ಆ ಮನುಷ್ಯ ಎಷ್ಟು ಕಟುಕ, ಕ್ರೂರಿ ಇರಬೇಕು; ರೇಣುಕಾಸ್ವಾಮಿ ತಂದೆ ಆಕ್ರೋಶ
ಸಂಜೆವಾಣಿ ವಾರ್ತೆ
ಚಿತ್ರದುರ್ಗ,ಸೆ.05: ರೇಣುಕಾಸ್ವಾಮಿ ಕೊಲೆ ಮಾಡಿರುವ ನಟ ದರ್ಶನ್, ಪವಿತ್ರಾಗೌಡ ಹಾಗೂ ಸಹಚರರು ನಮ್ಮ ಮಗನ ರೀತಿಯೇ ಪ್ರಾಣ ಭಿಕ್ಷೆ ಬೇಡಬೇಕು, ನರಳುತ್ತಾ ಇರಬೇಕು ಎಂದು ರೇಣುಕಾಸ್ವಾಮಿ ತಂದೆ ಕಾಶವಿಶ್ವಾನಾಥಯ್ಯ, ತಾಯಿ ರತ್ನಪ್ರಭಾ ಹಾಗೂ ತಂಗಿ ಸುಚೇತಾ ಶಪಿಸಿದ್ದಾರೆ.ಡಿ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ರೇಣುಕಾಸ್ವಾಮಿ ಸಾವಿನ ಕೊನೆ ಗಳಿಗೆಯ ವಿಡಿಯೋ, ಪೋಟೋಸ್ ಬಯಲಾಗಿರುವ ಹಿನ್ನೆಲೆಯಲ್ಲಿ ಪತ್ರಿಕೆಗೆ ಪ್ರತಿಕ್ರಿಯೇ ನೀಡಿರುವ ರೇಣುಕಾಸ್ವಾಮಿ ಪೋಷಕರು, ಪೋಟೋ ನೋಡಿದ ಕೂಡಲೇ ಮನಸ್ಸಿಗೆ ತುಂಬಾ ನೊವ್ವಾಗಿದೆ. ನಾವು ಯಾವತ್ತೂ ಬೇಡಿದವರಲ್ಲ, ಅಂತದರಲ್ಲಿ ನಮ್ಮ ಮಗ ಅವರಲ್ಲಿ ಪ್ರಾಣ ಭಿಕ್ಷೆ ಬೇಡಿದ್ದಾನೆ. ಆದರೂ ಅವರಿಗೆ ಕರುಣೆ ಬಂದಿಲ್ಲ ಅಂದರೆ ಆ ಮನುಷ್ಯ ಎಷ್ಟು ಕಟುಕ, ಕ್ರೂರಿ ಇರಬೇಕು ಎಂದು ಕಿಡಿಕಾರಿದರು.ಮಗನ‌ ಸಾವಿನ ಕುರಿತು ಸಾಕಷ್ಟು ಉಹಾಪೋಹಗಳಿದ್ದವು,  ಆದರೆ ಈಗ ಪೋಟೋಗಳನ್ನು ನೋಡಿ ಕೊಲೆಗಡುಕರು ಮನಯಷ್ಯರೋ ಅಥವಾ ಕ್ರೂರಿಗಳೋ. ಇವರುಗಳಿಗೆ ಜನರೆ ಶಿಕ್ಷೆಯನ್ನು ವಿಧಿಸಬೇಕು ಎಂದು ಹೇಳಿದ್ದಾರೆ.ರೇಣುಕಾಸ್ವಾಮಿ ತಂಗಿ ಸುಚೇತಾ ಮಾತನಾಡಿ, ದರ್ಶನ್ ಅಂಡ್ ಟೀಂ ಗೆ ಮನುಷ್ಯತ್ವ ಇಲ್ಲ, ಅವರು ಮನುಷ್ಯರೇ ಅಲ್ಲ. ಯಾರೂ ಕೂಡ ಇಷ್ಟೊಂದು ಕ್ರೂರವಾಗಿ ಸಾಯಿಸುವುದಿಲ್ಲ. ಸಣ್ಣ ಪಿನ್ ಚುಚ್ಚಿದ್ರೆ ನಮಗೆ ನೋವಾಗುತ್ತೆ, ಅಂತದ್ರಲ್ಲಿ ಇವರು ವಿಚಿತ್ರವಾಗಿ ಹಿಂಸೆ ಕೊಟ್ಟಿದ್ದಾರೆ ನಮ್ಮ ಅಣ್ಣನ ಸ್ಥಿತಿಯೇ ಇವರುಗಳಿಗೂ ಬರಬೇಕು ಎಂದು ಶಾಪ ಹಾಕಿದರು.ಅಭಿಮಾನಿಯನ್ನ ತಮ್ಮನ ರೀತಿ ನೋಡುವ ಎಷ್ಟೋ ಕಲಾವಿದರು ಇದ್ದಾರೆ. ತಪ್ಪು ಏನೇ ಮಾಡಿದ್ರು ಇವನೂ ಕೂಡ ನನ್ನ ತಮ್ಮ ಎಂದು ಭಾವಿಸಬೇಕಿತ್ತು. ಇನ್ನೊಮ್ಮೆ ಈ ರೀತಿ ಮಾಡಬೇಡ ಎಂದು ಯಾವ ಕಂಡಿಷನ್ ಹಾಕಿ ಕಳಿಸಿದ್ರು ಅದೇ ರೀತಿ ನಾವು ನೋಡ್ಕೊಳುತ್ತಿದ್ದೆವು. ನಮ್ಮ ತಂದೆ-ತಾಯಿ ಮೊಮ್ಮಗಳಿಗೂ ಹೊಡೆದವರಲ್ಲ. ಮಕ್ಕಳನ್ನು ತುಂಬಾ ಪ್ರೀತಿಯಿಂದ ಸಾಕಿದ್ದಾರೆ. ಅಣ್ಣನ ಪೋಟೋ ನೋಡಿದ ಕೂಡಲೇ ತಂದೆ ಕುಸಿದು ಹೋದರು. ಕ್ಷಮಿಸಿ ಕಳಿಸಿದ್ರೆ ನಮ್ಮ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುತ್ತಿರಲಿಲ್ಲ ಎಂದು‌ ತಮ್ಮ ರೋಧನೆ ವ್ಯಕ್ತಪಡಿಸಿದರು.ನಮ್ಮ ಅಣ್ಣ ನರಳಿ ಪ್ರಾಣ ಬಿಟ್ಟಿದ್ದಾನೆ. ಅಷ್ಟೊಂದು ಹಿಂಸೆ ಕೊಡುವ ಸ್ಥಿತಿ ಇರಲಿಲ್ಲ. ಮನುಷ್ಯ ಅಂದ ಮೇಲೆ ತಪ್ಪು ಮಾಡುತ್ತಾರೆ. ತಪ್ಪಿಗೆ ಕೊಲೆನೇ ಶಿಕ್ಷೆಯಲ್ಲ. ಪೊಲೀಸರು ಇದ್ದರು. ಕಾನೂನು ಕೈಗೆ ತೆಗೆದುಕೊಳ್ಳಲು ಇವರು ಯಾರು? ಎಂದು ಪ್ರಶ್ನಿಸಿರುವ ಸುಚೇತಾ, ದೊಡ್ಡ ಪ್ರಭಾವಿ ಆಗಿರೋ ದರ್ಶನ್ ಪೊಲೀಸರಿಗೆ ದೂರು ಕೊಟ್ಟಿದ್ದರೆ ಪೊಲೀಸರೇ ಶಿಕ್ಷೆ ಕೊಡುತ್ತಿದ್ದರು. ನನ್ನ ಅತ್ತಿಗೆನ ಅವರ ತಂಗಿ ಸ್ಥಾನದಲ್ಲಿ ನೋಡಿ ಕಳಿಸಬಹುದಿತ್ತು. ದರ್ಶನ್ ಮಾಡುವ ಸಿನಿಮಾ ನೋಡಿ ಬಸ್ ಅನ್ನಬಾರದು. ಅವರ ನಿಜ ಜೀವನದಲ್ಲಿ ಹೇಗಿದ್ದಾರೆ ಎಂದು ತಿಳಿದುಕೊಂಡು ಅಭಿಮಾನಿ ಆಗಿ ಎಂದು ಜನರಲ್ಲಿ ಮನವಿ ಮಾಡಿದರು.ಪವಿತ್ರಾಗೌಡ ತಮ್ಮನಿಗೆ ಈ ಪರಿಸ್ಥಿತಿ ಬಂದಿದ್ದರೆ ಹೇಗಿರುವುದು ಅಂತ ಯೋಚನೆ ಮಾಡಬೇಕಿತ್ತು ? ಪವಿತ್ರಗೌಡ ಪ್ರಚೋದನೆ ಕೊಟ್ಟಿರೋದಕ್ಕೆ ಡಿ ಗ್ಯಾಂಗ್ ಕೊಲೆ ಮಾಡಿದ್ದಾರೆ. ಅವರು ಕೂಡ ಒಂದು ಹೆಣ್ಣಾಗಿ ಅವರಿಗೂ ಕುಟುಂಬ ಇದೆ ಎಂದು ಯೋಚಿಸಿದ್ದರೆ ಅವರಿಗೂ, ನಮಗೂ ಒಳ್ಳೆಯದು ಆಗಿರುತ್ತಿತ್ತು ಎಂದಯ ಹೇಳಿದರು.ಅಶ್ಲೀಲ ಮೆಸೇಜ್ ಕಳುಹಿಸಿದ್ದಾನೆ. ಅಂತ ಮಾದ್ಯಮದ ಮೂಲಕ ನಮಗೆ ತಿಳಿಯಿತು. ಹೆಣ್ಣು ಮಕ್ಕಳಿಗೆ ನಮ್ಮ ಅಣ್ಣ ಗೌರವ ಕೊಡುತ್ತಿದ್ದರು. ಯಾವತ್ತೂ ಈ ರೀತಿ ನಡೆದುಕೊಂಡಿರಲಿಲ್ಲ. ತಪ್ಪು ಮಾಡಿದ್ದರೆ ಪೊಲೀಸರು ಶಿಕ್ಷೆ ಕೊಡುತ್ತಿದ್ದರು. ಇವರು ಯಾರು ಶಿಕ್ಷೆ ಕೊಡಲು ಎಂದು ಆಕ್ರೋಶ ವ್ಯಕ್ತಪಡಿದರು.