ಹಾರಕೂಡ ಶ್ರೀಗಳ 705ನೇ ತುಲಾಭಾರ
ಬೀದರ್ :ಸೆ.5:ಜೀವಾತ್ಮವನ್ನು ದಿವ್ಯಾತ್ಮದೆಡೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ತಾನು ನಂಬಿದ ಧರ್ಮಪೀಠದೆಡೆಗೆ ಭಕ್ತಿ ಶ್ರದ್ಧೆಯಿಂದ ಕಾಲು ನಡಿಗೆಯಲ್ಲಿ ಯಾತ್ರೆ ಮಾಡುವುದು ನಮ್ಮ ಧರ್ಮ ಪರಂಪರೆಯ ಒಂದು ಭಾಗವೇ ಆಗಿದೆ ಎಂದು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ಶ್ರಾವಣ ಮಾಸದ ಪ್ರತಿದಿನ ಗದಲೇಗಾಂವ ಬಿ. ಗ್ರಾಮದಿಂದ ಹಾರಕೂಡ ಶ್ರೀಮಠಕ್ಕೆ ಪಾದಯಾತ್ರೆ ಕೈಗೊಂಡಿರುವ ಭಕ್ತರಿಂದ ಶ್ರೀಮಠದಲ್ಲಿ ಆಯೋಜಿಸಿದ ಗುರುವಂದನೆ ಹಾಗೂ 705ನೇ ತುಲಾಭಾರ ಸೇವೆ ಸಮಾರಂಭದ ಪಾವನ ಸನ್ನಿಧಾನ ವಹಿಸಿ ಮಾತನಾಡಿದ ಶ್ರೀಗಳು, ಭಕ್ತಿಯ ಮಾರ್ಗದಲ್ಲಿ ದೇಹದಂಡನೆಯು ಒಂದು ಬಗೆಯಾಗಿದ್ದು, ಭಕ್ತರೆಲ್ಲರೂ ಒಂದುಗೂಡಿ ಕಾಲುನಡಿಗೆಯಿಂದ ಗುರು ಸನ್ನಿಧಿಗೆ ಹೊರಡುವುದರಿಂದ ಶರಣಾಗತಿ ಭಾವ ಮೂಡಿ ಬರುತ್ತದೆ.
ನಾವೆಲ್ಲರೂ ಒಂದು ಎಂಬ ಐಕ್ಯ ಮನಸ್ಥಿತಿ ಉಂಟಾಗಿ ಸಮಾಧಾನ ಸಂತೃಪ್ತಿ ಲಭಿಸುತ್ತದೆ.
ಒಂದು ತಿಂಗಳ ಕಾಲ ಪ್ರಕೃತಿ ಸೊಬಗು ಅನುಭವಿಸುತ್ತಾ ಬರುವುದರಿಂದ ನಿಸರ್ಗದ ಮಡಿಲಿನಲ್ಲಿ ಪರಮಾತ್ಮನ ಅನುಸಂಧಾನವಾಗಿ ಸೃಷ್ಟಿಕರ್ತನ ಅದ್ಭುತ ಲೀಲಾ ವಿಲಾಸ ಗೋಚರಿಸುತ್ತದೆ.
ಸನ್ಮಾರ್ಗದಲ್ಲಿ ನಡೆಯುವ ಪಥಿಕರು ನಾವು ಎಂಬ ಮನೋಧೋರಣೆಯಿಂದ ಬದುಕು ಸಾಗಿಸುವಂತಾಗುತ್ತದೆ.
ಗದಲೇಗಾಂವ ಬಿ. ಗ್ರಾಮದ ಎಲ್ಲಾ ಪಾದಯಾತ್ರಿಗಳು ಭಕ್ತಿಯಿಂದ ಸಮರ್ಪಿಸಿದ ಗುರು ಸೇವೆಯಿಂದ ಚನ್ನಬಸವ ಶಿವಯೋಗಿಗಳು ಖಂಡಿತ ತೃಪ್ತರಾಗಿದ್ದು ಎಲ್ಲರ ಬದುಕಿನ ಯಾತ್ರೆ ಸಂಭ್ರಮದಿಂದ ಕಂಗೊಳಿಸಲಿ ಶ್ರೇಯಸ್ಸಿನಿಂದ ಕೂಡಿರಲಿ ಎಂದು ಶುಭ ಹಾರೈಸಿದರು.
ವಿಠಲ ಹೂಗಾರ ಸ್ವಾಗತಿಸಿದರು.
ಗುರುಲಿಂಗಪ್ಪ ದೇಗಾಂವ ಕಾರ್ಯಕ್ರಮವನ್ನು ನಿರೂಪಿಸಿದರು.
ಲಿಂಗಮ್ಮ ಹೂಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕುಮಾರಿ ಶ್ರೇಯಾ ಪೂಜಾರಿ ವಚನ ಗಾಯನ ಸಾದರಪಡಿಸಿದರು.
ಕಾರ್ತಿಕ ಸ್ವಾಮಿ ಯಲದಗುಂಡಿ, ತಾತೇರಾವ ನಸರವಾಡಿ, ಸಂತೋಷಿ ಹಡಪದ ಸಂಗೀತ ಸೇವೆ ಸಲ್ಲಿಸಿದರು.
ಕುಮಾರಿ ಮಾನಸಿ ಮತ್ತು ಮಯೂರ ವಚನ ನ್ರತ್ಯ ನಡೆಸಿಕೊಟ್ಟರು.