ಜ್ಞಾನ, ಕೌಶಲ್ಯದಿಂದ ಆರ್ಥಿಕ ಸಾಕ್ಷರತೆ
ವಿಜಯಪುರ. ಸೆ.೫- ಜ್ಞಾನ ಮತ್ತು ಕೌಶಲಗಳನ್ನು ಬಳಸಿಕೊಂಡು ಆರ್ಥಿಕ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ, ಜೀವಮಾನದ ಆರ್ಥಿಕ ಯೋಗಕ್ಷೇಮಕ್ಕಾಗಿ ನಿರ್ವಹಿಸುವ ಸಾಮರ್ಥ್ಯವೇ ಆರ್ಥಿಕ ಸಾಕ್ಷರತೆಯಾಗಿದೆ ಎಂದು ಜಿಲ್ಲಾ ವಯಸ್ಕರ್ ಶಿಕ್ಷಣಾಧಿಕಾರಿ ಎನ್.ಎಲ್.ಶಶಿಕುಮಾರ್ ತಿಳಿಸಿದರು.
ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಆವರಣದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಇಲಾಖೆ ಮತ್ತು ಡಯಟ್ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಸಂಯುಕ್ತ ಆಶ್ರಯದಲ್ಲಿ ೫೮ ನೇ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೋಷಕರು ಓದುವಿಕೆಯನ್ನು ಪ್ರೋತ್ಸಾಹಿಸಿದಾಗ, ಅವರು ತಮ್ಮ ಮಗುವಿಗೆ ಕಲಿಕೆಯ ಪ್ರೀತಿಯನ್ನು ಬೆಳೆಸಲು ಸಹಾಯ ಮಾಡಬಹುದು, ಮಕ್ಕಳ ಆರೋಗ್ಯ ಮತ್ತು ಅಭಿವೃದ್ಧಿಗಾಗಿ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಅದನ್ನು ಪೋಷಕರು ಸದುಪಯೋಗ ಮಾಡಿಕೊಳ್ಳಬೇಕು. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೋಷಕರು ಹೆಚ್ಚು ಕಾಳಜಿ ವಹಿಸಬೇಕು. ವಿದ್ಯಾಭ್ಯಾಸ ಮಕ್ಕಳ ಜನ್ಮ ಸಿದ್ಧ ಹಕ್ಕಾಗಿದ್ದು, ಅದನ್ನು ಅವರಿಗೆ ದೊರಕಿಸಿಕೊಡಲು ಅಧಿಕಾರಿಗಳು ಹಾಗೂ ಸಂಬಂಧಿಸಿದವರು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದರು.
ಉಪಾನ್ಯಸಕ ಭೈರೇಗೌಡ ಮಾತನಾಡಿ, ಮಗುವಿನ ಶಿಕ್ಷಣವನ್ನು ಬೆಂಬಲಿಸುವುದು ಅವರ ಶೈಕ್ಷಣಿಕ ಮತ್ತು ವೈಯಕ್ತಿಕ ಯಶಸ್ಸಿಗೆ ನಿರ್ಣಾಯಕವಾಗಿದೆ. ಪಾಲಕರು ತಮ್ಮ ಮಗುವಿನ ಶಿಕ್ಷಣದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ ಮತ್ತು ಅವರು ಬೆಂಬಲವನ್ನು ನೀಡಲು ಹಲವು ಮಾರ್ಗಗಳಿವೆ. ಆರಾಮದಾಯಕವಾದ ಕಲಿಕೆಯ ವಾತಾವರಣವನ್ನು ಸೃಷ್ಟಿಸುವುದರಿಂದ ಹಿಡಿದು ತಂತ್ರಜ್ಞಾನದ ಮೂಲಕ ತಮ್ಮ ಮಗುವಿನ ಶಿಕ್ಷಣದಲ್ಲಿ ತೊಡಗಿಸಿಕೊಳ್ಳುವವರೆಗೆ, ಪೋಷಕರು ತಮ್ಮ ಮಗುವಿನ ಕಲಿಕೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಹುದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಯಸ್ಕರ ಕಾರ್ಯಕ್ರಮ ಸಹಾಯಕರಾದ ಪ್ರಭಾವತಿ ಅಂಗಡಿ, ರವಿಕುಮಾರ್, ಕಾಲೇಜಿನ ಪ್ರಾಂಶುಪಾಲ ಟಿ.ಗೋಪಾಲಯ್ಯ, ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿ ಇದ್ದರು.