ಶಿಕ್ಷಕರ ದಿನಾಚರಣೆ: ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ಪಾದಪೂಜೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.06- ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಗರದ ಸೇವಾಭಾರತಿ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರ ಪಾದಪೂಜೆ ಮಾಡಿ, ಆರತಿ ಬೆಳಗಿ ಸಿಹಿ ಹಂಚಿ ಶಿಕ್ಷಕರ ದಿನಾಚರಣೆಯನ್ನು ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡಿದರು.
ನಗರದ ಶಂಕರಪುರ ಬಡಾವಣೆಯಲ್ಲಿ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಎಲ್ಲಾ ಶಿಕ್ಷಕರನ್ನು ಒಂದಡೆ ಸಾಲಾಗಿ ಕೂರಿಸಿ, ಬಳಿಕ ಶಿಕ್ಷಕರ ಪಾದಪೂಜೆ ಮಾಡಿ, ಪುಷ್ಪವೃಷ್ಠಿ ಹರಿಸಿ, ಅರತಿ ಬೆಳಗಿ ವಿದ್ಯಾ ಕಲಿಸಿದ ಗುರುವಿಗೆ ನಮಸ್ಕಾರ ಮಾಡಿದರು.
ಬಳಿಕ ಎಲ್ಲ ಮಕ್ಕಳು ತಾವು ತಂದಿದ್ದ ಸಿಹಿಯನ್ನು ಶಿಕ್ಷಕರಿಗೆ ನೀಡಿ, ಆಶೀರ್ವಾದ ಪಡೆದುಕೊಂಡರು. ಬಳಿಕ ನಡೆದ ವೇದಿಕೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಸಂಸ್ಥೆಯ ಸದಸ್ಯರು ಆದ ಕನ್ನಡ ಮಾಧ್ಯಮ ಶಾಲೆಯ ಉಸ್ತುವಾರಿ ಎಸ್. ಬಾಲಸುಬ್ರಮಣ್ಯಂ, ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿಯಾಗಿದ್ದು, ಸಮಾಜದಲ್ಲಿ ಶಿಕ್ಷಕರಿಗೆ ವಿಶೇಷ ಗೌರವ ಹಾಗು ಸ್ಥಾನಮಾನಗಳಲ್ಲಿ ನೀಡಿದೆ. ಈ ಹಿಂದೆ ಗುರುಗಳ ನಿವಾಸಕ್ಕೆ ಶಿಕ್ಷಣ ಕಲಿಸಲು ಮಕ್ಕಳನ್ನು ಬಿಟ್ಟುತ್ತಿದ್ದರು. ಗುರುಕುಲ ಪದ್ದತಿ ಇತ್ತು. ಗುರುಗಳ ಆಶ್ರಯದಲ್ಲಿಯೇ ಶಿಕ್ಷಣ ಕಲಿಯುತ್ತಿದ್ದ ಕಾಲವು ಇತ್ತು. ಈಗ ಶಾಲೆಗಳನ್ನು ಆರಂಭವಾಗಿದೆ. ಎಂದರು.
ದೇಶದ ರಾಷ್ಟ್ರಪತಿಗಳಾಗಿದ್ದ ಡಾ. ಸರ್ವಪಲ್ಲಿ ರಾಧಕೃಷ್ಣ ಅವರು ಓರ್ವ ಶಿಕ್ಷಕರಾಗಿ ಉತ್ತಮ ಸೇವೆ ಸಲ್ಲಿಸಿ, ರಾಷ್ಟ್ರದ ಅತ್ಯುನ್ನತವಾದÀ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ್ದರು. ಅವರ ಸೇವೆಯನ್ನು ಪರಿಗಣಿಸಿ ಅವರ ಹುಟ್ಟಿದ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸೇವಾಭಾರತಿ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಶ್ರೀನಿವಾಸ್ ಹಾಗು ಸಹ ಶಿಕ್ಷಕರು ಉಪಸ್ಥಿತರಿದ್ದರು.