ಅಧಿಕಾರ ಯಾರಿಗೂ ಶಾಶ್ವತವಲ್ಲ: ಅಂಚಿ ಸಣ್ಣಸ್ವಾಮಿಗೌಡ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.05: ಅಧಿಕಾರ ಯಾರಿಗೂ ಶಾಶ್ವತವಲ್ಲ ಅಧಿಕಾರ ಸಿಕ್ಕಾಗ ಸೇವಾ ಮನೋಭಾವನೆಯಿಂದ ಸೇವೆ ಸಲ್ಲಿಸಬೇಕು ಈ ನಿಟ್ಟಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕಿನ ಶಿಕ್ಷಕರ ಸೇವೆ ಮಾಡುತ್ತಿದೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ವಿಶ್ರಾಂತ ಶಿಕ್ಷಕರಾದ ಡಾ.ಅಂ.ಚಿ.ಸಣ್ಣಸ್ವಾಮಿಗೌಡ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ನಿರ್ಗಮಿತ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪದ್ಮೇಶ್ ಅವರಿಂದ ಹೆಚ್.ಆರ್.ಪೂರ್ಣಚಂದ್ರತೇಜಸ್ವಿ ಯವರಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತಮ್ಮ ಸೇವಾವಧಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳನ್ನು ಸುಶಿಕ್ಷಿತರನ್ನಾಗಿ ಮಾಡಿ ಉತ್ತಮ ಸಮಾಜದ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಳ್ಳುವ ಪವಿತ್ರ ಶಿಕ್ಷಕ ವೃತ್ತಿಯಲ್ಲಿ ನಾವೆಲ್ಲರೂ ಕೆಲಸ ನಿರ್ವಹಿಸುತ್ತಿದ್ದು ತಾಲ್ಲೂಕಿನ ಸಮಸ್ತ ಶಿಕ್ಷಕರ ಕುಂದುಕೊರತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಪದ್ಮೇಶ್ ತಂಡಕ್ಕೆ ಶಿಕ್ಷಕರು ಆಶೀರ್ವಾದ ಮಾಡಿದ್ದರು. ಅದರಂತೆ ಶಿಕ್ಷಕರ ನೋವುನಲಿವುಗಳಲ್ಲಿ ಕಷ್ಟಸುಖಗಳಲ್ಲಿ ಸಂಘಟನೆಯ ಎಲ್ಲಾ ಸದಸ್ಯರುಗಳು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ತಾಲ್ಲೂಕಿನಾದ್ಯಂತ ಶಿಕ್ಷಕರ ಸೇವೆಯಲ್ಲಿ ತೊಡಗಿರುವುದು ಸಂತಸದ ವಿಷಯ. ಧರ್ಮಪ್ಪ, ಪದ್ಮೇಶ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರಿಗೆ ಚುನಾವಣೆಯ ನಂತರ ಮಾತುಕತೆಯ ಮೂಲಕ ಅಧಿಕಾರ ಹಂಚಿಕೆ ಮಾಡಲಾಗಿತ್ತು ಅದರಂತೆ ಎಲ್ಲರೂ ನಡೆದುಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ಹಗಲುರಾತ್ರಿ ಎನ್ನದೇ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸುತ್ತಿದ್ದಾರೆ. ಈ ಅವಧಿಯಲ್ಲಿ ಹೆಚ್.ಆರ್.ಪೂರ್ಣಚಂದ್ರ ತೇಜಸ್ವಿಯವರು ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಉತ್ತಮ ಕೆಲಸಗಳನ್ನು ಮಾಡಲಿ ಎಂದು ಶುಭಕೋರಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಪೂರ್ಣಚಂದ್ರ ತೇಜಸ್ವಿ ಅಧಿಕಾರ ಸ್ವೀಕರಿಸಿ ಮಾತನಾಡಿ ಶಿಕ್ಷಕ ಸಮೂಹ ನಮ್ಮ ತಂಡದ ಮೇಲೆ ನಂಬಿಕೆ ಇಟ್ಟು ನಮಗೆ ಅಧಿಕಾರ ಹಿಡಿಯಲು ಅವಕಾಶ ಮಾಡಿಕೊಟ್ಟ ದಿನದಿಂದಲೂ ನಾವುಗಳೆಲ್ಲರೂ ತಾಲ್ಲೂಕಿನ ಸಮಸ್ತ ಶಿಕ್ಷಕರ ಸಮಸ್ಯೆಗಳೀಗೆ ಸ್ಪಂದಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾ ಬಂದಿದ್ದೇವೆ. ಧರ್ಮಪ್ಪ ಹಾಗೂ ಪದ್ಮೇಶ್ ಹಿರಿಯರ ಮಾರ್ಗದರ್ಶನದಂತೆ ಅಧಿಕಾರ ಶಾಶ್ವತವಲ್ಲ ಎಂಬುದನ್ನು ಅರಿತು ಸಕಾಲದಲ್ಲಿ ಬೇರೆಯವರಿಗೆ ಅಧಿಕಾರ ಹಸ್ತಾಂತರಿಸಿ ಇತರರಿಗೆ ಮಾದರಿಯಾಗಿದ್ದಾರೆ. ನಾವೆಲ್ಲರೂ ತಾಲ್ಲೂಕಿನ ಶಿಕ್ಷಣದ ತೇರನ್ನು ಎಳೆಯುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡೋಣ ಶಿಕ್ಷಕರ ಸಂಘದ ನೂತನ ಅಧ್ಯಕ್ಷನಾಗಿ ಬದ್ಧತೆಯಿಂದ ಕೆಲಸ ಮಾಡುವ ಮೂಲಕ ಶಿಕ್ಷಕರ ಕುಂದುಕೊರತೆಗಳಿಗೆ ಧನಿಯಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಸೀತಾರಾಮು, ನಿವೃತ್ತ ಶಿಕ್ಷಕರಾದ ರಂಗಸ್ವಾಮಿ, ನಿಂಗೇಗೌಡ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ಆರ್.ರವಿಶಂಕರ್, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಲ್.ಎಸ್.ಧರ್ಮಪ್ಪ, ಸಹಕಾರ್ಯದರ್ಶಿ ಸಂದ್ಯರಾಣಿ, ಶಿಕ್ಷಣ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ.ರಮೇಶ್ ಗ್ರಾಪಂ ಸದಸ್ಯ ಶೀಳನೆರೆ ಸಿದ್ದೇಶ್, ಸೇರಿದಂತೆ ಶಿಕ್ಷಕರ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.