ನಾಳೆ ವಿದ್ಯಾ ಗಣಪತಿಮೂರ್ತಿ ಪ್ರತಿಷ್ಠಾಪನೋತ್ಸವ
ಮಧುಗಿರಿ, ಸೆ. ೬- ಪಟ್ಟಣದ ಶ್ರೀ ಮಲ್ಲೇಶ್ವರ ಸ್ವಾಮಿ ಹಾಗೂ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನಗಳ ಮಧ್ಯಭಾಗದ ಶ್ರೀ ಬಾಲಗಂಗಾಧರ ತಿಲಕ್ ಮಹಾಮಂಟಪದಲ್ಲಿ ಪಕ್ಷಾತೀತವಾಗಿ ಹಾಗೂ ಜಾತ್ಯಾತೀತವಾಗಿ ಶ್ರೀ ವಿದ್ಯಾ ಗಣಪತಿ ಮೂರ್ತಿಯನ್ನು ಸೆ. ೭ ರಂದು ಪ್ರತಿಷ್ಠಾಪಿಸಲಾಗುವುದು ಎಂದು ಶ್ರೀ ವಿದ್ಯಾಗಣಪತಿ ಮಹಾಮಂಡಳಿ ಅಧ್ಯಕ್ಷ ಹಾಗೂ ಪುರಸಭಾಧ್ಯಕ್ಷ ಲಾಲಾಪೇಟೆ ಮಂಜುನಾಥ್ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆ. ೭ ರಂದು ಬೆಳಗ್ಗೆ ೧೧ ಗಂಟೆಗೆ ನಡೆಯುವ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ತಗ್ಗಿಹಳ್ಳಿ ರಾಮಕೃಷ್ಣಾಶ್ರಮದ ಶ್ರೀ ರಮಾನಂದ ಜೀ ಅವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಸೆ. ೭ ರಿಂದ ೧೪ ರ ವರೆಗೆ ಪ್ರತಿದಿನ ಸಂಜೆ ೬.೩೦ರಿಂದ ಭಕ್ತಿಗೀತೆಗಳು, ರಸಮಂಜರಿ, ಗೀತ ಗಾಯನ ಕಾರ್ಯಕ್ರಮ ಹಾಗೂ ಆರ್ಕೆಸ್ಟ್ರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸೆ. ೧೫ ರಂದು ಬೆಳಗ್ಗೆ ೧೨ ಗಂಟೆಗೆ ಗಣಪತಿ ಮೂರ್ತಿಯ ವಿಸರ್ಜನಾ ಕಾರ್ಯಕ್ರಮವಿದ್ದು, ವಿವಿಧ ಕಲಾ ತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು. ಊರಿನ ನಾಗರಿಕರು ಆ ದಿನ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಮೆರವಣಿಗೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಎಂ. ಎಲ್. ಗಂಗರಾಜು, ಎಂ. ವಿ. ಗೋವಿಂದರಾಜು, ಮಾಜಿ ಸದಸ್ಯರಾದ ಆರ್. ಎಲ್. ಎಸ್. ರಮೇಶ್, ಶ್ರೀನಿವಾಸಮೂರ್ತಿ, ಎಪಿಎಂಸಿ ಮಾಜಿ ಅಧ್ಯಕ್ಷ ಎಂ. ಜಿ. ಶ್ರೀನಿವಾಸಮೂರ್ತಿ, ಶ್ರೀ ವಿದ್ಯಾ ಗಣಪತಿ ಮಹಾಮಂಡಳಿಯ ಪದಾಧಿಕಾರಿಗಳಾದ ಎಸ್. ವಿ. ಎಲ್. ಶ್ರೀಧರ್, ಕೆ. ಎಸ್. ಪಾಂಡುರಂಗರೆಡ್ಡಿ, ಬಿ. ಆರ್. ಸತ್ಯನಾರಾಯಣ, ಜಿ. ಆರ್. ಧನಪಾಲ್, ದೋಲಿ ಬಾಬು, ಯತೀಶ್‌ಬಾಬು, ಎಂ. ವಿ. ಮೂಡ್ಲಿ ಗಿರೀಶ್, ಕಿಶೋರ್, ಮಹೇಶ್, ಮಲೆರಂಗಪ್ಪ ಹಾಗೂ ಪ್ರಧಾನ ಅರ್ಚಕರುಗಳಾದ ಎಂ. ಎನ್. ನಟರಾಜ ದೀಕ್ಷಿತ್, ಅನಂತಪದ್ಮನಾಭ ಭಟ್ಟರ್ ಉಪಸ್ಥಿತರಿದ್ದರು