ಮಂಜುನಾಥ್‌ರ ಶಾಸಕ ಸ್ಥಾನದಿಂದ ಅನರ್ಹಕ್ಕೆ ಒತ್ತಾಯ
ಕೋಲಾರ,ಸೆ,೫-ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಕೊತ್ತೂರು ಮಂಜುನಾಥ್ ಅವರು ಸರ್ಕಾರಿ ಅಧಿಕಾರಿಗಳ ಮೇಲೆ ಅಸಭ್ಯ ವರ್ತನೆ, ದರ್ಪ, ದೌರ್ಜನ್ಯ ನಡೆಸುತ್ತಿರುವುದನ್ನು ಖಂಡಿಸಿ ಶಾಸಕ ಸ್ಥಾನ ಅನರ್ಹಗೊಳಿಸುವಂತೆ ರಾಜ್ಯಪಾಲರನ್ನು ಒತ್ತಾಯಿಸಿದ ತಹಶೀಲ್ದಾರ್ ಮೂಲಕ ಕರ್ನಾಟಕ ದಲಿತ ಸಂಘಟನೆಗಳ ಮಹಾ ಒಕ್ಕೂಟ ಮನವಿ ಸಲ್ಲಿಸಲಾಯಿತು
ಒಕ್ಕೂಟದ ಜಿಲ್ಲಾಧ್ಯಕ್ಷ ಹೂಹಳ್ಳಿ ಪ್ರಕಾಶ್ ಮಾತನಾಡಿ ೨೦೨೩ರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದಿರುವ ಶಾಸಕ ಕೊತ್ತೂರು ಜಿ ಮಂಜುನಾಥ್ ತಮ್ಮ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಇದ್ದರೂ ಸಹ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿಗಳ ಬಳಿ ಕಿತ್ತೋಗುತ್ತೆ, ಬಟ್ಟೆ ಬಿಚ್ಚಿಸುತ್ತೇನೆ, ಬೀಜಗಳು ಒಡೆದು ಹಾಕುತ್ತೇನೆಂಬ ಕೀಳು ಮಟ್ಟದ ಪದಗಳಿಂದ ನಿಂದಿಸುತ್ತಿರುವುದು ಖಂಡನೀಯ. ಇಂಥಹ ಶಾಸಕರನ್ನು ಆಯ್ಕೆ ಮಾಡಿದಂತ ಕ್ಷೇತ್ರದ ಮತದಾರರು ಇಂದು ತಲೆ ತಗ್ಗಿಸಿ ಪಶ್ಚಾತಪದಿಂದ ಮುಜುಗರಕ್ಕೆ ಒಳಗಾಗುತ್ತಿದ್ದಾರೆಂದು ಬೇಸರ ವ್ಯಕ್ತ ಪಡೆಸಿದರು,
ಚುನಾವಣೆಯಲ್ಲಿ ಕೋಲಾರನ್ನು ಸಿಂಗಪೂರ್ ಮಾಡಿ ಬಿಡುತ್ತೇನೆಂದು ಭರವಸೆ ನೀಡುವ ಮೂಲಕ ವಂಚಿಸಿ ಕನಿಷ್ಟ ರಸ್ತೆಗಳನ್ನು ದುರಸ್ಥಿ ಮಾಡಲಿಕ್ಕೊ ಇವರಿಗೆ ಯೋಗ್ಯತೆ ಇಲ್ಲ, ಕಳೆದ ಒಂದೂವರೆ ವರ್ಷಗಳಿಂದ ವ್ಯರ್ಥವಾಗಿ ಕಾಲಹರಣ ಮಾಡುತ್ತಿದ್ದಾರೆ ಯಾವೂದೇ ಅಭಿವೃದ್ದಿ ಕೆಲಸಗಳು ಅಗಿಲ್ಲ. ಈ ಹಿಂದೆ ಮಂಜೂರಾತಿ ಮಾಡಿರುವ ಕಾಮಗಾರಿಗಳ ಗುತ್ತಿಗೆಯನ್ನು ತಮ್ಮ ಬಾಲಗೊಂಚಿಗಳಿಗೆ ನೀಡುವ ಮೂಲಕ ಕಳಪೆ ಕಾಮಗಾರಿಗಳನ್ನು ಮಾಡಿ ಬಿಲ್‌ಗಳನ್ನು ಗುಳಂ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಒಕ್ಕೂಟದ ರಾಜ್ಯ ಉಪಾಧ್ಯಕ್ಷ ದಲಿತ ನಾರಾಯಣಸ್ವಾಮಿ ಮಾತನಾಡಿ ಸುಮಾರು ೪ ಸಾವಿರ ಮಂದಿ ವಿದ್ಯಾರ್ಥಿಗಳಿರುವ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರನ್ನು ಕಾಲೇಜು ಅಭಿವೃದ್ಧಿಗೆ ಸಂಬಂಧಿಸಿದ ವಿಷಯದಲ್ಲಿ ಸಚಿವರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ “ಹುಷಾರ್! ಕಿತ್ತೊಗುತ್ತೆ?” ಎಂಬ ಮಾತುಗಳನ್ನು ಆಡಿರುವುದು ಸಾರ್ವಜನಿಕ ವಲಯದಲ್ಲಿ ತುಂಬಾ ಬೇಸರ ಉಂಟುಮಾಡಿದೆ, ಗುರುಗಳನ್ನು ದೇವರಿಗೆ ಹೋಲಿಸುತ್ತಾರೆ ಅಂಥಹ ಕಿಂಚತ್ತು ಭಾವನೆ ಇಲ್ಲದೆ ಅನಾಗರೀಕವಾಗಿ ವರ್ತಿಸಿರುವುದು ಖಂಡನೀಯ ಎಂದರು.
ಕರ್ನಾಟಕ ರಿಪಬ್ಲಿಕ್ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿಕ್ಕನಾರಾಯಣ್ ಮಂಜುನಾಥ್ ಮಾತನಾಡಿ ಇಂತಹ ಶಾಸಕರ ನಡೆಯ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಜ್ಯಪಾಲರಲ್ಲಿ ಪೂರ್ವಕವಾಗಿ ಮನವಿ ಮಾಡಿದ್ದಾರೆ.
ಪ್ರತಿಭಟನೆಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಸದಾಶಿವ, ಕಾರ್ಯದರ್ಶಿ ಪುರ ಶ್ರೀನಾಥ್, ಉಪಾಧ್ಯಕ್ಷ ಹನುಮಾನ್, ಖಜಾಂಚಿ ಎಂ.ಆರ್.ಚೇತನ್‌ಬಾಬು, ಮಹಿಳಾ ಜಿಲ್ಲಾಧ್ಯಕ್ಷ ಕೆರೆಕೋಡಿ ಮಂಜುಳ, ಮುಖಂಡರಾದ ಮುರಳಿ, ವೆಂಕಟರೆಡ್ಡಿ, ಹೂಹಳ್ಳಿ ಹನುಮಪ್ಪ, ಮಾಹಿತಿ ಮಂಜು, ವೆಂಕಟೇಶ್, ನಾರಾಯಣಸ್ವಾಮಿ ಮುಂತಾದವರು ಭಾಗವಹಿಸಿದ್ದರು