ಪಂಪ್‍ಸೆಟ್‍ಗಳಿಗೆ ಆಧಾರ್ ಲಿಂಕ್‍ಗೆ ಖಂಡನೆ
ಸಂಜೆವಾಣಿ ನ್ಯೂಸ್
ಮೈಸೂರು:ಸೆ.05– ಕೃಷಿ ಪಂಪ್‍ಸೆಟ್‍ಗಳಿಗೆ ಆಧಾರ್ ಲಿಂಕ್ ಅಳವಡಿಕೆ ಖಂಡಿಸಿ, ಅಕ್ರಮ ಸಕ್ರಮ ಯೋಜನೆ ಮರು ಜಾರಿಗೆ ಒತ್ತಾಯಿಸಿ ಹಿನಕಲ್ ಬಳಿಯ ಚೆಸ್ಕಾಂ ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ರೈತರ ಕೃಷಿ ಪಂಪ್‍ಸೆಟ್‍ಗಳ ಆರ್‍ಆರ್ ನಂಬರ್‍ಗೆ ಆಧಾರ್ ಲಿಂಕ್ ಮಾಡಿ ಖಾಸಗೀಕರಣ ಮಾಡಿ ಶುಲ್ಕ ವಿಧಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಹುನ್ನಾರ ನಡೆಸಿವೆ. ಕೃಷಿಗೆ ಮೂಲವಾದ ವಿದ್ಯುತ್ ಹಾಗೂ ಟ್ರಾನ್ಸ್‍ಫಾರ್ಮರ್, ವಿದ್ಯುತ್ ಕಂಬ ಮತ್ತು ತಂತಿಯನ್ನು ಇಲಾಖೆಯ ವೆಚ್ಚದಿಂದ ನಿರ್ಮಿಸಿ ಇದಕ್ಕೆ ರೈತರ ವಂತಿಕೆಯಾಗಿ 17ರಿಂದ 23 ಸಾವಿರದವರೆಗೆ ಪಡೆಯಲಾಗುತ್ತಿತ್ತು. ಇದನ್ನು ಕೈ ಬಿಟ್ಟು ರೈತರೇ ನೇರವಾಗಿ ಕೃಷಿ ಪಂಪ್‍ಸೆಟ್‍ಗಳಿಗೆ ಸಂಪರ್ಕ ಪಡೆಯಲು ಲಕ್ಷಾಂತರ ರೂ ಖರ್ಚು ಮಾಡುವ ಪರಿಸ್ಥಿತಿ ತಂದಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ರೈತರ ಕೃಷಿ ಉತ್ಪನ್ನಗಳಿಗೆ ಕಾನೂನು ಬದ್ಧ ವೈಜ್ಞಾನಿಕ ಬೆಂಬಲ ಬೆಲೆಯನ್ನು ಸರ್ಕಾರಗಳು ನೀಡಿಲ್ಲ. ಹೀಗಾಗಿ ಕೃಷಿಗೆ ನೀಡುವ ವಿದ್ಯುತ್ ಸಂಪರ್ಕವನ್ನು ಈ ರೀತಿ ದುಬಾರಿ ವೆಚ್ಚ ಮಾಡಲು ರೈತರನ್ನು ತಳ್ಳುವುದು ಸರಿಯಲ್ಲ. ರಾಜ್ಯ ಸರ್ಕಾರ ಘೋಷಣೆ ಮಾಡಿರುವಂತೆ ಪ್ರತಿ ಕುಟುಂಬಕ್ಕೆ ಯಾವುದೇ ಷರತ್ತಿಲ್ಲದೆ 200 ಯೂನಿಟ್ ಉಚಿತ ವಿದ್ಯುತ್ ನೀಡಬೇಕು. ಸೋಲಾರ್ ಪಂಪ್‍ಸೆಟ್ ಹಾಕಿಸಿಕೊಂಡಿರುವ ರೈತರಿಗೆ ವಿದ್ಯುತ್ ಸಂಪರ್ಕ ಕಡಿತ ಮಾಡುವ ನಿಯಮ ಕೈಬಿಡಬೇಕು. ನಗರ ಮತ್ತು ಗ್ರಾಮೀಣ ಎಂಬ ವಿದ್ಯುತ್ ತಾರತಮ್ಯ ನೀತಿ ಕೈ ಬಿಡಬೇಕು. ಕೃಷಿಗೆ ಕೈಗಾರಿಕೆಗಳಿಗೆ ನೀಡುವಂತೆ ಹಗಲು ವೇಳೆ ವಿದ್ಯುತ್ ನೀಡಬೇಕು. ಭೂ ಸುಧಾರಣಾ ಕಾಯ್ದೆಗೆ ತಕ್ಷಣ ತಿದ್ದುಪಡಿ ಮಾಡಬೇಕು. ಜಿಂದಾಲ್ ಕಂಪನಿಗೆ ನೀಡಿರುವ ಸರ್ಕಾರಿ ಭೂಮಿಯನ್ನು ತಕ್ಷಣ ಹಿಂಪಡೆಯಬೇಕು. ಸೋಲಾರ್ ವಿದ್ಯುತ್ ಅಳವಡಿಕೆಗೂ ಸಹ ಅಕ್ರಮ ಸಕ್ರಮ ಮಾದರಿಯಲ್ಲಿ ಹಣ ಕಟ್ಟಿಸಿಕೊಂಡು 90ರಷ್ಟು ಸಹಾಯಧನ ನೀಡಿ ರೈತರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಗ್ರಾಮೀಣ ಭಾಗದಲ್ಲಿ ಹೆಚ್ಚುವರಿ ಟಿಸಿಗಳ ಅಳವಡಿಕೆಗೆ ನಿರ್ಬಂಧ ಹಾಕದೆ ಕೃಷಿಗೆ ಅನುಕೂಲಕವಾಗುವಂತೆ ರೈತರಿಗೆ ಸರ್ಕಾರ ಅನುಕೂಲ ಮಾಡಿಕೊಡಬೇಕು. ಕಾಡು ಪ್ರಾಣಿಗಳ ಹಾವಳಿ ಇರುವುದರಿಂದ ತೋಟದ ಮನೆಗಳಿಗೂ ಸಹ ನಿರಂತರ ಜ್ಯೋತಿ ಯೋಜನೆ ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಉಪಾಧ್ಯಕ್ಷ ಕೆರೆಹುಂಡಿ ರಾಜಣ್ಣ, ಹನುಮಯ್ಯ ಚಾಮರಾಜನಗರ ಜಿಲ್ಲಾಧ್ಯಕ್ಷ ನಾಗರಾಜ್, ಹಾಡ್ಯ ರವಿ, ಮಲಿಯೂರು ಹರ್ಷ, ಮಹೇಂದ್ರ, ಮುದ್ದಳ್ಳಿ ಚಿಕ್ಕಸ್ವಾಮಿ, ಹೊಸಪುರ ಮಾದಪ್ಪ, ಮೂಡ್ನಾಕೂಡು ಸೋಮೇಶ್, ದೇವೇಂದ್ರ ಕುಮಾರ್, ಶಿವರುದ್ರಪ್ಪ, ಕಸುನಹಳ್ಳಿ ಮಂಜೇಶ್, ಬನ್ನೂರು ಎಂ.ವಿ.ಕೃಷ್ಣಪ್ಪ, ಸುಜ್ಜಲೂರು ಜಯಸ್ವಾಮಿ, ಅರಳಿಕಟ್ಟೆ ಕುಮಾರ್, ಅಂಬಳೆ ಮಹದೇವಸ್ವಾಮಿ, ಊಡಿಗಾಲ ಮಂಜುನಾಥ್, ಕೆರೆಹುಂಡಿ ಶಿವಣ್ಣ, ಮುದ್ದಳ್ಳಿ ಕುಮಾರ್, ರೇವಣ್ಣ, ದೇವಿರಮ್ನಳ್ಳಿ ಕುಮಾರ್, ಮಹೇಶ್, ಹಂಡುವಿನಹಳ್ಳಿ ರವಿ, ಬೆಳ್ತೂರು ನಂಜಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.