ಅಲ್ಪಸಂಖ್ಯಾತರಿಗೆ ಸೌಲಭ್ಯ ತಲುಪಿಸಲು ಕ್ರಮ: ನಿಸ್ಸಾರ್ ಅಹಮ್ಮದ್
ಕೋಲಾರ, ಸೆ,೫- ಸರ್ಕಾರವು ಅಲ್ಪಸಂಖ್ಯಾತರಿಗಾಗಿ ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳತಕ್ಕದ್ದು ಎಂದು ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಯು. ನಿಸ್ಸಾರ್ ಅಹಮ್ಮದ್ ತಿಳಿಸಿದರು.
ಇಂದು ನಗರದ ಹೊರವಲಯದಲ್ಲಿರುವ ಮೌಲಾನಾ ಆಜಾದ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಅಲ್ಪಸಂಖ್ಯಾತರ ಮಹಿಳಾ ಸರ್ಕಾರೇತರ ಸಂಸ್ಥೆಯವರು ಮತ್ತು ಪ್ರತಿಷ್ಠಿತ ಮಹಿಳಾ ಸಮಾಜ ಸೇವಕರಿಗೆ ಸರ್ಕಾರಿ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಲ್ಪಸಂಖ್ಯಾತರೆಂದರೆ ಕೇವಲ ಇಸ್ಲಾಂ ಧರ್ಮದವರಲ್ಲದೇ ಕ್ರಿಶ್ಚಿಯನ್, ಬೌಧ್ದ, ಪಾರ್ಸಿ, ಜೈನ ಮುಂತಾದ ಹಲವು ಸಮುದಾಯಗಳು ಸೇರಿವೆ. ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಕಛೇರಿ, ತಾಲ್ಲೂಕು ಮಾಹಿತಿ ಕೇಂದ್ರ, ಅಂಗನವಾಡಿ ಕೇಂದ್ರಗಳು, ಒನ್‌ಸ್ಟಾಪ್ ಸಖಿ ಕೇಂದ್ರಗಳು, ಸ್ವಾಧಾರ ಗೃಹಗಳು, ಸಾಂತ್ವನ ಗೃಹಗಳು, ಸ್ವ-ಸಹಾಯ ಗುಂಪುಗಳು, ಸ್ತ್ರೀ ಶಕ್ತಿ ಸಂಘಗಳು ಹಾಗೂ ಮಹಿಳಾ ಸಹಾಯವಾಣಿಗಳನ್ನು ಸರ್ಕಾರವು ಸ್ಥಾಪಿಸಿದೆ. ಇವುಗಳ ಪೂರ್ಣ ಪ್ರಯೋಜನವನ್ನು ಪಡೆಯಬೇಕು ಎಂದರು. ಅಲ್ಪಸಂಖ್ಯಾತರಿಗಾಗಿ ಲಭ್ಯವಿರುವ ಯೋಜನೆಗಳ ಮತ್ತು ಸೌಲಭ್ಯಗಳ ಕುರಿತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಛೇರಿಯಲ್ಲಿ ತಾಲ್ಲೂಕು ಮಾಹಿತಿ ಕೇಂದ್ರಗಳಲ್ಲಿ ವಿವರ ಲಭ್ಯವಿರುತ್ತದೆ. ನೀವು ಕಾಳಜಿ ವಹಿಸಿ ಇಂತಹ ಕಛೇರಿಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು
ಮಹಿಳೆಯರ ರಕ್ಷಣೆಗಾಗಿ ೧೮೧ ಸಹಾಯವಾಣಿಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಮೇಲ್ಕಂಡ ಸ್ಥಳಗಳಲ್ಲಿ ಸೌಲಭ್ಯ ಪಡೆಯಲು ಅಗತ್ಯ ದಾಖಲೆಗಳಾದ ಅಧಾರ್, ವೋಟರ್ ಐಡಿ, ಹಿರಿಯ ನಾಗರೀಕರ ಗುರುತಿನ ಚೀಟಿ, ಬಿ.ಪಿ.ಎಲ್ ಪಡಿತರ ಚೀಟಿ, ಯಶಸ್ವಿನಿ ಆಯೋಗ್ಯ ಕಾರ್ಡ್, ಕಟ್ಟಣ ನಿರ್ಮಾಣ ಕಾರ್ಮಿಕರ ಇ-ಶ್ರಮ್ ಕಾರ್ಡ್ ಮುಂತಾದ ಅತ್ಯಗತ್ಯ ದಾಖಲೆಗಳನ್ನು ಸಿದ್ಧ ಮಾಡಿ ಇಟ್ಟುಕೊಳ್ಳಬೇಕು ಎಂದು ಸೂಚಿಸಿದರು.
ಈ ಯೋಜನೆಗಳ ಮತ್ತು ಸೌಲಭ್ಯಗಳ ಕುರಿತು ತಮ್ಮ ಗ್ರಾಮಗಳಲ್ಲಿ ಮತ್ತು ಮನೆಗಳಲ್ಲಿ ಎಲ್ಲರಿಗೂ ತಿಳಿಸಿ ಅವರಿಗೂ ಸಹ ಸರ್ಕಾರದ ಯೋಜನೆಗಳ ಕುರಿತು ಅರಿವು ಮೂಡಿಸಬೇಕೆಂದರು.
ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಮಾತನಾಡಿ, ಜಿಲ್ಲೆಯ ಜನತೆಗೆ ಸರ್ಕಾರಿ ಸೌಲಭ್ಯಗಳನ್ನು ಕುರಿತು ಅಲ್ಪಸಂಖ್ಯಾತರ ಸಮುದಾಯಕ್ಕೆ ಲಭ್ಯವಾಗಬೇಕಾದ ಯೋಜನೆಗಳ ಹಾಗೂ ಕಾರ್ಯಕ್ರಮಗಳ ಅರಿವು ಮೂಡಿಸಲು ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ತಾಲ್ಲೂಕಿನಲ್ಲಿ ಮಾಹಿತಿ ಕೇಂದ್ರಗಳನ್ನು ತೆರೆಯಲಾಗಿದೆ. ಮಾಹಿತಿ ಕೇಂದ್ರಗಳ ಸದುಪಯೋಗವನ್ನು ಸಮುದಾಯವು ಪಡೆದುಕೊಳ್ಳಬೇಕೆಂದರು.
ಹಲವಾರು ವಿದ್ಯಾರ್ಥಿವೇತನ ಯೋಜನೆಗಳು ಜಾರಿಯಲ್ಲಿದ್ದು, ಪ್ರತಿಯೊಬ್ಬರೂ ಸಾಕ್ಷರರಾಗಲು ಸರ್ಕಾರವು ವಿದ್ಯಾರ್ಥಿವೇತನ, ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಶಾಲೆಗಳನ್ನು ಜಿಲ್ಲಾದ್ಯಂತ ತೆರೆದಿದೆ. ಅರ್ಹ ಫಲಾನುಭವಿಗಳು ಈ ಕಾರ್ಯಕ್ರಮದ ಲಾಭ ಪಡೆಯಬೇಕು. ಆ ಮೂಲಕ ಎಲ್ಲರೂ ವಿದ್ಯಾವಂತರಾಗುವ ಸರ್ಕಾರದ ಕನಸನ್ನು ನನಸು ಮಾಡಬೇಕು ಎಂದರು
ಜಿಲ್ಲಾದ್ಯಂತ ಸ್ಥಾಪಿಸಿರುವ ಮೊರಾರ್ಜಿ ಶಾಲೆಗಳು, ಮೌಲಾನಾ ಆಜಾದ್ ಶಾಲೆಗಳು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹಾಸ್ಟೇಲ್‌ಗಳಲ್ಲಿ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಇಂತಹ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಸಭೆಯಲ್ಲಿ ಅಲ್ಪಸಂಖ್ಯಾತರ ಆಯೋಗದ ಕಾರ್ಯದರ್ಶಿಗಳಾದ ಸುಮಯಾ, ಜಿಲ್ಲಾ ಕಾರ್ಮಿಕಾಧಿಕಾರಿ ವರಲಕ್ಷ್ಮೀ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮುರಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.