ಜೆ ಇ ಶಿಕ್ಷಣ ಸಂಸ್ಥೆ ಶತಮಾನದ ಇತಿಹಾಸ ಹೊಂದಿರುವ ಅಂದದ ಜ್ಞಾನ ದೇಗುಲ
ಅಥಣಿ :ಸೆ.೫: ನಾನು ವಿದ್ಯೆ ಕಲಿತ ಜಾಧವಜಿ ಶಿಕ್ಷಣ ಸಂಸ್ಥೆಯು ಕೇವಲ ಕಲ್ಲು ಮಣ್ಣುಗಳಿಂದ ಕೂಡಿದ ಕಟ್ಟಡವಲ್ಲ, ನಮ್ಮೆಲ್ಲರ ದೃಷ್ಟಿಯಲ್ಲಿ ಅದೊಂದು ಸುಂದರ ಪರಿಸರದ ಶತಮಾನಗಳ ಇತಿಹಾಸ ಹೊಂದಿರುವ ಅಂದದ ಜ್ಞಾನ ದೇಗುಲವಾಗಿದೆ ಎಂದು ಅಥಣಿ ಸಾಮಾಜಿಕ ವಲಯದ ಅರಣ್ಯ ಅಧಿಕಾರಿ ಪ್ರಶಾಂತ ಗೌರಾಣಿ ಹೇಳಿದರು.
ಅವರು ಮಂಗಳವಾರ ಇಲ್ಲಿನ ಪ್ರತಿಷ್ಠಿತ ಜಾಧವಜಿ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಮಹಾವಿದ್ಯಾಲಯದ ವರ್ಗ ಕೋಣೆಗಳನ್ನು ಉದ್ಘಾಟಿಸಿ ಮಾತನಾಡಿದರು. ಶತಮಾನಗಳ ಇತಿಹಾಸ ಹೊಂದಿರುವ ಜಾಧವಜಿ ಶಿಕ್ಷಣ ಸಂಸ್ಥೆಯು ನನ್ನಂತಹ ಅನೇಕ ಅಧಿಕಾರಿಗಳಿಗೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ಸಾಧಕರಿಗೆ ಶಿಕ್ಷಣ ನೀಡಿದ ಹೆಮ್ಮೆಯ ಸಂಸ್ಥೆಯಾಗಿದೆ. ನಾನು ನಾಡಿನ ತುಂಬೆಲ್ಲ ಕರ್ತವ್ಯ ನಿರ್ವಹಿಸಿದರು ನಾನು ಕಲಿತಿರುವ ಈ ಸಂಸ್ಥೆಯ ಹೆಸರನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಈ ಸಂಸ್ಥೆಯಲ್ಲಿ ಉತ್ತಮ ಆಡಳಿತ ಮಂಡಳಿ ಮತ್ತು ನುರಿತ ಶಿಕ್ಷಕರು ಇರುವುದರಿಂದ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳು ಇಂದು ನಾಡಿನಲ್ಲಿ ಮತ್ತು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವುದು ಕೂಡ ಹೆಮ್ಮೆಯ ವಿಚಾರವಾಗಿದೆ. ಇಂತಹ ಶಿಕ್ಷಣ ಸಂಸ್ಥೆಯು ಅನೇಕ ವಿದ್ಯಾರ್ಥಿಗಳ ಸುಂದರ ಕನಸುಗಳನ್ನು ಸಾಕಾರಗೊಳಿಸುತ್ತಿರುವದು ನನಗೆ ಸಂತಸ ತಂದಿದೆ. ಈ ಸಂಸ್ಥೆಯ ಹಿಂದಿನ ವಿದ್ಯಾರ್ಥಿಯಾಗಿ ಈ ಸಮಾರಂಭದಲ್ಲಿ ಉದ್ಘಾಟಕನಾಗಿ ಬಂದಿರುವುದು ನನ್ನ ಸೌಭಾಗ್ಯ ಎಂದು ಭಾವಿಸಿದ್ದೇನೆ. ಆಡಳಿತ ಮಂಡಳಿಯ ಎಲ್ಲ ಸದಸ್ಯರಿಗೆ ಮತ್ತು ಶಿಕ್ಷಕ ವೃoದದರವರಿಗೆ ನಾನು ಯಾವತ್ತೂ ಚಿರಋಣಿ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಸ್ಥೆಯ ನಿಕಟ ಪೂರ್ವ ಕಾರ್ಯಧ್ಯಕ್ಷ ಹಾಗೂ ಸಂಸ್ಕೃತ ಚಿಂತಕ ಅರವಿಂದರಾವ ದೇಶಪಾಂಡೆ ಮಾತನಾಡಿ ಸುವ್ಯವಸ್ಥಿತವಾದ ವರ್ಗ ಕೋಣೆಗಳನ್ನು ಮತ್ತು ಹೈಟೆಕ್ ಶೌಚಾಲಯವನ್ನು ಸದ್ಬಳಕೆ ಮಾಡಿಕೊಳ್ಳುವುದರ ಜೊತೆಗೆ ಮಹಾವಿದ್ಯಾಲಯದ ಪರಿಸರದಲ್ಲಿ ಗಿಡಮರಗಳನ್ನು ಬೆಳೆಸಬೇಕು, ಪರಿಸರವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದ ಅವರು
ನಮ್ಮ ಶಿಕ್ಷಣ ಸಂಸ್ಥೆಯು ವಿಶ್ವ ವಿದ್ಯಾಲಯದ ಮಟ್ಟಕ್ಕೆ ಬೆಳೆಯಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ಸಂಸ್ಥೆಯ ಕಾರ್ಯಧ್ಯಕ್ಷ ಡಾ. ರಾಮ ಬಿ ಕುಲಕರ್ಣಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಶತಮಾನ ದಾಟಿದ ನಮ್ಮ ಸಂಸ್ಥೆಯ ಈ ವರ್ಗ ಕೋಣೆಗಳು ಸಮುಚ್ಚಯಕ್ಕೆ ” ಶತಮಾನೋತ್ಸವ ರೆಕ್ಕೆ” ಎಂದು ಹೆಸರಿಡುವ ಆಶೆ ಇದೆ.
ನಮ್ಮ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ವಿಭಾಗದಲ್ಲಿ ಪ್ರಗತಿಯ ಸಂಕೇತವಾಗಿ ಕಂಪ್ಯೂಟರ್ ಶಿಕ್ಷಣ ಮತ್ತು ಸಂಖ್ಯಾಶಾಸ್ತ್ರ ವಿಭಾಗವನ್ನು ಆರಂಭಿಸಿದ್ದು ಒಳ್ಳೆಯ ಬೆಳವಣಿಗೆಯಾಗಿದೆ. ಅವುಗಳಿಗಾಗಿ ವರ್ಗ ಕೋಣೆಗಳ ಅವಶ್ಯಕತೆ ಇತ್ತು. ಹೀಗಾಗಿ ಈ ಹೊಸ ವರ್ಗ ಕೋಣೆಗಳನ್ನು ಇಂದು ವಿದ್ಯಾರ್ಥಿಗಳಿಗೆ ಅರ್ಪಿಸುತ್ತಿದ್ದೇವೆ ಎಂದರು.
ಮಹಾವಿದ್ಯಾಲಯದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ, ನ್ಯಾಯವಾದಿ ಸಂದೀಪ ಸಂಗೋರಾಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಎಂ ಪಿ ಮೇತ್ರಿ ಸ್ವಾಗತಿಸಿದರು. ಡಾ. ಪಿ ಎo. ಹುಲುಗಬಾಳಿ ಅತಿಥಿಗಳನ್ನು ಪರಿಚಯಿಸಿದರು.
ಈ ಸಂದರ್ಭದಲ್ಲಿ ಎಸ್ ಅರ್ ಪಾಟೀಲ, ಎನ್ ಚಂದ್ರಶೇಖರ, ಡಿ ಜೆ ಸಿಂಗೆ, ಎಸ್ ವಿ ದಾಸರೆಡ್ಡಿ, ಸಿ ಟಿ ಶಿವಪ್ರಕಾಶ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಎಂ ಪಿ ಚಿಂಚಣಿ ನಿರೂಪಿಸಿದರು. ಬಿ ಎಸ್ ಲೋಕೂರ ವಂದಿಸಿದರು.