ಅಲ್ಲಮಪ್ರಭು ಪಾಟೀಲ್ ಹಗರಣಗಳ ಹತ್ತು ಪಟ್ಟು ದಾಖಲೆಗಳು ಸಮಯ ಬಂದಾಗ ಬಿಡುಗಡೆ: ರೇವೂರ್
ಕಲಬುರಗಿ:ಸೆ.05: ದಕ್ಷಿಣ ಕ್ಷೇತ್ರದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್ ಹಾಗೂ ಅವರ ಪುತ್ರರು ಸೇರಿ ಮೂವರು ಶಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಹಿರಿಯ ಮುಖಂಡ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರು ಗಂಭೀರ ಆರೋಪ ಮಾಡಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಬಾರಿಯೂ ನನ್ನ ವಿರುದ್ಧ ದಾಖಲೆಗಳಿವೆ ಎಂದು ಹೆದರಿಸುವ ಅಲ್ಲಮಪ್ರಭು ಪಾಟೀಲ್ ಅವರ ವರ್ತನೆ ಹೀಗಿಯೇ ಮುಂದುವರೆದರೆ ಅವರ ವಿರುದ್ಧ ನನ್ನ ಹತ್ತಿರ ಇರುವ ಹಗರಣಗಳ ಹತ್ತು ಪಟ್ಟು ದಾಖಲೆಗಳನ್ನು ಸಮಯ ಬಂದಾಗ ನಾನು ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದರು.
ಈಗಾಗಲೇ ತಹಸಿಲ್ದಾರರೊಬ್ಬರು ಮುಟೇಶನ್ ಮಾಡಲಿಲ್ಲ ಎಂಬ ದ್ವೇಷ ಭಾವನೆಯಿಂದ ಅವರಿಗೆ ಅವಧಿ ಮುನ್ನವೇ ವರ್ಗಾವಣೆ ಮಾಡಲಾಗಿದೆ. ಅವರು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣದ ಮೊರೆ ಹೋಗಿದ್ದಾರೆ. ಆ ಕುರಿತು ಶೀಘ್ರ ತೀರ್ಪು ಬರಲಿದೆ ಎಂದು ಅವರು ಹೇಳಿದರು.
ಜೆಡಿಎಸ್ ಮುಖಂಡ ಕೃಷ್ಣಾರೆಡ್ಡಿ ಅವರು ತಹಸಿಲ್ ಕಚೇರಿಯಲ್ಲಿ ತಮ್ಮ ಕುಟುಂಬಕ್ಕೆ ಸೇರಿದ ಆಸ್ತಿಯನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಿರುವುದಕ್ಕೆ ಸಂಬಂಧಿಸಿದಂತೆ ಆಕೇಪಣೆ ಸಲ್ಲಿಸಿದ್ದರು. ತಹಸಿಲ್ದಾರ್ ಶ್ರೀಮತಿ ನಾಗಮ್ಮ ಕಟ್ಟಿಮನಿ ಅವರು ಶಾಸಕ ಅಲ್ಲಮಪ್ರಭು ಪಾಟೀಲ್ ಪುತ್ರನ ಒತ್ತಡಕ್ಕೆ ಮಣಿಯದೇ ದಾಖಲಾತಿ ವರ್ಗಾವಣೆ ತಿರಸ್ಕರಿಸಿದ್ದರಿಂದ ದ್ವೇಷ ಭಾವನೆಯಿಂದ ಅವರಿಗೆ ಕೇವಲ 8 ತಿಂಗಳಲ್ಲಿಯೇ ವರ್ಗಾವಣೆ ಮಾಡಲಾಗಿದೆ. ಈಗ ಅದು ನ್ಯಾಯಾಧೀಕರಣದ ವಿಚಾರಣೆಯ ಹಂತದಲ್ಲಿದೆ ಎಂದು ತಿಳಿಸಿದರು.
ಅಲ್ಲಮಪ್ರಭು ಪಾಟೀಲ್ ಅವರು ಶಾಸಕರಾಗಿ ಆಯ್ಕೆಯಾದ ಎರಡು ತಿಂಗಳಲ್ಲಿಯೇ ತಮ್ಮ ಅಳಿಯ ಶಿವುಕುಮಾರ್ ಪಟ್ಟಣಶೆಟ್ಟಿ ಅವರನ್ನು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರನ್ನಾಗಿ ವರ್ಗಾವಣೆ ಮಾಡಿ ತಂದರು. ಅಲ್ಲದೇ ಹಿರಿಯ ಅಧಿಕಾರಿ ಅರುಣಕುಮಾರ್ ಮಾಶೆಟ್ಟಿ ಅವರಿಗೆ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿಯ ಹುದ್ದೆಗೆ ವರ್ಗಾವಣೆ ಮಾಡುವುದಾಗಿ ಪತ್ರವನ್ನು ನೀಡಿ, ಹಣವನ್ನು ಪಡೆದು ಅವರಿಗೆ ಕೊನೆಯವರಿಗೂ ಆ ಹುದ್ದೆಗೆ ತರಲಿಲ್ಲ. ಶೀಘ್ರವೇ ಆ ಕುರಿತು ಅಧಿಕಾರಿಯೇ ದಾಖಲೆಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂದು ರೇವೂರ್ ಅವರು ದೂರಿದರು.
ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಈ ಹಿಂದೆ ಕೇಶ ಕಸಿ ಮಾಡಿಕೊಳ್ಳಲು ರಾಜ್ಯ ವಿಧಾನ ಪರಿಷತ್ ಸದಸ್ಯರಾಗಿದ್ದಾಗ ಭಾರೀ ಸಹಾಯಧನವನ್ನು ಸರ್ಕಾರದಿಂದ ಪಡೆದಿದ್ದಾರೆ ಎಂದು ದೂರಿದ ಅವರು, ಪಟ್ಟಣ ಗ್ರಾಮದಲ್ಲಿ ಜನಸ್ಪಂದನ ಸಭೆಯನ್ನು ಮಾಡಿದ ಶಾಸಕರು ಅತಿವೃಷ್ಟಿಯಿಂದ ಹಾನಿಗೀಡಾದ ಜಮೀನಿಗೆ ಭೇಟಿ ನೀಡಲಿಲ್ಲ. ಅವರಿಗೆ ಪರಿಹಾರ ಕೊಡುವ ಕುರಿತು ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ. ರೈತರು ಅಪಾರ ಮಳೆಯಿಂದಾಗಿ ಉದ್ದು, ಹೆಸರು, ತೊಗರಿ ಬೆಳೆಯನ್ನು ಕಳೆದುಕೊಂಡಿದ್ದಾರೆ. ಅವರಿಗೆ ಪರಿಹಾರ ಕೊಡಿಸುವ ಬದಲು ಯಾವುದೇ ಅಭಿವೃದ್ದಿ ಕಾರ್ಯಗಳನ್ನು ಮಾಡದೇ ಜನರ ಮನಸ್ಸು ಬೇರೆಡೆ ಸೆಳೆಯಲು ನನ್ನ ವಿರುದ್ಧ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ನಾನು ತಂದೆ, ತಾಯಿ ಶಾಸಕರಿದ್ದಾಗಲೇ ಅವರ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿರುವೆ ಎಂಬ ಆರೋಪವನ್ನು ತಳ್ಳಿ ಹಾಕಿದ ರೇವೂರ್ ಅವರು, ನಾನು ಶಾಸಕರ ಪುತ್ರ ಎನ್ನುವುದಕ್ಕಿಂತಲೂ ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದೇನೆ ಎಂಬುದನ್ನು ತಿಳಿದುಕೊಳ್ಳಲಿ ಎಂದು ಹೇಳಿದರು.
ಔಷಧ ಮಾರಾಟಗಾರರ ಸಂಘದಿಂದ ನಿರ್ಮಾಣಗೊಂಡ ಔಷಧ ಭವನದ ದುರ್ಬಳಕೆ ಕುರಿತ ಆರೋಪವೂ ಸತ್ಯಕ್ಕೆ ದೂರವಾಗಿದೆ. ನಮ್ಮ ಕುಟುಂಬವು ಮೊದಲಿನಿಂದಲೂ ಔಷಧ ವ್ಯಾಪಾರ ಮಾಡಿಕೊಂಡು ಬಂದಿದೆ. ಹಿಂದಿನ ಶಾಸಕರಾಗಿದ್ದ ತಂದೆ ದಿ. ಚಂದ್ರಶೇಖರ್ ಪಾಟೀಲ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಈಗ ನಮ್ಮ ಕುಟುಂಬದ ನಿಸ್ವಾರ್ಥ ಸೇವೆಯನ್ನು ಗಮನಿಸಿ ನನಗೆ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಮಧ್ಯಮ ಮತ್ತು ಬಡ ನೌಕರಸ್ಥರಿಗೆ ಅನುಕೂಲವಾಗಲು ಭವನದ ನಿರ್ವಹಣೆಗಾಗಿ ಮತ್ತು ಕಟ್ಟಡ ನಿರ್ಮಾಣಕ್ಕಾಗಿ ಬ್ಯಾಂಕಿನಿಂದ ಸಾಲ ಪಾವತಿಸಲು ಅತ್ಯಂತ ಕಡಿಮೆ ದರವನ್ನು ಪಡೆಯುತ್ತಿದ್ದು, ಸಂಘದ 5000 ಜನ ಸದಸ್ಯರು, 25000 ಜನ ವೈದ್ಯಕೀಯ ವಿಭಾಗದಲ್ಲಿನ ನೌಕರರು ವಿತರಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಜನೋಪಯೋಗಿ ಕಾರ್ಯವನ್ನು ಮಾಡುತ್ತಿದ್ದು, ಅದನ್ನೂ ಸಹ ಸಹಿಸಿಕೊಳ್ಳಲು ಆಗುತ್ತಿಲ್ಲ. ಒಂದು ವೇಳೆ ವಾಣಿಜ್ಯಕ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದರೆ ಅದನ್ನು ತಡೆಯಲು ಕ್ರಮ ಕೈಗೊಳ್ಳುತ್ತೇನೆ ಎಂದು ಅವರು ತಿಳಿಸಿದರು.
ನನ್ನ ಸಹೋದರ ಮೂಲತ: ವೈದ್ಯ. ಹೀಗಾಗಿ ಹೊರ ರಾಜ್ಯಗಳಿಗೆ ಹೋಗುತ್ತಿದ್ದ ಈ ಭಾಗದ ಜನರಿಗೆ ಗುಣಮಟ್ಟದ ಚಿಕಿತ್ಸೆ ಪಡೆಯಲು ಕಾನೂನು ರೀತಿಯಲ್ಲಿಯೇ ಅವರ ಪತ್ನಿಯೊಂದಿಗೆ ಕಾನೂನು ರೀತಿಯಲ್ಲಿಯೇ ಆಸ್ಪತ್ರೆ ಕಟ್ಟಡ ನಿರ್ಮಿಸಿದ್ದಾರೆ. ತೆರಿಗೆ ಶುಲ್ಕ ಭರಿಸಿದ್ದಾರೆ. ಅದರಲ್ಲಿ ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ಇಲಾಖೆ ಕ್ರಮ ಕೈಗೊಳ್ಳುತ್ತದೆ. ಅದಕ್ಕೆ ಶಾಸಕರ ಹಸ್ತಕ್ಷೇಪ ಏಕೆ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ನಮ್ಮ ಅಧಿಕಾರದ ಅವಧಿಯಲ್ಲಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರ ಪತ್ನಿ ಹಾಗೂ ಅಫಜಲಪುರ ಶಾಸಕ ಎಂ.ವೈ. ಪಾಟೀಲ್ ಅವರ ಪುತ್ರ ಅಲ್ಲದೇ ಹಿರಿಯ ಅಧಿಕಾರಿ ಅಮೀನ್ ಮುಕ್ತಾರ್ ಅವರ ಸಹೋದರ ಎಂಕೆ. ಆಸ್ಪತ್ರೆ ನಿರ್ಮಾಣ ಮಾಡಿದ್ದು, ಆ ಆಸ್ಪತ್ರೆಗಳ ಕಾರ್ಯಾರಂಭಕ್ಕೆ ಸಹಕಾರ ನೀಡಿದ್ದೇವೆ ಹೊರತು ರಾಜಕೀಯ ಮಾಡಿಲ್ಲ ಎಂದು ಅಲ್ಲಮಪ್ರಭು ಪಾಟೀಲ್ ವಿರುದ್ಧ ರೇವೂರ್ ಅವರು ಹರಿಹಾಯ್ದರು.
ಜಯದೇವ್ ಆಸ್ಪತ್ರೆ ಕುರಿತು ನನ್ನ ವಿರುದ್ಧ ವಿನಾಕಾರಣ ಆರೋಪ ಮಾಡಿದ್ದಾರೆ. 2013ರಲ್ಲಿ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ, ಡಾ. ಶರಣಪ್ರಕಾಶ್ ಪಾಟೀಲ್ ಅವರು ವೈದ್ಯಕೀಯ ಶಿಕ್ಷಣ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದಾಗ 100 ಕೋಟಿ ರೂ.ಗಳು ಅಂದಿನ ಸರ್ಕಾರದಲ್ಲಿಯೇ ಬಿಡುಗಡೆ ಆಗಿದೆ. ಈಗಿನ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಮಾಜ ಕಲ್ಯಾಣ ಸಚಿವರಾಗಿದ್ದು, ನನ್ನ ಕ್ಷೇತ್ರದಲ್ಲಿ ಎಸ್‍ಸಿಎಸ್ಟಿ ವಸತಿ ನಿಲಯ ಕಟ್ಟಡಕ್ಕೆ ಅನುದಾನ ನೀಡಿದ್ದಾರೆ. ಹಾಗೂ ಅದೇ ಬಾರಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ನನ್ನ ಕ್ಷೇತ್ರದ ಜಿಮ್ಸ್ ಆಸ್ಪತ್ರೆ ಟ್ರಾಮಾಕೇರ್ ಸೆಂಟರ್ ಹಾಗೂ ಕಿದ್ವಾಯಿ ಆಸ್ಪತ್ರೆ ಕಟ್ಟಡಕ್ಕಾಗಿ ಅನುದಾನ ನೀಡಿದ್ದಾರೆ. ಹಾಗಾದರೆ ಆ ಕಾಮಗಾರಿಗಳಿಗೆ ಕಮೀಷನ್ ಪಡೆದಿದ್ದಾರೆಯೇ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಶಾಸಕರಾಗಿ ಆಯ್ಕೆಯಾಗಿ ಒಂದೂವರೆ ವರ್ಷ ಆದರೂ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕೃಷ್ಣಾರೆಡ್ಡಿ ಅವರ ಮನೆಗೆ ಹೋಗಿ ಅಂಗಲಾಚಿ ಹೊಂದಾಣಿಕೆ ರಾಜಕಾರಣ ಮಾಡಿದ್ದು ನೆನಪು ಮಾಡಿಕೊಳ್ಳಿ. ಕ್ಷೇತ್ರದ ಜನರು ಸಹ ಈ ಕುರಿತು ಮಾತನಾಡಿಕೊಳ್ಳುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ದಕ್ಷಿಣ ಕ್ಷೇತ್ರದಲ್ಲಿ ಹತ್ತು ಸಾವಿರ ಮತಗಳ ಮುನ್ನಡೆಯಾಗಿದೆ. ಇದರಿಂದಾಗಿ ನಮ್ಮ ಪಕ್ಷದ ಅಭ್ಯರ್ಥಿ ತಮ್ಮ ಹಳೆಯ ಗೆಳೆಯ ಎಂದು ಸಹಾಯ ಮಾಡಿರುವಿರೇ ಅಥವಾ ಒಂದೂವರೆ ವರ್ಷದ ತಮ್ಮ ಅವಧಿಯಲ್ಲಿನ ದುರಾಡಳಿತಕ್ಕೆ ಬೇಸತ್ತು ಜನರು ಮತ ಹಾಕಿದ್ದಾರೆ ಎಂಬುದನ್ನು ಅಲ್ಲಮಪ್ರಭು ಪಾಟೀಲ್ ಅವರು ಸ್ಪಷ್ಟಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮಹಾಪೌರ ವಿಶಾಲ್ ದರ್ಗಿ, ಪಾಲಿಕೆ ಮಾಜಿ ಸದಸ್ಯ ರಾಜು ವಾಡೇಕರ್, ಶಿವಯೋಗಿ ನಾಗನಹಳ್ಳಿ, ಮಹಾದೇವ್ ಬೆಳಮಗಿ, ಲಿಂಗರಾಜ್ ಪಟ್ಟಣ್, ಅಪ್ಪು ಕಣಕಿ ಮುಂತಾದವರು ಉಪಸ್ಥಿತರಿದ್ದರು.