ಸದೃಢ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕರ ಕೊಡುಗೆ ಅನನ್ಯ
ಕಲಬುರಗಿ:ಸೆ.05: ಶಿಕ್ಷಕರು ವಿದ್ಯಾರ್ಥಿಗಳಿಗೆ ಶ್ರೇಷ್ಠ ಜ್ಞಾನ, ಬುದ್ದಿ, ಸಂಸ್ಕಾರ, ಮಾನವೀಯ ಮೌಲ್ಯಗಳು ಮತ್ತು ಸೂಕ್ತ ಮಾರ್ಗದರ್ಶನ ಮಾಡಿ, ಅವರನ್ನು ರಾಷ್ಟ್ರದ ಶ್ರೇಷ್ಠ ಸಂಪನ್ಮೂಲಗಳನ್ನಾಗಿ ತನ್ಮೂಲಕ ಸದೃಢ ರಾಷ್ಟ್ರದ ನಿರ್ಮಾಣಕ್ಕೆ ಅನನ್ಯವಾದ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ನ್ಯೂ ರಾಘವೇಂದ್ರ ಕಾಲನಿಯ ‘ಶ್ರೀ ವಿವೇಕಾನಂದ ಕೋಚಿಂಗ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಜರುಗಿದ ‘ಶಿಕ್ಷಕರ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಸಂಸ್ಥೆಯ ಅಧ್ಯಕ್ಷ ಬಸವರಾಜ ಮಳ್ಳಿ ಮಾತನಾಡಿ, ದೇಶಕ್ಕೆ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಕೊಡುಗೆ ಅಪಾರವಾಗಿದೆ. ನಮ್ಮ ಪ್ರದೇಶ ಹಿಂದುಳಿದಿಲ್ಲ. ಅನೇಕ ಪ್ರತಿಭೆಗಳು ಉನ್ನತವಾದ ಸಾಧನೆಯನ್ನು ಮಾಡುತ್ತಿದ್ದಾರೆಂದರೆ, ಅದಕ್ಕೆ ಈ ಭಾಗದ ಶಿಕ್ಷಕರ ಪರಿಶ್ರಮವೇ ಕಾರಣವಾಗಿದೆ. ಶಿಕ್ಷಕರು ಪಠ್ಯದ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಂಸ್ಕಾರ, ಮಾನವೀಯ ಮೌಲ್ಯಗಳ ಗುಣಗಳನ್ನು ಬೆಳೆಸುವ ಕಾರ್ಯ ನಿರಂತರವಾಗಿ ಮಾಡಬೇಕಾಗಿದೆ ಎಂದರು.
ಶಿಕ್ಷಕಿ ಅಕ್ಷತಾ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.