ಜಿಲ್ಲೆಯಲ್ಲಿ ಇದುವರೆಗೆ 2.25 ಲಕ್ಷ ಬಿಜೆಪಿ ಸದಸ್ಯತ್ವ : ಸೋಮನಾಥ ಪಾಟೀಲ
ಬೀದರ:ಅ.3: ಬೀದರ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ ಸದಸ್ಯತ್ವ ಅಭಿಯಾನದಡಿ ಒಟ್ಟು 3.80 ಲಕ್ಷ ಸದಸ್ಯತ್ವದ ಗುರಿ ಹೊಂದಲಾಗಿದೆ. ಇದರಲ್ಲಿ ಶೇ. 60 ಪ್ರತಿಶತದಷ್ಟು ಅಂದರೆ 2.25 ಲಕ್ಷ ಸದಸ್ಯತ್ವದ ಗುರಿ ತಲುಪಲಾಗಿದೆ ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಹುಡಗಿ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಸದಸ್ಯತ್ವ ಗುರಿ ತಲುಪುವಲ್ಲಿ ಒಟ್ಟು 226 ಕ್ಷೇತ್ರಗಳಲ್ಲಿ ಬಸವಕಲ್ಯಾಣ ಎರಡನೇ ಸ್ಥಾನದಲ್ಲಿದ್ದರೆ ಔರಾದ ಬಿ ಕ್ಷೇತ್ರವು ನಾಲ್ಕನೇ ಸ್ಥಾನದಲ್ಲಿದೆ. ಅಕ್ಟೋಬರ್ 15ರ ಒಳಗಾಗಿ ಪಕ್ಷವು ನಮಗೆ ನೀಡಿದ ಗುರಿ ಸಂಪೂರ್ಣವಾಗಿ ತಲುಪಲಾಗುವುದು ಎಂದರು. ಜಿಲ್ಲೆಯಲ್ಲಿ ಗದಗೆಟ್ಟಿರುವ ಸರ್ವಿಸ್ ರಸ್ತೆಗಳನ್ನು ನಿರ್ಮಾಣ ಮಾಡಿ ಸಾವು-ನೋವುಗಳಾಗದಂತೆ ಸರ್ಕಾರ ನೋಡಿಕೊಳ್ಳಬೇಕು. ಈ ಹಿಂದಿನ ಜಿಲ್ಲಾ ಪೊಲೀಸ್ ಅಧೀಕ್ಷಕರು ಜಿಲ್ಲೆಯಲ್ಲಿ ನಡೆಯುವ ಆಕ್ರಮ ಕೆಲಸಗಳಿಗೆ ಕಡಿವಾಣ ಹಾಕಿದ್ದರು. ಆದರೆ ಅವರು ವರ್ಗಾವಣೆಯಾದ ನಂತರ ಮತ್ತೆ ಆಕ್ರಮ ಧಂದೆಗಳು ತಲೆ ಎತ್ತುತ್ತಿವೆ. ಅದನ್ನು ಎಸ್.ಪಿ.ಯವರು ನಿಲ್ಲಿಸಬೇಕು ಎಂದರು.
ಬೀದರ ನಗರದಲ್ಲಿ ರಸ್ತೆಗಳು ಮಳೆಯಿಂದ ಸಂಪೂರ್ಣ ಹದಗೆಟ್ಟಿವೆ. ಕಳಪೆ ಕಾಮಗಾರಿಗಳು ನಡೆಯುತ್ತಿವೆ. ಗುಣಮಟ್ಟದ ಕಾಮಗಾರಿ ನಡೆಯುವಂತೆ ಸಚಿವರು ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ರೈತರು ಅತಿವೃಷ್ಟಿಯಿಂದ ಮತ್ತು ಅನಾವೃಷ್ಟಿಯಿಂದ ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಅವರಿಗೆ ಪರಿಹಾರ ಒದಗಿಸಬೇಕು. ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ಸಂಕಷ್ಟದಲ್ಲಿವೆ. ಡಿಸಿಸಿ ಬ್ಯಾಂಕ್‍ಗೆ 111 ಕೋಟಿ ನಷ್ಟವಾಗಿದೆ ಎಂದು ಅಧ್ಯಕ್ಷರೇ ಒಪ್ಪಿಕೊಂಡಿದ್ದಾರೆ. ಅದಕ್ಕೆ ಸಕ್ಕರೆ ಕಾರ್ಖಾನೆಗಳೇ ಕಾರಣ. ರೈತರು ತಮ್ಮ ಸಾಲವನ್ನು ಸರಿಯಾಗಿ ಮರುಪಾವತಿ ಮಾಡುತ್ತಿದ್ದಾರೆ. ಆದರೆ ನಷ್ಟಕ್ಕೆ ಕಾರಣವೇನು ಎಂಬುದನ್ನು ತಿಳಿದು ಅದನ್ನು ಸುಧಾರಣೆ ಮಾಡಬೇಕು. ಇಲ್ಲದಿದ್ದರೆ ರೈತರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗುತ್ತಾರೆ ಎಂದರಲ್ಲದೆ ಕಾರ್ಖಾನೆಗಳು ಮತ್ತು ಡಿಸಿಸಿ ಬ್ಯಾಂಕ್ ಸುಧಾರಣೆ ಆಗದಿದ್ದರೆ ಮುಂದಿನ ದಿನಗಳಲ್ಲಿ ಪಕ್ಷದ ವತಿಯಿಂದ ಹೋರಾಟ ಮಾಡಬೇಕಾಗುತ್ತದೆ ಎಂದು ಸೋಮನಾಥ ಪಾಟೀಲ ತಿಳಿಸಿದರು.
ಬಸವಕಲ್ಯಾಣ ಶಾಸಕ ಶರಣು ಸಲಗರ ಮಾತನಾಡಿ ಬಿಜೆಪಿ ಪಕ್ಷದ ಹಿರಿಯರಾಗಿದ್ದುಕೊಂಡು ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರು ಪದೇ ಪದೇ ಪಕ್ಷಕ್ಕೆ ಹಾಗೂ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಮುಜುಗರ ತರುವ ಹೇಳಿಕೆ ನೀಡುತ್ತಿದ್ದಾರೆ. ಇದು ಅವರಿಗೆ ಶೋಭೆ ತರುವಂಥದ್ದಲ್ಲ. ವಿಜಯೇಂದ್ರ ಹಾಗೂ ನಮಗೆ ಮಾರ್ಗದರ್ಶನ ಮಾಡುವ ಯತ್ನಾಳ ಅವರು ಈ ರೀತಿ ಹೇಳಿಕೆ ನೀಡಿದರೆ ಹೇಗೆ? ಎಂದರಲ್ಲದೆ ಕೂಡಲೇ ಅವರ ಈ ರೀತಿಯ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳುವಂತೆ ವರಿಷ್ಠರಿಗೆ ಮನವಿ ಮಾಡಿಕೊಳ್ಳಬೇಕಾಗುತ್ತದೆ ಎಂದರು.
ಬೀದರ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಕೆ.ಬೆಲ್ದಾಳೆ ಮಾತನಾಡಿ ಮುಡಾ ಹಗರಣದಲ್ಲಿ ಸಿಲುಕಿಕೊಂಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವಿರುದ್ಧವಾಗಿ ಈಗಾಗಲೇ ಹೈಕೋರ್ಟ್ ಕೂಡಾ ತೀರ್ಪು ನೀಡಿದೆ. ಹೀಗಾಗಿ ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಲೇಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಸುದ್ದಿಗೋಷ್ಟಿಯಲ್ಲಿ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪೀರಪ್ಪ ಔರಾದೆ ಯರನಳ್ಳಿ, ಕಿರಣ ಪಾಟೀಲ, ಮಾಧವ ಹಸೂರೆ, ಮಾಜಿ ಬುಡಾ ಅಧ್ಯಕ್ಷ ಬಾಬು ವಾಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.