ಪುತ್ತೂರಿನ ಐತ್ತಪ್ಪ ಮಾಸ್ಟ್ರು.. ಅವರ ದತ್ತು ಮಕ್ಕಳೂ..
ಮೇಘಾ ಪಾಲೆತ್ತಾಡಿ
ಪುತ್ತೂರು; ನಾಲ್ಕು ಮಕ್ಕಳನ್ನು ದತ್ತು ಪಡೆದುಕೊಂಡು ಆ ಮಕ್ಕಳ ಶೈಕ್ಷಣಿಕ ವೆಚ್ಚ ಮಾತ್ರವಲ್ಲ ಅವರ ಮದುವೆಯನ್ನೂ ತನ್ನದೇ ಖರ್ಚಿನ ಮೂಲಕ ಮಾಡಿದ ಶಿಕ್ಷಕ. ಈ ನಾಲ್ವರು ಮಕ್ಕಳಲ್ಲಿ ಓರ್ವ ಹೆಣ್ಣು ಮಗುವನ್ನು ತನ್ನ ಮನೆಯಲ್ಲಿಯೇ ಸಾಕಿ ವಿದ್ಯೆ ಕೊಟ್ಟು ನಂತರ ಆಕೆಗೆ ಮದುವೆಯನ್ನೂ ಮಾಡಿ ಆಕೆಯ ಬದುಕಿಗೆ ಅರ್ಥ ತುಂಬಿದ ಸಾಧಕ. ಇದರ ಜತೆಗೆ ಸುಮಾರು ೨೦ಕ್ಕೂ ಹೆಚ್ಚು ಮಕ್ಕಳ ಶೈಕ್ಷಣಿಕ ವೆಚ್ಚವನ್ನೂ ಭರಿಸಿ ಅವರ ಬದುಕಿಗೆ ಶೈಕ್ಷಣಿಕ ನೆಲೆ ಕಲ್ಪಿಸಿಕೊಟ್ಟ ಗುರು. ಇದು ಓರ್ವ ಸಮಾಜಸುಧಾರಕ ಶಿಕ್ಷಕನ ಬದುಕಿನ ಸಾಧನೆ. ನಿವೃತ್ತಿಯ ನಂತರವೂ ‘ಪರೋಪಕಾರಿ’ ಗುಣವನ್ನು ಹಾಗೆಯೇ ಉಳಿಸಿಕೊಂಡು ಬದುಕನ್ನು ಸಾರ್ಥಕ್ಯಗೊಳಿಸುತ್ತಿರುವ ಓರ್ವ ಕರ್ಮಜೀವಿ. ಇವರು ಪುತ್ತೂರಿನ ಐತ್ತಪ್ಪ ಮಾಸ್ಟ್ರು..
ಇವರಿಂದ ನೆಲೆ ಪಡೆದುಕೊಂಡ ನಾಲ್ವರದ್ದೂ ಈಗ ಸಂತೃಪ್ತ ಬದುಕು. ಶೈಕ್ಷಣಿಕ ಬದುಕಿನಲ್ಲಿ ಈ ಮಾಸ್ಟ್ರು ಕೊಟ್ಟ ನೆರವು-ಸಹಾಯದಿಂದ ಇಂದು ಬದುಕಿನಲ್ಲಿ ಭದ್ರತೆ ಕಂಡುಕೊಂಡ ೨೦ಕ್ಕೂ ಹೆಚ್ಚು ಮಕ್ಕಳು ಇಂದಿಗೂ ಮಾಸ್ಟ್ರ ಮುಂದೆ ಧನ್ಯತಾಭಾವದಿಂದ ತಲೆತಗ್ಗಿಸಿ ನಿಲ್ಲುತ್ತಾರೆ. ಐತ್ತಪ್ಪ ಮಾಸ್ಟ್ರು.. ಅವರ ದತ್ತು ಮಕ್ಕಳು ಸಮಾಜಕ್ಕೊಂದು ಅರ್ಥ ಕಲ್ಪಿಸಿಕೊಟ್ಟ ಜತೆಗೆ ಇತರರ ಬದುಕಿಗೊಂದು ಮಾದರಿ. ಶಿಕ್ಷಕನಾಗುವುದು ಕೇವಲ ಸಂಬಳಕ್ಕಾಗಿ ಎಂಬ ಚಿಂತನೆಗಿಂತ ಮಾರುದ್ದ ದೂರ ನಿಂತು ತನ್ನ ಪರಿಧಿಯಲ್ಲಿಯೇ ಹತ್ತಾರು ಮಕ್ಕಳ ಬದುಕಿಗೆ ಮುನ್ನುಡಿ ಬರೆದ ಈ ಐತ್ತಪ್ಪ ಮಾಸ್ಟ್ರು ತಮ್ಮ ೭೦ರ ಹರೆಯದಲ್ಲಿಯೂ ಚಿರಯುವಕ. ತನ್ನ ಸಾಮಾಜಿಕ ಕಾಳಜಿಯಿಂದ ಶಿಕ್ಷಕ ವೃತ್ತಿಗೆ ಗೌರವ ತಂದುಕೊಟ್ಟ ಈ ಮಾಸ್ಟ್ರು ಸಮಾಜಕ್ಕೊಂದು ನಿಜಾರ್ಥದ ಆಸ್ತಿಯಾಗಿದ್ದಾರೆ.
ಹೀಗಿತ್ತು ಮಾಸ್ಟ್ರ ಪಯಣ..
ಸುಳ್ಯದ ಕದಿಕಡ್ಕ ಎಂಬಲ್ಲಿ ಶಿಕ್ಷಕ ವೃತ್ತಿಗೆ ಪಾದಾರ್ಪಣೆ ಮಾಡಿದ ಐತ್ತಪ್ಪ ನಾಯ್ಕ ಅವರು ನಂತರ ಬಂಟ್ವಾಳ ತಾಲೂಕಿನ ಬಾಳ್ತಿಲ, ಪುತ್ತೂರು ತಾಲೂಕಿನ ಬೆಳಂದೂರು, ಕಬಕ, ಬೆಟ್ಟಂಪಾಡಿ, ಆರ್ಯಾಪು, ಸವಣೂರು, ಮುರ ಸೇರಿದಂತೆ ಬಹುತೇಕ ಗ್ರಾಮೀಣ ಭಾಗದ ಶಾಲೆಗಳಲ್ಲಿ ಸಹಶಿಕ್ಷಕನಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದಾರೆ. ಉಪ್ಪಿನಂಗಡಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಿರಿಯ ಮುಖ್ಯೋಪಾಧ್ಯಾಯ ಹುದ್ದೆಯಲ್ಲಿದ್ದುಕೊಂಡು ರೂ.೧.೨೩ ಕೋಟಿ ವೆಚ್ಚದ ನೂತನ ಕಟ್ಟಡ ರಚನೆ ಅದಕ್ಕಾಗಿ ದಾನಿಗಳ ನೆರವಿನಿಂದ ಹಣ ಸಂಗ್ರಹದ ಮೂಲಕ ಅತ್ಯುತ್ತಮ ಕಟ್ಟಡ ನಿರ್ಮಿಸಿದ ಖ್ಯಾತಿಗೂ ಪಾತ್ರವಾಗಿದ್ದಾರೆ. ರಾಜ್ಯ ಪಠ್ಯಪುಸ್ತಕ ಸಮಿತಿ ಸದಸ್ಯ ಮತ್ತು ಪುನರ್ ಪರಿಶೀಲನಾ ಸಮಿತಿ ಸದಸ್ಯ, ತುಳುಪಠ್ಯ ಪುಸ್ತಕ ರಚನಾ ಸಮಿತಿ ಅಧ್ಯಕ್ಷರಾಗಿಯೂ ಇವರ ಸೇವೆ ಅನನ್ಯ. ಅಷ್ಟೇ ಅಲ್ಲದೆ ಲೇಖಕರಾಗಿಯೂ ಸಾಹಿತ್ಯ ಕ್ಷೇತ್ರದಲ್ಲಿ ತನ್ನ ಅಚ್ಚು ಮೂಡಿಸಿದ ‘ಕ್ರಿಯೇಟಿವ್ ಶಿಕ್ಷಕರಾಗಿದ್ದಾರೆ.
ಸುಮಾರು ೪೦ ವರ್ಷಕ್ಕೂ ಅಧಿಕ ಕಾಲ ಶಿಕ್ಷಕ ಸೇವೆ ಮಾಡಿ ನಿವೃತ್ತಿ ನಂತರವೂ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ-ಅಧ್ಯಕ್ಷರಾಗಿ, ಜಿಲ್ಲಾ ಕೋಶಾಧ್ಯಕ್ಷರಾಗಿ, ಲಯನ್ಸ್, ನಿವೃತ್ತ ನೌಕರರ ಸಂಘದ ಅಧ್ಯಕ್ಷರಾಗಿ, ಭಾರತ್ ಸ್ಕೌಟ್ಸ್ & ಗೈಡ್ಸ್ ಜಿಲ್ಲಾ ಸಹಾಯಕ ಆಯುಕ್ತರಾಗಿ, ಪುತ್ತೂರು ಮಹಾಲಿಂಗೇಶ್ವರ ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಸದಾ ಯುವಕರೂ ನಾಚುವಂತೆ ಕೆಲಸ ಮಾಡುವ ಕ್ರೀಯಾತ್ಮಕ ಶಕ್ತಿ ಇವರದ್ದಾಗಿದೆ.
ಅಂಬೇಡ್ಕರ್ ಜಿಲ್ಲಾಪ್ರಶಸ್ತಿ, ಶಿಕ್ಷಣ ಸಾಧನಾ ಪ್ರಶಸ್ತಿ, ಶೈಕ್ಷಣಿಕ ಸಾಧನೆಗಾಗಿ ಜೇಸಿಸ್‌ನಿಂದ ‘ಔಟ್ ಸ್ಟ್ಯಾಂಡಿಂಗ್ ಪ್ರಶಸ್ತಿ, ತಾಲೂಕು ನೈರ್ಮಲ್ಯ ಪ್ರಶಸ್ತಿ, ಬಾಗಲಕೋಟೆ ಬಸವಜ್ಞಾನ ಗುರುಕುಲ ಜಮಖಂಡಿಯ ರಾಜ್ಯಪ್ರಶಸ್ತಿ, ೨೦೦೧ರಲ್ಲಿ ಅತ್ಯುತ್ತಮ ಶಿಕ್ಷಕ ರಾಷ್ಟ್ರಪ್ರಶಸ್ತಿ ಇವರ ಮುಡಿಗೇರಿದ ಪ್ರಮುಖ ಪ್ರಶಸ್ತಿಗಳು.