ಸಾಧಕರು ಸಮಾಜದ ರೋಲ್ ಮಾಡೆಲ್ ಆಗಬೇಕು:ಮಂಜು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.06:ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು ಸಮಾಜದ ರೋಲ್ ಮಾಡೆಲ್ ಆಗಬೇಕು. ಅದನ್ನು ಬಿಟ್ಟು ಮಚ್ಚು, ಲಾಂಗು ಹಿಡಿದವರು, ದಾರಿತಪ್ಪಿದ ಸಿನಿಮಾ ನಟರನ್ನು ಸಮಾಜದ ರೋಲ್ ಮಾಡಲ್ ಗಳಂತೆ ಬಿಂಬಿಸಲಾಗುತ್ತಿದೆ. ಸಮಾಜಮುಖಿ ವ್ಯಕ್ತಿತ್ವದವರನ್ನು ಸಮಾಜದ ರೋಲ್ ಮಾಡಲ್ ಗಳನ್ನಾಗಿ ಬಿಂಬಿಸಬೇಕು. ಶಿಕ್ಷಕ ಸಮುದಾಯ ದೇಶಪ್ರೇಮಿ ಶಿಷ್ಯಪಡೆಯನ್ನು ನಿರ್ಮಿಸಿ ಸಮಾಜಕ್ಕೆ ನೀಡಬೇಕೆಂದು ಶಾಸಕ ಹೆಚ್.ಟಿ.ಮಂಜು ಕರೆ ನೀಡಿದರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ತಾಲೂಕು ನಾಡಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಆಯೋಜಿಸಿಲಾಗಿದ್ದ ಶಿಕ್ಷಕರ ದಿನಾಚರಣೆ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಸಾಧಕನ ಹಿಂದೆ ಗುರುವಿನ ಮಾರ್ಗದರ್ಶನ ಇರುತ್ತದೆ. ಶಿಕ್ಷಕರ ದಿನಾಚರಣೆ ನಾವು ನೀವೆಲ್ಲರೂ ನಮ್ಮ ಗುರುಗಳನ್ನು ಸ್ಮರಿಸುವ ದಿನವಾಗಿದೆ. ನಾವೆಲ್ಲರೂ ಗುರುವಿನ ಋಣದಲ್ಲಿಯೇ ಬೆಳೆದಿದ್ದೇವೆ. ವಿದ್ಯಾರ್ಥಿ ದಿಸೆಯಲ್ಲಿ ಶಿಕ್ಷಕರು ಹಾಕಿಕೊಟ್ಟ ಮಾರ್ಗದರ್ಶನ ಬಹಳ ಮುಖ್ಯವಾಗಿದೆ. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ರಾದಾಕೃಷ್ಣನ್ ಅವರ ಆದರ್ಶಗಳನ್ನು ಶಿಕ್ಷಕರು ಮೈಗೂಡಿಸಿಕೊಳ್ಳಬೇಕು. ಇಂದಿನ ಶಿಕ್ಷಣ ವ್ಯವಸ್ಥೆ ಬದಲಾಗಿದೆ. ಮಕ್ಕಳು ದಾರಿತಪ್ಪದಂತೆ ದಂಡಿಸುವ ಪದ್ದತಿ ಈಗ ಇಲ್ಲ. ಕನಿಷ್ಠ ದಂಡನೆಯಿಲ್ಲದೆ ಶಿಸ್ತಿನ ಕಲಿಕೆ ಸಾಧ್ಯವಿಲ್ಲ. ಆದರೆ ಮಕ್ಕಳ ವಿಚಾರದಲ್ಲಿ ಪೆÇೀಷಕರ ಮನಸ್ಥಿತಿ ಬದಲಾಗಿದೆ. ಇಂದಿನ ಶಿಕ್ಷಣ ಮಕ್ಕಳಿಗೆ ನೈಜ ಶಿಕ್ಷಣ, ರಾಷ್ಟ್ರ ಪ್ರೇಮ, ರಾಷ್ಟ್ರ ಭಕ್ತಿ ಹಾಗೂ ಸಮಾಜದ ಒಳಿತಿಗಾಗಿ ಕೆಲಸ ಮಾಡುವ ಆದರ್ಶಗಳನ್ನು ಅಳವಡಿಸುವ ಕೆಲಸ ಮಾಡಬೇಕಿದೆ. ಶಿಕ್ಷಕರು ಬದ್ದತೆ, ಸಮಯಪ್ರಜ್ಞೆ, ಕಲಿಸುವ ಆಸಕ್ತಿಯನ್ನು ವೃದ್ದಿಸಿಕೊಂಡು ಜೀವನದ ಮೌಲ್ಯಗಳನ್ನು ಹೇಳಿಕೊಡುವ ಮೂಲಕ ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡುವಂತೆ ಕಿವಿಮಾತು ಹೇಳಿದ ಶಾಸಕ ಹೆಚ್.ಟಿ.ಮಂಜು ಶಿಕ್ಷಕರು ಮಕ್ಕಳ ಶ್ರೇಯೋಭಿವೃದ್ದಿಗಾಗಿ ಶ್ರಮಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಬೇಬಿಬೆಟ್ಟದ ಶ್ರೀ ರಾಮಯೋಗೀಶ್ವರ ಮಠದ ಪೀಠಾದ್ಯಕ್ಷರಾದ ಶ್ರೀ ಶಿವಬಸವ ಸ್ವಾಮೀಜಿ ಆಶೀರ್ವಚನ ನೀಡಿ ಪ್ರತಿಯೊಬ್ಬ ಶಿಕ್ಷಕನೂ ತನ್ನ ವೃತ್ತಿಯ ಬಗ್ಗೆ ಅಭಿಮಾನಪಡಬೇಕು. ತರಗತಿಯಲ್ಲಿ ಮಕ್ಕಳಿಗೆ ನೈಜ ಅನುಭವಗಳನ್ನು ಒಳಗೊಂಡ ಶಿಕ್ಷಣ ನೀಡಬೇಕು ಎಂದರು.
ಗಮನ ಸೆಳೆದ ಶಾಸಕರ ಪುತ್ರಿ : ಕಾರ್ಯಕ್ರಮದಲ್ಲಿ ಅನಿರೀಕ್ಷತವಾಗಿ ವೇದಿಕೆಗೆ ಆಗಮಿಸಿ ಶಿಕ್ಷಕರಿಗೆ ಶುಭಾಶಯಗಳನ್ನು ಸಲ್ಲಿಸಿದ ಶಾಸಕ ಹೆಚ್.ಟಿ.ಮಂಜು ಪುತ್ರಿ ಇಂಜಿನಿಯರಿಗ್ ವಿದ್ಯಾರ್ಥಿನಿ ವರ್ಷಾ ಎಂ.ಗೌಡ ತಮ್ಮ ಆಕರ್ಷಕ ಮಾತುಗಳಿಂದ ಎಲ್ಲರ ಗಮನ ಸೆಳೆದರು. ಶಿಕ್ಷಕರು ಸಮಾಜ ನಿರ್ಮಾಣದ ಶಿಲ್ಪಿಗಳಾಗಬೇಕು. ತರಗತಿಯ ಆಚೆಗೂ ಕಲಿಸುವ ಗುಣವುಳ್ಳವರೇ ನಿಜವಾದ ಶಿಕ್ಷಕರೆಂದು ಹೇಳುವ ಮೂಲಕ ಶಿಕ್ಷಕ ಸಮುದಾಯದಿಂದ ಚಪ್ಪಾಳೆ ಗಿಟ್ಟಿಸಿದರು.
ಇದೇ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ನಿವೃತ್ತರಾದ ಹಾಗೂ ಆಕಾಲಿಕ ಮರಣಕ್ಕೆ ತುತ್ತಾದ ಶಿಕ್ಷಕರ ಕುಟುಂಬದವರಿಗೆ ಅಭಿನಂದಿಸಿ ಸನ್ಮಾನಿಸಲಾಯಿತು. ಹಾಗೂ ಅತಿ ಹೆಚ್ಚು ಅಂಕಗಳಿಸಿದ ಶಿಕ್ಷಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಸೀತಾರಾಮು, ತಹಸೀಲ್ದಾರ್ ಜಿ.ಆದರ್ಶ, ಗ್ರೇಡ್ 2 ತಹಶಿಲ್ದಾರ್ ಲೋಕೇಶ್, ತಾ.ಪಂ.ಇಓ ಸುಷ್ಮ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಶಿವರಾಮೇಗೌಡ, ಕಾರ್ಯದರ್ಶಿ ಪಿ.ಜೆ.ಕುಮಾರ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಂ.ಬಸವರಾಜು, ಕಾರ್ಯದರ್ಶಿ ವಿಜಿನಾರಾಯಣ, ತಾಲ್ಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಎಲ್.ಮಂಜುನಾಥ್,ಕಾರ್ಯದರ್ಶಿ ವೆಂಕಟೇಗೌಡ, ಕ್ಷೇತ್ರ ಸಮ್ವಯಾಧಿಕಾರಿ ಹೆಚ್.ಕೆ.ಮಂಜುನಾಥ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಕಾರ್ಯದರ್ಶಿ ಸಿ.ಟಿ.ಲಕ್ಷ್ಮಣಗೌಡ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಭುಕುಮಾರ್, ಶಿಕ್ಷಣ ಸಂಯೋಜಕರುಗಳು, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, ತಾಲ್ಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ್ದ ಶಿಕ್ಷಕರು ಹಾಜರಿದ್ದರು.