ಮಾನವನ ಬದುಕಿಗೆ ಸಂವಿಧಾನ ಕೊಟ್ಟ ವಚನಕಾರರು
ತುಮಕೂರು, ಸೆ. ೬- ವಚನಕಾರರು ಮಾನವನ ಬದುಕಿಗೆ ಬೇಕಾದ ಸಂವಿಧಾನವನ್ನು ಕೊಟ್ಟವರು. ವಚನಕಾರರು ತಮ್ಮ ಸರಳವಾದ ವಚನಗಳಿಂದ ನಡೆ, ನುಡಿ, ಭಕ್ತಿ, ಆತ್ಮವಿಶ್ವಾಸ, ಮನೋವಿಕಾಸವನ್ನು ಜ್ಞಾನದ ಮೂಲಕ ಸಾಮಾನ್ಯ ಮನುಷ್ಯ ಅಸಾಮಾನ್ಯ ವ್ಯಕ್ತಿಯಾಗಿ ಬೆಳೆಯಬಹುದು ಎಂದು ಡಾ. ಸಿದ್ಧಲಿಂಗಯ್ಯ ಹೇಳಿದರು.
ತಾಲ್ಲೂಕಿನ ಕೋರಾ ಹೋಬಳಿ ಕೆಸ್ತೂರು ಶ್ರೀ ಸಿದ್ಧೇಶ್ವರ ಪ್ರೌಢಶಾಲೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ ಕನ್ನಡ ನಡೆ ಶಾಲಾ-ಕಾಲೇಜು ಕಡೆ ಸಾಹಿತ್ಯ ದೀವಿಗೆ ಸಾಪ್ತಾಹಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಚನಗಳು ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ರಚಿಸಿದ್ದಾರೆ. ಸತ್ಯದ, ಅನುಭವದ ನುಡಿಗಳೇ ವಚನಗಳು. ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ವಚನವನ್ನು ಮಕ್ಕಳಿಗೆ ಕೇಳಿಸುತ್ತಾ ಇದೊಂದು ವಚನವನ್ನು ಕಡ್ಡಾಯವಾಗಿ ಕಲಿಯುತ್ತಾ ನಿಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ನಡೆದರೆ ಸಾಕು ನಿಮ್ಮ ಬದುಕು ಉಜ್ವಲವಾಗುತ್ತದೆ. ಇಂತಹ ಬದುಕು ರೂಪಿಸುವ ಸಾವಿರಾರು ವಚನಗಳು ನಮ್ಮ ಕಣ್ಮುಂದಿವೆ. ಇಂತಹ ವಚನಗಳನ್ನು ದಿನಕ್ಕೊಂದು ವಚನ ಓದುತ್ತಾ ಹೋಗಿ ಎಂದು ತಿಳಿಸಿದರು.
ತಾಲ್ಲೂಕು ಕ.ಸಾ.ಪ. ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಸಾಹಿತ್ಯ ಪರಿಷತ್ ಬೆಳೆದು ಬಂದ ದಾರಿ, ಅದರ ವಿಸ್ತಾರವನ್ನು ಪರಿಚಯಿಸುತ್ತಾ, ವಚನಕಾರರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ನಮ್ಮ ಸಾಹಿತ್ಯ ಸಂಸ್ಕೃತಿ ಕಲೆಯಿಂದ ಇಡೀ ವಿಶ್ವವೇ ನಮ್ಮ ದೇಶವನ್ನು ಗುರುವಾಗಿ ನೋಡುತ್ತಿದೆ. ಆದ್ದರಿಂದ ಮಕ್ಕಳೇ, ನಮ್ಮ ವಿಶಾಲ ಸಾಹಿತ್ಯವನ್ನು ಓದುವುದರ ಮುಖೇನ ಅಳವಡಿಸಿಕೊಳ್ಳಬೇಕು ಮತ್ತು ಇಂತಹ ಕಾರ್ಯಕ್ರಮಗಳಲ್ಲಿ ಆಲಿಸುವುದರ ಮುಖೇನ ತಮ್ಮ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಹೇಳಿ, ಕೊನೆಯಲ್ಲಿ ಯಾರು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೋ ಅವರಿಗೆ ಸ್ಥಳದಲ್ಲೇ ಪ್ರಶ್ನೆ ಕೇಳಿ ಉತ್ತರಿಸಿದವರಿಗೆ ಬಹುಮಾನ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಪ್ರಕಾಶ್ ಮಾತನಾಡಿ, ಸಾಹಿತ್ಯ ಪರಿಷತ್ತಿನ ಚಟುವಟಿಕೆಯನ್ನು ಶ್ಲಾಘಿಸುತ್ತಾ ಪರಿಷತ್ತಿನ ಇಂತಹ ಕಾರ್ಯಕ್ರಮಗಳು ಗ್ರಾಮೀಣ ಶಾಲೆಗಳಲ್ಲಿ ಎಲ್ಲ ಹಳ್ಳಿಗಳಿಗೂ ತಲುಪುವಂತೆ ಆಗಲಿ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮುದ್ದೇನಹಳ್ಳಿ ನಂಜಯ್ಯ ಮಾತನಾಡಿ, ವಚನಗಳು ಬದುಕಿನ ದಾರಿ ತೋರುವ ಬೆಳಕು. ಇಂತಹ ವಚನಗಳನ್ನು ಮಕ್ಕಳು ಹೆಚ್ಚು ಕಲಿಯಬೇಕು ಎಂದು ಹೇಳಿದರು.
ತಾಲ್ಲೂಕು ಕ.ಸಾ.ಪ. ಉಪಾಧ್ಯಕ್ಷ ಪ್ರೊ. ಶಶಿಕುಮಾರ್ ಬಸವಣ್ಣನವರ ಹಾಗೂ ಶರಣರ ಜನಪದ ಗೀತೆಗಳನ್ನು ಹಾಡಿದರು. ಹಾಸ್ಯಕವಿ ಬೆಸ್ಟೆಕ್ಸ್ ರಾಮರಾಜು ಕವನ ವಾಚಿಸಿದರು.
ಕಾರ್ಯಕ್ರಮದಲ್ಲಿ ಕೋರ ಹೋಬಳಿ ನಿಕಟ ಪೂರ್ವ ಅಧ್ಯಕ್ಷ ಕರೀಕೆರೆ ಪಾಲಾಕ್ಷಯ್ಯ, ಹಾಲಿ ಅಧ್ಯಕ್ಷ ವಜ್ರಪ್ಪ ಮೆಳೇಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.