ಗೊರವನಹಳ್ಳಿ ಮಹಾಲಕ್ಷ್ಮಿ ದರ್ಶನ ಪಡೆದ ಲಕ್ಷ್ಮಿಹೆಬ್ಬಾಳ್ಕರ್
ಕೊರಟಗೆರೆ, ಸೆ. ೬- ತಾಲ್ಲೂಕಿನ ಪುಣ್ಯ ಕ್ಷೇತ್ರವಾದ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಾಲಯಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರೀಕ ಸಬಲೀಕರಣ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಭೇಟಿ ನೀಡಿ ಮಹಾಲಕ್ಷ್ಮೀದೇವಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದರು.
ತುಮಕೂರು ಜಿಲ್ಲಾ ಪಂಚಾಯ್ತಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ ನಂತರ ಕೊರಟಗೆರೆ ತಾಲ್ಲೂಕಿನ ಪ್ರಸಿದ್ದ ಪುಣ್ಯ ಕ್ಷೇತ್ರ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಾಲಯಕ್ಕೆ ಭೇಟಿ ನೀಡಿ ಶ್ರೀ ಮಹಾಲಕ್ಷ್ಮೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದರು.
ನಂತರ ದೇವಸ್ಥಾನ ಸಂಸ್ಥಾಪಕರಾದ ದಿ. ಕಮಲಮ್ಮ ನವರ ಮೂಲ ಬೃಂದಾವನಕ್ಕೆ ಭೇಟಿ ನೀಡಿ ದೇವಾಲಯದ ಆಡಳಿತ ಮಂಡಲಿ ವತಿಯಿಂದ ಸನ್ಮಾನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಶ್ರೀ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್‌ನ ಖಜಾಂಚಿ ಆರ್.ಜಗದೀಶ್, ಧರ್ಮದರ್ಶಿಗಳಾದ ನಟರಾಜು, ನಾಗರಾಜು, ಅರ್ಚಕ ಗಿರೀಶ್‌ರಾವ್, ವಿಶೇಷ ಆಧಿಕಾರಿ ಕೇಶವಮೂರ್ತಿ, ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ್, ಅಶ್ವತ್ಥ್‌ನಾರಾಯಣ್, ಮಂಜುನಾಥ್ ಸೇರಿದಂತೆ ದೇವಾಲಯದ ಎಲ್ಲಾ ಧರ್ಮದರ್ಶಿಗಳು ಹಾಗೂ ಸಿಬ್ಬಂದಿ ವರ್ಗ ಸಚಿವರನ್ನು ಸ್ವಾಗತಿಸಿದರು.