರ್ತಿ ಹೇಳಿದರು.
ಪಟ್ಟಣದ ಮಧುಗಿರಿ ವಿದ್ಯಾಸಂಸ್ಥೆಯ ಟಿ.ವಿ.ವಿ. ಬಿ.ಎಡ್. ಕಾಲೇಜಿನಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ಜ್ಞಾನದ ನಂದಾದೀಪ, ತಲೆಮಾರಿನಿಂದ ತಲೆಮಾರಿಗೆ ಅರಿವನ್ನು ವಿಸ್ತರಿಸಿ, ಅಂತಃಕರಣವನ್ನು ಅರಳಿಸಿ, ಆತ್ಮವಿಶ್ವಾಸವನ್ನು ಬೆಳೆಸಿ ಅಹಂಕಾರವನ್ನು ಲಯಗೊಳಿಸಿ, ಸತ್ಪ್ರಜೆಯನ್ನಾಗಿ ರೂಪಿಸುತ್ತಾರೆ.
ಶಿಕ್ಷಕನನ್ನು ಬ್ರಹ್ಮ ಎಂದು ಕರೆಯುತ್ತಾರೆ. ಅಕ್ಷರ ಜ್ಞಾನ, ಶಿಕ್ಷಣ, ಅನ್ನವನ್ನು ನೀಡುತ್ತದೆ. ಅದು ಎಲ್ಲ ವರ್ಗದವರಿಗೂ ಸಮಾನವಾಗಿದ್ದು, ಶಿಕ್ಷಕರು ಪ್ರಜಾಪ್ರಭುತ್ವ ವಾದಿಗಳು ಎಂದರು.
ಶಿಕ್ಷಕರ ಪಾತ್ರ ಬಹಳ ಮುಖ್ಯವಾದುದು, ಸಮಾಜವನ್ನು ಬೆಳೆಸುವಲ್ಲಿ ಜೀವನಾನುಭವದ ಪಾಠ ಎಂದರು.
ಶಿಕ್ಷಣಾರ್ಥಿ ಪಲ್ಲವಿ ಮಾತನಾಡಿ, ವಿದ್ಯಾರ್ಥಿಗಳ ಗುರಿ, ಕನಸನ್ನು ಈಡೇರಿಸಲು ಮಾರ್ಗ ಹುಡುಕಿಕೊಟ್ಟು ಜೀವನದ ಸದುಪಯೋಗಪಡಿಸಿಕೊಂಡು ಹೋಗುವುದೇ ನಿಜವಾದ ಶಿಕ್ಷಣ ಎಂದರು.
ಕೆಂಪರಾಜು ಮಾತನಾಡಿ, ಶಿಕ್ಷಕ ಜೀವಂತ ದೇವರ ಪ್ರತಿ ರೂಪ. ಮನಸ್ಸುಗಳ ಜತೆ ಗುರಿ ಈಡೇರಿಸಲು ಗುರುಗಳ ಮೇಲೆ ನಂಬಿಕೆ ಇಟ್ಟು, ಅವರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.
ಉಪನ್ಯಾಸಕ ಶಿವಾನಂದ ಮಾತನಾಡಿ, ಶಿಕ್ಷಕರಿಗೆ ಗೌರವ ಸೂಚಕವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಅರಿವೇ ಗುರು, ಕಲಿಸಲಿಕ್ಕೆ ಶಿಕ್ಷಕರ ಮಾರ್ಗದರ್ಶನವಷ್ಟೇ. ಮುಖ್ಯ ಅಂಧಕಾರವನ್ನು ಹೋಗಲಾಡಿಸಿ ಜೀವನ ಜ್ಯೋತಿಯಾಗಿಸುವ ಕರ್ತವ್ಯ ಮತ್ತು ಜೀವನ ಶಿಲ್ಪಿಯಾಗಿಸಿ, ಜ್ಞಾನ ಪ್ರಸಾರವಾಗಿಸುವ ಜವಾಬ್ದಾರಿ, ಶಿಕ್ಷಕರದ್ದು ಶಿಕ್ಷಣವಿಲ್ಲದ ಜೀವನ ನರಕ ಮಹರ್ಷಿಯಾಗುವ ಮಾರ್ಗ ಎಂದರು.
ಉಪನ್ಯಾಸಕಿ ಸೌಮ್ಯ ಮಾತನಾಡಿ, ಶಿಕ್ಷಕರಿಂದ, ಗುರು, ವಿದ್ಯೆ ವಿನಯವನ್ನು ಕಲಿಸಿಕೊಡುತ್ತದೆ. ತರಗತಿಯ ಕೊಠಡಿಯಲ್ಲಿ ದೇಶದ ಭವಿಷ್ಯ ರೂಪುಗೊಳ್ಳುತ್ತದೆ. ಶಿಕ್ಷಕರೇ ಶಿಕ್ಷಣದ ರೂವಾರಿಗಳು. ರಾಧಾಕೃಷ್ಣನ್ ರವರ ಜಯಂತಿ ಇಡೀ ಭಾರತದ ಶಿಕ್ಷಕರ ದಿನಾಚರಣೆಯಾಗಿ ದೇಶಾದ್ಯಂತ ಆಚರಿಸಲಾಗುತ್ತಿದೆ. ವಿದ್ಯಾರ್ಥಿಗಳು ಶಿಕ್ಷಕರಿಗೆ ಸ್ನೇಹಿತರಂತೆ ವರ್ತಿಸಿದರೆ ಅವರಿಂದ ಬಹುಪಯೋಗವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಧುಗಿರಿ ವಿದ್ಯಾಸಂಸ್ಥೆಯ ಎಲ್ಲ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.