ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಸಿಎಂ ಸ್ಪಂದಿಸುತ್ತಿಲ್ಲಾ : ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ
ಅಥಣಿ :ಸೆ.೫: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ನಮ್ಮ ಬೇಡಿಕೆಗೆ ಪೂರಕವಾಗಿ ಒಂದೂ ಸಭೆ ಮಾಡಿಲ್ಲ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸ್ಪಂದನೆ ನೀಡಿದಷ್ಟು ಈಗಿನ ಸಿಎಂ ಸಿದ್ದರಾಮಯ್ಯ ಸ್ಪಂದಿಸುತ್ತಿಲ್ಲಾ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಅಸಮಾಧಾನ ವ್ಯಕ್ತಪಡಿಸಿದರು
ಅವರು ಬುಧವಾರ ಅಥಣಿ ಪಟ್ಟಣದಲ್ಲಿ ನಡೆದ ಪಂಚಮಸಾಲಿ ವಕೀಲರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ವೀಸಲಾತಿಗಾಗಿ ನ್ಯಾಯಾಲಯದ ಮೊರೆ ಹೋಗಲು ನಮ್ಮ ಸಮಾಜದ ವಕೀಲರ ಸಂಘಟನೆ ಮಾಡಲಾಗುತ್ತಿದೆ. ಅದರ ಭಾಗವಾಗಿ ಬೆಳಗಾವಿಯಲ್ಲಿ ಇದೆ ಸೆ.೨೨ ರಂದು ಲಿಂಗಾಯತ ಪಂಚಮಸಾಲಿ ವಕೀಲರ ಮಹಾ ಪರಿಷತ್ ಹಮ್ಮಿಕೊಂಡಿದ್ದೇವೆ’ ಎಂದು ತಿಳಿಸಿದರು.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲು ಪಂಚಮಸಾಲಿಗಳ ಸಹಾಯ ಸಹಕಾರ ಬಹಳಷ್ಟು ಇದೆ, ಆದರೆ ಅದರ ಋಣ ತೀರಿಸಲು ಮುಖ್ಯಮಂತ್ರಿಯವರು ಪ್ರಯತ್ನ ಮಾಡಬೇಕು. ಅದರಂತೆ ಕಾಂಗ್ರೆಸ್ ಸರಕಾರದಲ್ಲಿ ೧೨ ಜನ ಪಂಚಮಸಾಲಿ ಶಾಸಕರಿದ್ದು, ನಾವು ಅಧಿವೇಶನದಲ್ಲಿ ಮಾತನಾಡುತ್ತೇವೆ ಎಂದು ಹೇಳಿ ಯಾರು ಸಹ ಬಸನಗೌಡಾ ಪಾಟೀಲ ಯತ್ನಾಳ ಅವರಂತೆ ಮಾತನಾಡಲಿಲ್ಲಾ, ಇದು ಸಮುದಾಯದ ಜನತೆಗೆ ಬೇಸರ ತಂದಿದೆ ಎಂದರು.
ನ್ಯಾಯವಾದಿಗಳು ಕಾನೂನು ಅರಿತವರು ಅವರು ಹೋರಾಟ ಮಾಡಿದರೆ ನಮಗೆ ಮೀಸಲಾತಿ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಅದಕ್ಕಾಗಿ ಇದೆ ಸೆ. ೨೨ ರಂದು ಬೆಳಗಾವಿಯಲ್ಲಿ ಜರಗುವ ವಕೀಲರ ಪ್ರಥಮ ಪರಿಷತ್ ಸಭೆಯಲ್ಲಿ ಎಲ್ಲರೂ ಭಾಗವಹಿಸಿ ಸರಕಾರದ ವಿರುದ್ಧ ಕೈಗೊಳ್ಳಬೇಕಾದ ಹೋರಾಟದ ಬಗ್ಗೆ ಸಲಹೆ ನೀಡುವಂತೆ ಹೇಳಿದರು.
ಈ ವೇಳೆ ಹಿರಿಯ ನ್ಯಾಯವಾದಿ ಬಿ.ಎಲ್.ಪಾಟೀಲ ಮಾತನಾಡಿ ನೀವು ನಮಗಾಗಿ ತುಂಬಾ ಹೋರಾಟ ಮಾಡುತ್ತಿದ್ದಿರಿ. ನಿಮಗೆ ನಾವು ಕೃತಜ್ಞರಾಗಿದ್ದೇವೆ. ಆದರೆ ನಮ್ಮ ಸಮಾಜದವರು ಇನ್ನೂ ಒಗ್ಗಟ್ಟು ಪ್ರದರ್ಶನ ಮಾಡಲೂ ಹಿಂದೇಟು ಹಾಕುತ್ತಿರುವದು ತುಂಬಾ ಬೇಸರದ ಸಂಗತಿಯಾಗಿದೆ ಎಂದ ಅವರು ಇನ್ನಾದರೂ ಎಲ್ಲರೂ ಒಗ್ಗಟ್ಟಾಗಿ ಶ್ರೀಗಳ ಹೋರಾಟವನ್ನು ಯಶಸ್ವಿ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕಿವಿ ಮಾತು ಹೇಳಿದರು
ಈ ವೇಳೆ ನ್ಯಾಯವಾದಿಗಳಾದ ಬಿ.ಬಿ.ಹೋನಗೌಡರ, ಸುಭಾಷ್ ನಾಯಿಕ, ಸುನೀಲ ಸಂಕ. ಡಿ.ಬಿ.ಠಕ್ಕಣ್ಣವರ, ಬಿ.ಬಿ.ಬಿಸಲಾಪುರ. ಬಸವರಾಜ ಡಂಗಿ. ಎಮ.ಸಿ.ದುಂಡಿ, ಪಿ.ಬಿ.ಪಾಟೀಲ. ಬಿ.ಬಿ.ಬಿಸಗುಪ್ಪಿ. ಕಾಕಾಸಾಬ ಪಾಟೀಲ. ಎಸ್.ಎಸ್.ಪಾಟೀಲ. ರಾಹುಲ ಕಟಗೇರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.