ನಿಡಗಲ್ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಅಗತ್ಯ
ಪಾವಗಡ, ಸೆ. ೬- ನೂರಾರು ದೇವನೆಲೆಗಳ ತಾಣವಾಗಿರುವ ನಿಡುಗಲ್ ಸಾವಿರಕ್ಕೂ ಹೆಚ್ಚಿನ ವರ್ಷದಿಂದ ಇತಿಹಾಸವನ್ನು ಹೊಂದಿದ್ದು, ಅಲ್ಲಿರುವ ಐತಿಹಾಸಿಕ ಪರಂಪರೆಯ ಸ್ಮಾರಕಗಳೆಲ್ಲವೂ ಪಾಳು ಬಿದ್ದು ಹಾಳಾಗುವ ಹಂತ ತಲುಪಿದೆ. ಅವುಗಳನ್ನು ರಕ್ಷಿಸುವ ಕೆಲಸವಾಗಬೇಕು ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ಗೋವಿಂದ ಕಾರಜೋಳ ಹೇಳಿದರು.
ತಾಲ್ಲೂಕಿನ ನಿಡಗಲ್ಲಿನ ವೀರಭದ್ರಸ್ವಾಮಿ ದೇವಾಲಯದಲ್ಲಿ ಆವರಣದಲ್ಲಿ ನಿಡಗಲ್ಲು ವೀರಭದ್ರಸ್ವಾಮಿ ಸೇವಾ ಸಮಿತಿ ಟ್ರಸ್ಟ್ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ
ಸಂಶೋಧಕರಾದ ಡಾ. ಡಿ.ಎನ್.ಯೋಗೀಶ್ವರಪ್ಪ ಮತ್ತು ಅನಿತ ಮಂಜುನಾಥ ರಚಿಸಿರುವ ಮರೆಯಲಾಗದ ನಿಡುಗಲ್ಲು ಕೃತಿಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕ ಡಾ. ಚಿತ್ತಯ್ಯ ಪೂಜಾರ್, ಹಲವಾರು ರಾಜ ಮನೆತನಗಳು ಆಳ್ವಿಕೆ ನಡೆಸಿದ ನಿಡುಗಲ್ ಪ್ರತ್ಯೇಕ ವೈಶಾಲ್ಯತೆ ಮತ್ತು ಸ್ವರೂಪದಲ್ಲಿ ವಿಜಯನಗರದ ರಾಜಧಾನಿ ಹಂಪೆಯಂತೆ ಕಾಣುತ್ತದೆ. ಇಲ್ಲಿ ಅಸಂಖ್ಯಾತ ಸ್ಮಾರಕಗಳ ಅವಶೇಷಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ನಿಧಿಗಳ್ಳರ ಆಸೆಗೆ ಬಲಿಯಾಗುತ್ತಿವೆ. ಇವುಗಳನ್ನೆಲ್ಲಾ ಸರ್ಕಾರ ಒಂದೆಡೆ ಸೇರಿಸಿ ಐತಿಹಾಸಿಕ ವಸ್ತುಸಂಗ್ರಹಾಲಯವನ್ನು ನಿರ್ಮಿಸಿ ಚಾರಣ ಪ್ರವಾಸಿಗರ ಸ್ವರ್ಗ ತಾಣವನ್ನಾಗಿ ಮಾಡಬಹುದು ಎಂದರು.
ಕೃತಿ ಕುರಿತು ಮಾತನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಇತಿಹಾಸ ಪ್ರಾಧ್ಯಾಪಕರಾದ ಎಲ್.ಪಿ ರಾಜು, ನಿಡುಗಲ್ಲಿನ ಬಗ್ಗೆ ಇದುವರೆಗೆ ಬಂದಿರುವ ಎಲ್ಲ ಕೃತಿಗಳಿಗಿಂತ ಇದು ಭಿನ್ನವಾಗಿದ್ದು ಬಹುಮುಖ್ಯವಾಗಿ ಯುರೋಪಿಯನ್ನರ ಅಧಿಕೃತ ದಾಖಲೆಗಳನ್ನಾಧಿರಿಸಿ ರಚನೆಯಾಗಿರುವುದು ಮತ್ತು ಹೆಚ್ಚಿನ ಸಂಶೋಧನೆಗೆ ಮಾರ್ಗ ತೋರಿಸಿದ್ದು ಇದೊಂದು ಉತ್ತಮ ಕೃತಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ, ಪ್ರಕೃತಿಯ ಮಡಿಲಿನಲ್ಲಿರುವ ನಿಡುಗಲ್ಲಿನಲ್ಲಿ ೧೮ನೇ ಶತಮಾನದಲ್ಲಿ ನಿಡಗಲ್ ಚನ್ನಪ್ಪನೆಂಬ ಕವಿ ನೆಲೆಸಿದ್ದು ಶಿಖರದ ಬಸವನ ತಾರಾವಳಿ ರಚಿಸಿದ್ದು ಅದು ನಿಡುಗಲ್ಲಿನ ಜಾತ್ರೆಯ ವೈಭವವನ್ನು ವರ್ಣಿಸುತ್ತದೆ. ಆ ಜಾತ್ರೆ ಇಂದಿಗೂ ಶ್ರಾವಣಮಾಸದಲ್ಲಿ ಮುಂದುವರೆದಿರುವುದು ನಮ್ಮ ಪರಂಪರೆಯ ದ್ಯೋತಕವಾಗಿದೆ ಎಂದರು.
ಕೃತಿಕಾರ ಡಾ. ಡಿ.ಎನ್.ಯೋಗೀಶ್ವರಪ್ಪ ಮಾತನಾಡಿ, ನಿಡುಗಲ್ ೧೮೦೦ರಲ್ಲಿ ಜಿಲ್ಲಾ ಕೇಂದ್ರವಾಗಿದ್ದು ಅಂದು ಅದಕ್ಕೆ ನಾಲ್ಕು ತಾಲ್ಲೂಕುಗಳಿದ್ದವು. ಅಲ್ಲಿ ಅಮುಲ್ದಾರರ ಕಚೇರಿ ಇತ್ತು. ಅಲ್ಲಿದ್ದ ದಾಖಲೆಗಳನ್ನು ಗಮನಿಸಿ ಬ್ರಿಟಿಷ್ ಅಧಿಕಾರಿ ಕರ್ನಲ್ ಮೆಕಂಜಿಯು ನಿಡುಗಲ್ಲಿನ ಬಗ್ಗೆ ವರದಿ ಸಿದ್ಧಪಡಿಸಿ ಈಸ್ಟ್ ಇಂಡಿಯಾ ಕಂಪನಿಗೆ ೧೮೦೩ರಲ್ಲಿ ಸಲ್ಲಿಸಿದ್ದನು. ಅದು ೫೪೦ ಪುಟಗಳ ವರದಿ ಲಂಡನ್ನಿನ ಇಂಡಿಯಾ ಆಫೀಸ್ ಲೈಬ್ರರಿಯಲ್ಲಿದೆ. ಅದನ್ನಾಧರಿಸಿ ಈ ಕೃತಿಯನ್ನು ರಚಿಸಲಾಗಿದೆ ಎಂದರು.
ಕ್ರಿ.ಶ. ೧೭೯೦ರಲ್ಲಿ ಹತ್ತು ಸಾವಿರ ಮನೆಗಳು ನಿಡುಗಲ್ಲಿನಲ್ಲಿದ್ದು ಆ ವೈಭವದ ೧೩೦೦ ವರ್ಷಗಳ ನಾಗರೀಕತೆ ನಶಿಸಿ ಹೋಯಿತು. ಈಗ ಪಾಳುಬಿದ್ದಿದ್ದ ವೀರಭದ್ರಸ್ವಾಮಿ ದೇಗುಲ, ಜೈನಬಸದಿ, ಮಲ್ಲಿಕಾರ್ಜುನ, ಸೋಮೇಶ್ವರ, ನಗರೇಶ್ವರ ದೇಗುಲಗಳನ್ನು ಜೀರ್ಣೋದ್ದಾರ ಮಾಡುವ ಮೂಲಕ ಮತ್ತೊಮ್ಮೆ ನಿಡುಗಲ್ಲಿನ ನಾಗರೀಕತೆಯ ಪುನರ್ ಸ್ಥಾಪನೆ ಮಾಡಿರುವುದು ಹೆಮ್ಮೆಯ ವಿಷಯ ಎಂದರು.
ಇದೇ ಸಂದರ್ಭದಲ್ಲಿ ಸಂಶೋಧಕರಾದ ಡಾ. ವಿ.ಚೆಲುವರಾಜ್, ಜಾನಪದ ವಿದ್ವಾಂಸರಾದ ಸಣ್ಣನಾಗಪ್ಪ, ಸಂಶೋಧಕ ಹೊ.ಮ.ನಾಗರಾಜು, ಮುದ್ರಕರಾದ ಸತೀಶ್ ಹೆಬ್ಬಾಕ ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕರಿಯಣ್ಣ, ನಿವೃತ್ತ ಪ್ರಾಂಶುಪಾಲರಾದ ಪ್ರೊ. ಎಂ.ಬಿ.ಸದಾಶಿವಯ್ಯ ಮತ್ತಿತರರು ಉಪಸ್ಥಿತರಿದ್ದರು.
ಟ್ರಸ್ಟ್‌ನ ಕೋಶಾಧ್ಯಕ್ಷ ವಿಶ್ವನಾಥ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್ ಡಾ. ಬಿ.ನಂಜುಂಡಸ್ವಾಮಿ, ಡಾ. ಜಗದೀಶ್, ಡಾ. ಚಂದ್ರಶೇಖರ್ ಇವರಿಗೆ ಗೌರವ ಪ್ರತಿಗಳನ್ನು ನೀಡಲಾಯಿತು.
ಲಖಿತ ಪ್ರಾರ್ಥಿಸಿದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಟ್ಟಾನರಸಿಂಹ ಮೂರ್ತಿ ಸ್ವಾಗತಿಸಿದರು. ಡಾ. ಬಿ.ನಂಜುಂಡಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಟಿ.ಆರ್.ಜಗದೀಶ್ ವಂದಿಸಿದರು. ಅನಿತ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.