ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ
ಲಕ್ಷ್ಮೇಶ್ವರ, ಸೆ5: ತಾಲೂಕಿನ ದೊಡ್ಡೂರು ಗ್ರಾಮದ ರೈತರು ಕೃಷಿ ಕೂಲಿ ಕಾರ್ಮಿಕರು ಮತ್ತು ಗ್ರಾಮಸ್ಥರು ನಿನ್ನೆ ದೊಡ್ಡೂರಿನಿಂದ ಹೆಸರೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕೂಡಲೇ ದುರಸ್ತಿ ಮಾಡುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿಯ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಅಮರಪ್ಪ ಗುಡಗುಂಟಿ ಅವರು ದೊಡ್ಡೂರು ಹೆಸರೂ ರು ಮಧ್ಯದ ಸುಮಾರು ಒಂದು ಕಿಲೋಮೀಟರ್ ರಸ್ತೆ, ಸಂಪೂರ್ಣ ಗುಂಡಿಯಿಂದ ತುಂಬಿಕೊಂಡಿದ್ದು ರೈತರ ಜಮೀನುಗಳು ಇಲ್ಲಿಯೇ ಇದ್ದು ಈಗ ಫಸಲು ಬಂದಿದ್ದರೂ ಅವುಗಳನ್ನು ಜಮೀನುಗಳಿಂದ ಮನೆಗೆ ತರಲು ಆಗುತ್ತಿಲ್ಲ ಆದ್ದರಿಂದ ಯಾವುದಾದರೂ ಯೋಜನೆಯಲ್ಲಿ ಅನುದಾನ ಕಲ್ಪಿಸಿ ರಸ್ತೆ ನಿರ್ಮಾಣ ಮಾಡಲೇಬೇಕು ಎಂದು ಅಧಿಕಾರಿಗಳಿಗೆ ಒತ್ತಾಯಿಸಿದರು.
ಆಗ ಸ್ಥಳದಲ್ಲಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಪ್ಪ ತೋಟದವರು ಈಗಾಗಲೇ ಈ ರಸ್ತೆಯ ಕುರಿತು ಸರ್ಕಾರದ ಗಮನಕ್ಕೂ ಸಹ ತರಲಾಗಿದೆ ಮತ್ತು ತಾಲೂಕಾ ಪಂಚಾಯತಿಯ ಕ್ರಿಯಾಯೋಜನೆಯಲ್ಲಿ 10 ಲಕ್ಷ ರೂಗಳ ಅನುದಾನವನ್ನು ಕಲ್ಪಿಸಿ ಅನುಮೋದನೆಗಾಗಿ ಕಳಿಸಲಾಗಿದೆ ಅನುದಾನ ಲಭ್ಯವಾದ ಕೂಡಲೇ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದರು.
ಆದರೆ ರೈತರು ಸ್ಥಳೀಯವಾಗಿ ವಿವಿಧ ಯೋಜನೆಗಳಲ್ಲಿ ಲಭ್ಯವಿರುವ ಅನುದಾನವನ್ನು ಉಪಯೋಗ ಮಾಡಲೇಬೇಕು ಎಂದು ಬಿಗಿಪಟ್ಟು ಹಿಡಿದರು ಆಗ ಪಿಡಿಒ ಬಳಕೆಯಾಗದೇ ಇರುವ ಅನುದಾನವನ್ನು ಸಭೆಯಲ್ಲಿ ಅನುಮೋದನೆ ಪಡೆದು ಸಾಧ್ಯವಾದ ಮಟ್ಟಿಗೆ ಒದಗಿಸುವದಾಗಿ ಹೇಳಿದರು.
ಪ್ರತಿಭಟನೆಯಲ್ಲಿ ಮಹದೇವಪ್ಪಾರಗಟ್ಟಿ ಎಲ್ಲಪ್ಪ ತೋಟದ ಬಸಪ್ಪ ಬಾಗಲದ ಬಸಪ್ಪ ಡೊಳ್ಳಿನ ಭೀಮನಗೌಡ್ರು ಇಳಿಗೇರ ಬಸವರಾಜ್ ಮಕರಬಿ ಬಸಪ್ಪ ಬಾಗಲದ ಬಸಪ್ಪ ಡೊಳ್ಳಿನ ಗಜೇಂದ್ರ ಮಕರಬಿ ರಾಮಣ್ಣ ಹರವಿ ರಾಮಣ್ಣ ಸ್ವಾದಿ ನಿಂಗಪ್ಪ ಕಳ್ಳಳ್ಳಿ ಪಕ್ಕಿರೇಶ ಮತ್ತೂರ ಗಣೇಶ ಲಮಾಣಿ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು ಇದ್ದರು.
ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಅಧಿಕಾರಿಗಳ ಆಶ್ವಾಸನೆ ನೀಡಿದ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆಯನ್ನು ಕೈಬಿಟ್ಟರು.