ವೇದ ಕಾಲದಿಂದಲೂ ಗುರುಗಳಿಗೆ ದೈವಸ್ಥಾನ
ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.05: ಭಾರತೀಯ ಸಂಸ್ಕೃತಿಯಲ್ಲಿ ವೇದ ಕಾಲದಿಂದಲೂ ಗುರುಗಳಿಗೆ ದೈವ ಸ್ಥಾನ ಕಲ್ಪಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ವೇಪಲ್ಲಿ ರಾಧಾಕೃಷ್ಣನ್ ಅವರ 136ನೇ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡು ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಗುರುವಿನ ಅದ್ಭುತ ಶಕ್ತಿಗೆ ಮಹಾಭಾರತದ ದ್ರೋಣಾಚಾರ್ಯರೇ ಜೀವಂತ ಸಾಕ್ಷಿಯಾಗಿದ್ದಾರೆ.
ಒಂದಕ್ಷರ ಕಲಿಸಿದಾತಂ ಗುರು.ಹರ ಮುನಿದರೆ ಗುರು ಕಾಯ್ವನು ಎಂಬ ನಾಣ್ಣುಡಿಯಂತೆ ವಿದ್ಯಾರ್ಥಿಗಳು ಗುರುಗಳನ್ನು ಗೌರವಿಸಿ,ಅವರು ಹೇಳಿದ ಸರಿಮಾರ್ಗದಂತೆ ನಡೆದರೆ ಯಶಸ್ಸು ಖಂಡಿತ ಲಭಿಸುತ್ತದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಬಸಮ್ಮ ಹೊನ್ನೂರಸ್ವಾಮಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪೂಜೆ ನೆರವೇರಿಸಿ ಮಕ್ಕಳಿಗೆ ಶುಭಕೋರಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮಲತ ಉಪನ್ಯಾಸ ನೀಡಿದರು.
ಅರಿವು ಸಾರ್ವಜನಿಕ ಗ್ರಂಥಾಲಯ ಮೇಲ್ವಿಚಾರಕ ಕೆ.ಸಿದ್ದಪ್ಪ,ಅಂಗನವಾಡಿ ಶಿಕ್ಷಕರಾದ ರಾಮಾಂಜನೇಯ, ಗುರುಪ್ರಸಾದ್, ವಿಜಯ ಮುಂಡ್ರಿಗಿ,ಕಾರ್ಯಕರ್ತೆಯರಾದ ಪದ್ಮಾವತಿ, ಶ್ರೀದೇವಿ, ನಿಂಗಮ್ಮ, ಆಶಾ ಕಾರ್ಯಕರ್ತೆಯರಾದ ಯಶೋಧ, ಸುಶೀಲಾ,ವಿದ್ಯಾರ್ಥಿ ಪ್ರತಿನಿಧಿ ಕೆ.ಎಸ್. ಅನುಷ ಮುಂತಾದವರು ಉಪಸ್ಥಿತರಿದ್ದರು.