ಡಯಾಲಿಸಿಸ್‌ ರೋಗಿಗಳಿಗೆ ಉಚಿತ ವಾಹನ ಸೇವೆಗೆ ಚಾಲನೆ
ಸಂಜೆವಾಣಿ ವಾರ್ತೆ
ದಾವಣಗೆರೆ,ಸೆ.೫;- ಮಧ್ಯಕನಾಟಕದಲ್ಲಿ ಸೂಪರ್‌ ಸ್ಪೆಷಾಲಿಟಿ ಆರೋಗ್ಯ ಸೇವೆ ಒದಗಿಸುತ್ತಿರುವ ಎಸ್.ಎಸ್‌.ನಾರಾಯಣ ಹೆಲ್ತ್‌ ಆಸ್ಪತ್ರೆ ವತಿಯಿಂದ ಡಯಾಲಿಸಿಸ್‌ ರೋಗಿಗಳಿಗೆ ಉಚಿತ ವಾಹನ ಸೇವೆಗೆ  ಲೋಕಸಭಾಸದಸ್ಯರಾದ  ಶ್ರೀಮತಿ ಡಾ.ಪ್ರಭಾ ಮಲ್ಲಿಕಾರ್ಜುನ  ಇಂದು ಚಾಲನೆ ನೀಡಿದರು.ಉಚಿತವಾಹನ ಸೇವೆಯ ಕುರಿತು ಹರ್ಷ ವ್ಯಕ್ತಪಡಿಸುತ್ತ ಮಾತನಾಡಿದ ಲೋಕಸಭಾ ಸದಸ್ಯರು, ಕಳೆದ 11 ವರ್ಷಗಳಿಂದ ಹೃದಯ ಸಂಬಂಧಿ ಸಮಸ್ಯೆಗಳಿಗೆ ಅತ್ಯುತ್ತಮ ಆರೈಕೆ ಒದಗಿಸುತ್ತಿರುವ ಎಸ್‌ ಎಸ್‌ ನಾರಾಯಣ ಹೆಲ್ತ್‌ ಇದರ ಮುಂದುವರೆದ ಭಾಗವಾಗಿ ಸೂಪರ್‌ ಸ್ಪೆಷಾಲಿಟಿ ಸೇವಾ ವಿಭಾಗಗಳಾದ ನರರೋಗ ವಿಜ್ಞಾನ, ಮೂತ್ರಪಿಂಡ, ಮೂತ್ರಕೋಶ ವಿಜ್ಞಾನ ಮತ್ತು ಗ್ಯಾಸ್ಟ್ರೊಎಂಟರಾಲಜಿ ಚಿಕಿತ್ಸೆಗಳನ್ನು ಒದಗಿಸುತ್ತಿದೆ.ಮೂತ್ರಪಿಂಡ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಡಯಾಲಿಸಿಸ್‌ ಚಿಕಿತ್ಸೆ ಅಗತ್ಯವಿದ್ದು, ಇಂತಹ ಸಂದರ್ಭಗಳಲ್ಲಿ ಉಚಿತ ವಾಹನ ಸೇವೆಯು ಅತ್ಯಂತ ಪ್ರಯೋಜನಕಾರಿಯಾಗಲಿದೆ. ಈ ಮೂಲಕ ಡಯಾಲಿಸಿಸ್‌ನ ಸಮಯಪಾಲನೆ ಜೊತೆಗೆ, ಓಡಾಟದ ವೆಚ್ಚವು ಉಳಿತಾಯವಾಗಲಿದೆ. ಎಸ್‌ ಎಸ್‌ ನಾರಾಯಣ ಹೆಲ್ತ್‌ನ ಈ ಹೊಸ ಯೋಜನೆಯು ಸಮಾಜಮುಖಿಯಾಗಿದ್ದು ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಎಸ್ ಎಸ್‌ ನಾರಾಯಣ ಹೆಲ್ತ್‌ ದಾವಣಗೆರೆ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ  ಸುನಿಲ್‌ ಭಂಡಾರಿಗಲ್‌ ರವರು ಮಾತನಾಡಿ 2012ನೇ ಇಸವಿಯಿಂದ ಎಸ್. ಎಸ್.‌ ಐ. ಎಮ್.‌ ಎಸ್ &‌ ಆರ್‌.ಸಿ ಜೊತೆ ಕೈ ಜೋಡಿಸಿರುವ ನಾರಾಯಣ ಹೆಲ್ತ್‌, ಕಳೆದ 11 ವರ್ಷಗಳಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಹೃದಯರೋಗಿಗಳಿಗೆ ಚಿಕಿತ್ಸೆ ಒದಗಿಸಿದ್ದು, ಕಳೆದ 8 ತಿಂಗಳುಗಳಿಂದ ನರರೋಗ, ಮೂತ್ರಪಿಂಡ, ಮೂತ್ರಕೋಶ ಮತ್ತು ಗ್ಯಾಸ್ಟ್ರೊಎಂಟರಾಲಜಿ ಸಂಬಂಧಿತ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುತ್ತಿದೆ. ದಾವಣಗೆರೆಯ ಸುತ್ತಲಿನ 25 ಕಿಲೊಮೀಟರ್ ವ್ಯಾಪ್ತಿಯ ಡಯಾಲಿಸಿಸ್‌ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಉಚಿತ ವಾಹನ ಸೌಲಭ್ಯ ಇಂದಿನಿಂದ ಲಭ್ಯವಿದೆ. ನಮ್ಮ ಜನಪ್ರಿಯ ಲೋಕಸಭಾ ಸದಸ್ಯರು ಈ ಉಚಿತ ವಾಹನ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿರುವುದು ಮಧ್ಯಕರ್ನಾಟಕದ ಜನತೆಗೆ ಸೂಕ್ತ ಆರೋಗ್ಯ ಸೇವೆ ನೀಡುವಲ್ಲಿ ಮತ್ತೊಂದು ಮೈಲಿಗಲ್ಲು ಎಂದು ತಿಳಿಸಿದರು.ಕಾಯಕ್ರಮದಲ್ಲಿ ಎಸ್.‌ಎಸ್.‌ಐ.ಎಂ.ಎಸ್‌ & ಆರ್‌ ಸಿ ವೈದ್ಯಕೀಯ ನಿರ್ದೇಶಕರಾದ ಡಾ. ಅರುಣ್‌ ಅಜ್ಜಪ್ಪ, ಮೂತ್ರಪಿಂಡ ಚಿಕಿತ್ಸಾ ತಜ್ಞರಾದ ಡಾ.ಪ್ರಮೋದ್‌.ಜಿ.ಆರ್ ಮತ್ತು ಎಸ್.‌ ಎಸ್.ನಾರಾಯಣ ಹೆಲ್ತ್‌ ಆಸ್ಪತ್ರೆಯ ಇತರೆ ವೈದ್ಯರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.