ವಿದ್ಯಾರ್ಥಿಗಳ ಬೆಳವಣಿಗೆಗೆ ಶಿಕ್ಷಕರ ಪಾತ್ರ ಹಿರಿದು
ಕಲಬುರಗಿ:ಸೆ.05: ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಿಕೊಳ್ಳುವುದಕ್ಕೆ ಶಿಕ್ಷಕರ ಪಾತ್ರ ಬಹು ದೊಡ್ಡದು ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ.ಎಂ.ಎಸ್.ಪಾಸೋಡಿ ಹೇಳಿದರು.
ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಗುರುವಾರ ಶಿಕ್ಷಕರ ದಿನಾಚರಣೆ ಮತ್ತು ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಶಿಕ್ಷಕರು ಕೈ ಹಿಡಿದು ಅಕ್ಷರ ತಿದ್ದಿ, ಓದಿ-ಬರೆಯಲು ಕಲಿಸುವುದಷ್ಟೇ ಅಲ್ಲದ ಬದುಕಿನ ಕೌಶಲಗಳನ್ನು ಕಲಿಸುತ್ತಾ ಜೀವನದಲ್ಲಿ ಮುಂದೆ ಸಾಗುವಂತೆ ಮಾಡುವ ಶಿಕ್ಷಕರು ಬದುಕನ್ನು ರೂಪಿಸುವ ಶಿಲ್ಪಿಗಳು. ಬದುಕಿನಲ್ಲಿ ಸರಿಯಾದ ದಾರಿಯಲ್ಲಿ ಸಾಗುವಂತೆ ಮಾಡುವವರೇ ಶಿಕ್ಷಕರು ಎಂದು ಹೇಳಿದರು. ಪಠ್ಯದ ಜೊತೆಗೆ ಆಟವು ಬಹಳ ಮುಖ್ಯ. ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸಬೇಕು. ಪ್ರಸಿದ್ಧ ಹಾಕಿ ಆಟಗಾರರಾಗಿದ್ದ ಮೇಜರ ಧ್ಯಾನಚಂದ ಅವರ ಹುಟ್ಟು ಹಬ್ಬದ ನಿಮಿತ್ಯ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಆಚರಿಸಲಾಗುತ್ತಿದ್ದು, ಧ್ಯಾನಚಂದ ಅವರು ಸರ್ವಕಾಲಿಕ ಶ್ರೇಷ್ಠ ಕ್ರೀಡಾಪಟುವಾಗಿದ್ದರು. ಧ್ಯಾನಚಂದ್ ಅವರಿಗಿದ್ದ ಮನಸ್ಥಿತಿ ಮತ್ತು ಬದ್ಧತೆ ಯುವ ಕ್ರೀಡಾಪಟುಗಳು ಅನುಕರಿಸಿದರೆ ಯಶಸ್ಸು ಸಾಧ್ಯ. ಹಾಗಾಗಿ ಓದು ಎಷ್ಟು ಮುಖ್ಯವೋ ಅದರಂತೆ ಆಟದಲ್ಲಿ ಭಾಗವಹಿಸುವುದು ಅಷ್ಟೇ ಮುಖ್ಯ. ಇದರಿಂದ ಆರೋಗ್ಯವು ಸದೃಢವಾಗುತ್ತದೆ. ದೈಹಿಕ ಸಾಮಥ್ರ್ಯದ ಜೊತಗೆ ಕ್ರೀಡೆಯು ಮಾನಸಿಕ ಆರೋಗ್ಯವನ್ನು ಬೆಂಬಲಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ ಮಾತನಾಡಿ, ಒಬ್ಬ ವಿದ್ಯಾರ್ಥಿಯ ಬದುಕಿನಲ್ಲಿ ಮಹತ್ವದ ಹಾಗೂ ಶಾಶ್ವತ ಬದಲಾವಣೆ ತರುವ ಶಿಕ್ಷಕರ ಕೆಲಸ ಮಹತ್ವದಾಗಿದೆ. ಬುದ್ಧಿ ಕಲಿಸಿ, ಬದುಕಿನ ಮಾರ್ಗ ತೋರಿದ ಶಿಕ್ಷಕರಿಗೆ ಗೌರವ ನೀಡಬೇಕು. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಬಂಧವನ್ನು ಆಚರಿಸುವ ಮತ್ತು ಶಿಕ್ಷಕರು ತಮ್ಮ ವೃತ್ತಿಗೆ ತರುವ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಉತ್ಸಾಹವನ್ನು ಗುರುತಿಸುವ ದಿನವಾಗಿದೆ. ಭಾರತದ ಮೊಟ್ಟ ಮೊದಲ ಶಿಕ್ಷಕಿ, ದಣಿವರಿಯದ ಸತ್ಯಶೋಧಕಿ, ಆಧುನಿಕ ಶಿಕ್ಷಣದ ತಾಯಿ ಸಾವಿತ್ರಿಬಾಯಿ ಪುಲೆ ಅವರು ಬಹಳ ಸರಳ ವ್ಯಕ್ತಿತ್ವ ಹೊಂದಿದ್ದರು ಅವರ ಆದರ್ಶ ಗುಣಗಳು ವಿದ್ಯಾರ್ಥಿಗಳು ತಿಳಿದುಕೊಳ್ಳುವುದು ಅವಶ್ಯಕವಾಗಿದೆ ಎಂದು ಹೇಳಿದರು.
ಕೇಂದ್ರೀಯ ವಿಶ್ವವಿದ್ಯಾಲಯ ಕಡಗಂಚಿಯ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಡಾ.ಸಾಯಿ ಅಭಿನವ, ಮಹಾವಿದ್ಯಾಲಯದ ಸಂಗೀತ ವಿಭಾಗದ ಮುಖ್ಯಸ್ಥೆ ಡಾ.ಸೀಮಾ ಪಾಟೀಲ ಮಾತನಾಡಿದರು. ದೈಹಿಕ ವಿಭಾಗದ ಮುಖ್ಯಸ್ಥರಾದ ಡಾ.ಮಿಲಿಂದ ಸುಳ್ಳದ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಡಾ.ಕಾಮೇಶ ದಾಮಾ ನಿರೂಪಿಸಿ, ವಂದಿಸಿದರು. ಮಹಾವಿದ್ಯಾಲಯದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.