ಮರಣ ನಂತರ ನೇತ್ರದಾನ ಮಾಡಲು ಸಲಹೆ
ತುಮಕೂರು, ಸೆ. ೬- ದೇಶದಲ್ಲಿ ಲಕ್ಷಾಂತರ ಜನರು ಕಣ್ಣುಗಳಿಲ್ಲದೇ ಹಲವಾರು ಕಾರಣಗಳಿಂದ ದೃಷ್ಟಿ ಹೀನರಾಗುತ್ತಿದ್ದಾರೆ. ಸಾವಿನ ನಂತರವು ನಮ್ಮ ದೃಷ್ಟಿಯನ್ನು ಮುಂದುವರೆಸಬಹುದು, ಏಕೆಂದರೆ ಸತ್ತ ನಂತರ ನೇತ್ರ ಪೊರೆ ದಾನ ಮಾಡಿದ್ದಲ್ಲಿ ಅದು ಅಂಧತ್ವ ನಿವಾರಣೆ ಹೊಂದಬಹುದು. ನೇತ್ರದಾನ ನಮ್ಮ ಮರಣದ ನಂತರ ನಮ್ಮ ಬದುಕನ್ನು ಮುಂದುವರೆಸಲು ಸಾಧನವಾಗಿರುತ್ತದೆ ಎಂದು ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಆರ್. ಹುಲಿನಾಯ್ಕರ್ ಹೇಳಿದರು.
ನಗರದ ಸಿರಾ ರಸ್ತೆಯಲ್ಲಿರು ಶ್ರೀದೇವಿ ಆಸ್ಪತ್ರೆಯ ಆಡಿಟೋರಿಯಂನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣಾ ವಿಭಾಗ ಹಾಗೂ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆ ನೇತ್ರ ಚಿಕಿತ್ಸಾ ವಿಭಾಗದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ೩೯ನೇ ರಾಷ್ಟ್ರೀಯ ನೇತ್ರದಾನ ಬಗ್ಗೆ ಜಾಗೃತಿ ಮೂಡಿಸುವ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸುಮಾರು ೧.೨೫ ಲಕ್ಷ ಜನರು ಅಂಧತ್ವದಿಂದ ಬಳಲುತ್ತಿದ್ದಾರೆ. ನೇತ್ರದಾನ ಬಗ್ಗೆ ಸಾರ್ವಜನಿಕರು ಅರಿವು ಮೂಡಿಸಬೇಕು. ನೇತ್ರದಾನ ಪಾಕ್ಷಿಕಯ ೨೦೨೪ ನೇ ಘೋಷಾವಾಕ್ಯವಾದ “ತಮ್ಮ ನೇತ್ರಗಳು ಸದಾ ಜೀವಂತವಾಗಿರಲಿ” ಈ ನಿಟ್ಟಿನಲ್ಲಿ ಎಲ್ಲರೂ ಸಾವಿನ ಬಳಿಕ ತಮ್ಮ ಕಣ್ಣುಗಳನ್ನು ದಾನ ಮಾಡಲು ಮುಂದಾಗಬೇಕು. ಮರಣದ ನಂತರ ಸುಮಾರು ೬ ಗಂಟೆಯೊಳಗೆ ಕಣ್ಣುಗಳನ್ನು ದಾನ ಮಾಡಬಹುದು ಎಂದರು.
ಪ್ರಾಸ್ತಾವಿಕ ನುಡಿಗಳಾಡಿದ ಜಿಲ್ಲಾ ಕುಷ್ಠರೋಗ ಹಾಗೂ ಅಂಧತ್ವ ನಿವಾರಣಾಧಿಕಾರಿ ಡಾ.ಕೆ.ರವೀಂದ್ರ ನಾಯಕ್, ನೇತ್ರದಾನ ಮಹಾದಾನ ಎನ್ನುತ್ತಾ ಅಂಧತ್ವ ನಿವಾರಣೆ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕು.
ಮರಣದ ನಂತರ ನೇತ್ರಗಳನ್ನು ದಾನ ಮಾಡುವುದರಿಂದ ಅಂಧರಿಬ್ಬರಿಗೆ ಬೆಳಕು ನೀಡಲು ಸಾಧ್ಯ. ಮಕ್ಕಳಲ್ಲಿಯೇ ದೃಷ್ಟಿದೋಷಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ನೇತ್ರ ತಜ್ಞರನ್ನು ಕಂಡು ಸರಿಪಡಿಸಿಕೊಳ್ಳಬೇಕು ಎಂದರು.
ಕಾರ್ನಿಯಾ ತಜ್ಞ ಹಾಗೂ ಸಮೃದ್ಧಿ ನೇತ್ರಾಲಯದ ಡಾ. ಮಂಜುನಾಥ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನರಲ್ಲಿ ನೇತ್ರದಾನದ ಬಗ್ಗೆ ಹೆಚ್ಚು ಅರಿವು ಮೂಡಿಸುವ ಅಗತ್ಯವಿದೆ. ಇದರಿಂದ ಹೆಚ್ಚು ಕಣ್ಣುಗಳು ದಾನವಾಗಿ ಬರುವುದರಿಂದ ಕಪ್ಪುಗುಂಡೆ ಕುರುಡುರಾಗಿರುವುರನ್ನು ದೃಷ್ಟಿ ನೀಡಬಹುದಾಗಿದೆ ಎಂದು ವಿವರಿಸಿದರು.
ಜಿಲ್ಲಾಸ್ಪತ್ರೆಯ ಹಿರಿಯ ನೇತ್ರ ತಜ್ಞರಾದ ಡಾ.ದಿನೇಶ್ ಮಾತನಾಡಿ, ನೇತ್ರದಾನ ಎಂಬುದು ಅತ್ಯಮೂಲ್ಯವಾದದ್ದು, ನೇತ್ರದಾನ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕು. ವೈದ್ಯಕೀಯ ವಿದ್ಯಾರ್ಥಿಗಳು ನೇತ್ರದಾನ ಜಾಗೃತಿಯ ಬಗ್ಗೆ ಸಭೆ ಸಮಾರಂಭಗಳಲ್ಲಿ ತಿಳಿಸಬಹುದಾಗಿದೆ. ಈ ನೇತ್ರದಾನದಲ್ಲಿ ಯುವ ಜನಾಂಗದ ಜವಾಬ್ದಾರಿಯೂ ತುಂಬಾ ಅತ್ಯವಶ್ಯಕವಾಗಿದೆ. ಅಂಧರ ಬಾಳಿನಲ್ಲಿ ದೃಷ್ಟಿಪಡೆದ ವ್ಯಕ್ತಿಗಳು ಬೆಳಕಾಗಬಹುದು ಎಂದರು.
ಶ್ರೀದೇವಿ ಆಸ್ಪತ್ರೆಯ ನೇತ್ರ ತಜ್ಞೆ ಡಾ.ಲಾವಣ್ಯ ಮಾತನಾಡಿ, ಯಾವುದೇ ಮರಣ ಸಂಭವಿಸಿದಾಗ ನೇತ್ರದಾನ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಶ್ರೀದೇವಿ ಕಣ್ಣಿನ ಬ್ಯಾಂಕ್ ಸಂಪರ್ಕಿಸಿ ೦೮೧೬-೨೨೧೧೯೯೯ರವರನ್ನು ಸಂಪರ್ಕಿಸುವಂತೆ ಕೋರಿದರು.
ಇದೇ ಸಂದರ್ಭದಲ್ಲಿ ವೈದ್ಯ ವಿದ್ಯಾರ್ಥಿಗಳಿಂದ ನೇತ್ರದಾನದ ಬಗ್ಗೆ ಕಿರುನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ನಿರ್ದೇಶಕ ಡಾ. ರಮಣ್ ಆರ್ ಹುಲಿನಾಯ್ಕರ್, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ. ಅಸ್ಗರ್ ಬೇಗ್, ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಲ್.ಹರೇಂದ್ರಕುಮಾರ್, ಶ್ರೀದೇವಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಕೆ.ಮೋಹನ್‌ಕುಮಾರ್, ಶ್ರೀದೇವಿ ಪ್ಯಾರಾಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಸಿ. ಕೃಷ್ಣ, ಶ್ರೀದೇವಿ ನೇತ್ರ ತಜ್ಞರಾದ ಡಾ. ಕಲ್ಲೇಶ್, ಡಾ. ಪ್ರವೀಣ್, ಜಿಲ್ಲಾ ಆಸ್ಪತ್ರೆಯ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಯಾದ ಹನುಮಂತರಾಯಪ್ಪ ಮತ್ತಿತರರು ಭಾಗವಹಿಸಿದ್ದರು.