ಶಂಕರ ಮಠದಲ್ಲಿ ಆರೋಗ್ಯ ತಪಾಸಣಾ ಶಿಬಿರ
ಕೋಲಾರ,ಸೆ,೫- ಶೃಂಗೇರಿ ಜಗದ್ಗುರು ಭಾರತೀ ತೀರ್ಥ ಮಹಾಸ್ವಾಮಿಗಳು ಸನ್ಯಾಸ ದೀಕ್ಷೆ ಪಡೆದ ೫೦ನೇ ವಾರ್ಷಿಕೋತ್ಸವ ನಿಮಿತ್ತ ಸುವರ್ಣಭಾರತಿ ಕಾರ್ಯಕ್ರಮದ ಅಂಗವಾಗಿ ಕೋಲಾರದ ಕೋಟೆಯ ಶೃಂಗೇರಿ ಶಂಕರಮಠದಲ್ಲಿ ರಕ್ತದಾನ ಹಾಗೂ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದು,೨೫ ಯುನಿಟ್ ರಕ್ತ ಸಂಗ್ರಹವಾಯಿತು.
ಮಠದಲ್ಲಿ ಮಂಗಳವಾರ ಜಾಲಪ್ಪ ಆಸ್ಪತ್ರೆ ಹಾಗೂ ಶಂಕರಸೇವಾ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೋಲಾರ ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿ ಜೆ.ಎನ್. ರಾಮಕೃಷ್ಣ, ಶೃಂಗೇರಿ ಹಿರಿಯ ಶ್ರೀಗಳು ಸನ್ಯಾಸ ಸ್ವೀಕರಿಸಿ ೫೦ ವರ್ಷವಾದ ಹಿನ್ನಲೆಯಲ್ಲಿ ಶಂಗೇರಿ ಮಠದ ಸೂಚನೆಯಂತೆ ರಾಜ್ಯಾದ್ಯಂತ ಸುವರ್ಣಭಾರತಿ ಹೆಸರಿನಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗುರುಗಳ ಆದೇಶದಂತೆ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಅದರ ಅಂಗವಾಗಿ ಕೋಲಾರದ ಶೃಂಗೇರಿ ಶಂಕರ ಮಠದಲ್ಲಿ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದು, ಇದರ ಪ್ರಯೋಜನ ಹೆಚ್ಚಿನ ಜನತೆ ಪಡೆಯಬೇಕು ಎಂದು ಮನವಿ ಮಾಡಿದರು.
ದಾನಗಳಲ್ಲೇ ಇಂದು ರಕ್ತದಾನ ಶ್ರೇಷ್ಟವಾಗಿದೆ, ಮತ್ತೊಂದು ಜೀವ ಉಳಿಸುವ ಈ ಕೆಲಸ ಇಂದು ಪವಿತ್ರವಾಗಿದೆ, ಅಪಘಾತಗಳಲ್ಲಿ, ಹೆರಿಗೆ ಸಂದರ್ಭದಲ್ಲಿ ರಕ್ತದ ಕೊರತೆಯಿಂದ ಆಗುವ ಸಾವುಗಳನ್ನು ತಪ್ಪಿಸಲು ರಕ್ತದಾನ ಇಂದು ಅತಿ ಮುಖ್ಯವಾಗಿದೆ ಎಂದರು.
ಶಿಬಿರಕ್ಕೆ ಚಾಲನೆ ನೀಡಿದ ಜಾಲಪ್ಪ ಆಸ್ಪತ್ರೆಯ ವೈದ್ಯ ಡಾ.ದಿನೇಶ್ ಮಾತನಾಡಿ, ರಕ್ತದಾನ ಪವಿತ್ರವಾದ ಕಾರ್ಯವಾಗಿದ್ದು, ಮತ್ತೊಬ್ಬ ವ್ಯಕ್ತಿಯ ಜೀವ ಉಳಿಸುವ ಈ ಕಾರ್ಯ ಶ್ಲಾಘನೀಯ ಎಂದರು. ರಕ್ತದಾನ ಮಾಡುವುದರಿಂದ ಯಾವುದೇ ಸಮಸ್ಯೆ ಎದುರಾಗದು ಎಂದ ಅವರು, ಉತ್ತಮ ಆರೋಗ್ಯಕ್ಕಾಗಿ ಇಂದು ಆರೋಗ್ಯವಂತರಾದ ಪ್ರತಿಯೊಬ್ಬರೂ ರಕ್ತದಾನಕ್ಕೆ ಮುಂದೆ ಬರಬೇಕು ಎಂದು ಕಿವಿಮಾತು ಹೇಳಿದರು.
ರಸ್ತೆಅಪಘಾತಗಳು, ಶಸ್ತ್ರಚಿಕಿತ್ಸೆ, ಅನಿಮಿಯಾ, ಹೆರಿಗೆ ಮತ್ತಿತರ ತುರ್ತು ಸಂದರ್ಭಗಳಲ್ಲಿ ಅಗತ್ಯವಾದ ಪ್ರಮಾಣದಲ್ಲಿ ಇಂದು ರಕ್ತ ಸಿಗುತ್ತಿಲ್ಲ, ಈ ಹಿನ್ನಲೆಯಲ್ಲಿ ಸಮಾಜಮುಖಿಯಾಗಿ ಯೋಚಿಸಿ ರಕ್ತದಾನಕ್ಕೆ ಮುಂದಾಗಲು ಕೋರಿದರು.
ಶಂಕರಸೇವಾ ಟ್ರಸ್ಟ್ ಅಧ್ಯಕ್ಷ ಡಾ.ಎಂ.ವಿ.ಜಯರಾಂ ಮಾತನಾಡಿ, ಶಂಕರಸೇವಾ ಸಮಿತಿ ನಿರಂತರವಾಗಿ ಧಾರ್ಮಿಕ,ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ, ಇದರ ಜತೆಗೆ ಇದೀಗ ಗುರುಗಳ ಆದೇಶ ಪಾಲನೆಯೊಂದಿಗೆಮತ್ತಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವಂತಾಗಿರುವುದು ನಮ್ಮ ಅದೃಷ್ಟ ಎಂದರು.
ಶ್ರೀಗಳ ಆದೇಶ ಪಾಲನೆಗೆ ನಮಗೆ ಜಾಲಪ್ಪ ಆಸ್ಪತ್ರೆಯವರು ನೆರವಾಗಿದ್ದಾರೆ, ರಕ್ತದಾನದ ಜತೆಗೆ ಇಂದು ಉಚಿತ ಆರೋಗ್ಯ ತಪಾಸಣೆಯೂ ನಡೆಯುತ್ತಿದ್ದು, ಇಲ್ಲಿ ಪ್ರತಿಯೊಬ್ಬರೂ ಬಂದು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ ಎಂದರು.
ಶಿಬಿರದಲ್ಲಿ ೨೫ ಯುನಿಟ್ ರಕ್ತ ಸಂಗ್ರಹವಾಯಿತು ಮತ್ತು ಆರೋಗ್ಯ ತಪಾಸಣಾ ಶಿಬಿರದಲ್ಲಿ ೧೫೦ಕ್ಕೂ ಹೆಚ್ಚು ಮಂದಿ ತಪಾಸಣೆಗೆ ಒಳಗಾದರು.
ಕಾರ್ಯಕ್ರಮದಲ್ಲಿ ಜಾಲಪ್ಪ ಆಸ್ಪತ್ರೆಯ ನರ್ಸಿಂಗ್ ವಿಭಾಗದ ಮುಖ್ಯಸ್ಥರಾದ ಪ್ರಮೀಳಾ, ಶಂಕರೇಸೇವಾ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಸಿ.ಪಿ.ವಿಷ್ಣು, ಖಜಾಂಚಿ ಮುರಳಿಸುಂದರ್, ಸಂಘಟನಾ ಕಾರ್ಯದರ್ಶಿ ವರುಣ್ ಕುಮಾರ್, ಟ್ರಸ್ಟ್ ಸದಸ್ಯರಾದ ಕೆ.ಚಂದ್ರಪ್ರಕಾಶ್, ಹಾಬಿ ರಮೇಶ್, ಉದಯಕುಮಾರ್, ಶ್ರೀಕಂಠನ್ ಮತ್ತಿತರರು ಉಪಸ್ಥಿತರಿದ್ದರು.
–_____________________