ಸಂಭ್ರಮದಿಂದ ಪ್ರವಾಸೋದ್ಯಮ ದಿನ ಆಚರಿಸಿ
ಸಂಜೆವಾಣಿ ನ್ಯೂಸ್
ಮೈಸೂರು:ಸೆ.05– ಪ್ರವಾಸೋದ್ಯಮ ಮತ್ತು ಶಾಂತಿ ಎಂಬ ಧ್ಯೇಯ ವಾಕ್ಯದೊಂದಿಗೆ ಸೆ.27ರಂದು ಬೆಳಗ್ಗೆ 10 ಗಂಟೆಗೆ ಮೈಸೂರು ಅರಮನೆಯ ಆವರಣದಲ್ಲಿ ವಿಶ್ವ ಪ್ರವಾಸೋದ್ಯಮ ದಿನವನ್ನು ಸಂಭ್ರಮದಿಂದ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದರು.
ನಗರದ ಜಲದರ್ಶಿನಿಯ ಅತಿಥಿಗೃಹದಲ್ಲಿ ಬುಧವಾರ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ, ವಿಶ್ವವಿಖ್ಯಾತ ಮೈಸೂರು ದಸರಾ ಹಾಗೂ ಬ್ಲಾಗರ್ಸ್ ಮೀಟ್ ಮತ್ತು ಇತರೆ ಪ್ರವಾಸೋದ್ಯಮ ಚಟುವಟಿಕೆಗಳ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು.
ಪ್ರವಾಸೋದ್ಯಮ ಮತ್ತು ಶಾಂತಿ ಎಂಬ ವಿಷಯದ ಮೇಲೆ ಹತ್ತು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವದು ಉತ್ತಮ ಪರಿಕಲ್ಪನೆಯಾಗಿದೆ. ಕಾರ್ಯಕ್ರಮದ ದಿನದಂದು ಅರಮನೆಯ ಮುಂಭಾಗದಲ್ಲಿ ಹೆಚ್ಚಿನ ಅತಿಥಿ ಪ್ರವಾಸಿಗರನ್ನು ಆಹ್ವಾನಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿ. ಮೈಸೂರು ವಿಶ್ವ ಭೂಪಟದಲ್ಲಿ ತನ್ನದೇ ಆದ ವಿಶಿಷ್ಟ ಹೆಸರು ಮಾಡಿದೆ. ನಗರಕ್ಕೆ ನಿತ್ಯ ದೇಶ ವಿದೇಶದ ಸಾವಿರಾರು ಮಂದಿ ಪ್ರವಾಸಿಗರು ಬರುತ್ತಾರೆ. ಹೀಗಾಗಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡುವ ಮೂಲಕ ಮೈಸೂರಿನ ವಿಶೇಷತೆಗಳನ್ನು ಪ್ರವಾಸಿಗರಿಗೆ ತಿಳಿಸಿ ಎಂದು ಹೇಳಿದರು.
ವಿವಿಧ ಜಾನಪದ ಕಲಾ ತಂಡಗಳ ಮೆರಣಿಗೆ, ನೃತ್ಯ ಪ್ರದರ್ಶನ ಸೇರಿದಂತೆ ಪ್ರವಾಸಿಗರ ಗಮನ ಸೆಳೆಯುವಂತಹ ಕಾರ್ಯಕ್ರಮ ಆಯೋಜಿಸಿ. ಕಲಾತಂಡಗಳನ್ನು ಹೊರತುಪಡಿಸಿ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳೀಯ ಸಂಸ್ಕೃತಿ ಬಿಂಬಿಸುವಂಥ ಧಿರಿಸನ್ನು ಧರಿಸಬೇಕು. ಮೈಸೂರು ಕೇವಲ ಅರಮನೆಗಳ ನಗರಿ ಮಾತ್ರವಲ್ಲದೆ ಸಾಂಸ್ಕøತಿಕ, ಪಾರಂಪರಿಕ ನಗರಿಯೂ ಹೌದು. ಹೀಗಾಗಿ ಮೈಸೂರಿನ ಸಂಸ್ಕøತಿ, ಪರಂಪರೆಯನ್ನು ವಿಶ್ವದ ಎದುರು ತೆರೆದಿಡಬೇಕು. ಇದಕ್ಕಾಗಿ ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಮೈಸೂರು ಅರಮನೆ ಮಂಡಳಿಯ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಪ್ರಭುಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.