ಭಾಷಾ ಕೌಶಲ್ಯ ವೃದ್ಧಿಗೆ ಓದುವ ಅಭಿಯಾನ ಸಹಕಾರಿ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಸೆ.೪: ಮಕ್ಕಳಲ್ಲಿ ಭಾಷಾ ಕೌಶಲ್ಯ ಅಭಿವೃದ್ಧಿಪಡಿಸಲು ಓದುವ ಹವ್ಯಾಸ ಬೆಳೆಸಬೇಕು ಎಂದು ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ(ಸಿಟಿಇ) ಉಪನ್ಯಾಸಕ ಪಿ.ರಾಜಣ್ಣ ಹೇಳಿದರು. ನಗರದ ಪಿ.ಪಿ.ಎಸ್(ಸರ್ಕಾರಿ ಉನ್ನತ ತರಬೇತಿ ಪ್ರಾಥಮಿಕ ಶಾಲೆ) ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಓದುವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜಗತ್ತಿನ ಜೀವರಾಶಿಗಳಲ್ಲಿ ಮಾನವ ಶ್ರೇಷ್ಠ ವ್ಯಕ್ತಿ ಎನಿಸಿಕೊಂಡಿದ್ದಾನೆ. ಆಲೋಚಿಸುವ, ಮಾತನಾಡುವ ಸಾಮರ್ಥ್ಯ ಪಡೆದಿರುವ ಮನುಷ್ಯ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಶಿಕ್ಷಕರು ಪಠ್ಯ ವಿಷಯ ಬೋಧನೆಯ ಜತೆಗೆ ಶಾಲಾ ಗ್ರಂಥಾಲಯ ದಲ್ಲಿರುವ ಪುಸ್ತಕಗಳನ್ನು ಮಕ್ಕಳ ವಯೋಮಾನ, ತರಗತಿಗನುಗುಣವಾಗಿ ನೀಡಿ ಓದಲು ಅವಕಾಶ ಕಲ್ಪಿಸಬೇಕು ಎಂದರು.ಡಯಟ್ ಉಪನ್ಯಾಸಕ ಎಸ್.ಬಸವರಾಜು ಮಾತನಾಡಿ, ಮನುಷ್ಯನಿಗೆ ಮೂಲಭೂತ ಅವಶ್ಯಕತೆಗಳಾದ ಗಾಳಿ, ನೀರು, ಆಹಾರ ಮುಖ್ಯವಾಗಿರುವಂತೆ ಸನ್ಮಾರ್ಗದೆಡೆಗೆ ನಡೆಸಲು ಪುಸ್ತಕಗಳು ಪ್ರಮುಖ ಪಾತ್ರವಹಿಸುತ್ತವೆ. ಪುಸ್ತಕಗಳು ಜ್ಞಾನ ಶಕ್ತಿಯ ಕಲ್ಪವೃಕ್ಷವಾಗಿದ್ದು ಮಕ್ಕಳಲ್ಲಿ ಆತ್ಮವಿಶ್ವಾಸ, ಸಂವಹನ ಕೌಶಲ್ಯ ಬೆಳೆಸುವುದರ ಮೂಲಕ ಜ್ಞಾನವಿಕಾಸದ ದೀಪಗಳಾಗಿ ಸುಜ್ಞಾನದ ಬೆಳಕನ್ನು ನೀಡಿ ವ್ಯಕ್ತಿತ್ವ ವಿಕಸನವನ್ನುಂಟು ಮಾಡುತ್ತವೆ ಎಂದು ತಿಳಿಸಿದರು. ಶಾಲಾ ಶಿಕ್ಷಣ ಇಲಾಖೆಯ ಮಾನ್ಯ ಆಯುಕ್ತರ ಸೂಚನೆಯಂತೆ ಉಪನಿರ್ದೇಶಕ ಎಂ.ಆರ್.ಮAಜುನಾಥ್, ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್‌ರವರ ನೇತೃತ್ವದಲ್ಲಿ ಕಾರ್ಯಕ್ರಮದ ಜಿಲ್ಲಾ ನೋಡಲ್ ಅಧಿಕಾರಿ ಸಿ.ಎಸ್.ಲೀಲಾವತಿ ಇವರ ಮಾರ್ಗದರ್ಶನದಲ್ಲಿ ಸೆಪ್ಟೆಂಬರ್-3 ರಿಂದ 30 ರವರೆಗೆ ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ 1ರಿಂದ 7ನೇ ತರಗತಿಯವರೆಗೆ ಮಕ್ಕಳಲ್ಲಿ ಓದುವ ಕೌಶಲ್ಯ ಸಂಸ್ಕೃತಿ, ಪುಸ್ತಕಗಳ ಬಗ್ಗೆ ಒಲವು ಬೆಳೆಸಲು 21 ದಿನಗಳ ಓದುವ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿದೆ. ನನ್ನ ಶಾಲಾ ಗ್ರಂಥಾಲಯ, ನನ್ನ ಸಮುದಾಯ, ನನ್ನ ಶಾಲಾ ಹಬ್ಬ ವಿಷಯಗಳಿಗೆ ಸಂಬAಧಿಸಿದAತೆ ಕಥೆ ಓದುವುದು, ಓದುವ ಮೂಲೆ ಸ್ಥಾಪನೆ, ಸಾರ್ವಜನಿಕ ಗ್ರಂಥಾಲಯ ಭೇಟಿ, ಪುಸ್ತಕ ದೇಣಿಗೆ ದಿನ, ಜಾಥಾ, ಪುಸ್ತಕ ಸ್ನೇಹಮಯಿ ಕಾರ್ಯಕ್ರಮ, ಕಥೆ/ನಾಟಕದ ಚಿಕ್ಕ ಪರಿಕಲ್ಪನೆಯನ್ನು ಅಭಿನಯಿಸುವುದು, ಚಿತ್ರಕಲೆ, ರಸಪ್ರಶ್ನೆ, ಸ್ವಂತ ಕಥೆ ರಚಿಸುವ ಚಟುವಟಿಕೆಗಳನ್ನು ರೂಪಿಸಿದ್ದು ಶಿಕ್ಷಕರು ಪ್ರಾರ್ಥನಾ ಅವಧಿ/ಗ್ರಂಥಾಲಯದ ಅವಧಿಯಲ್ಲಿ ಮಕ್ಕಳನ್ನು ತೊಡಗಿಸಿಕೊಂಡು ಪ್ರತಿದಿನ ಒಂದೊAದು ಚಟುವಟಿಕೆ ನಿರ್ವಹಿಸುವ ಮೂಲಕ ಓದುವ ಅಭಿಯಾನ ಕಾರ್ಯಕ್ರಮ ಪರಿಣಾಮಕಾರಿಯಾಗಿ ನಡೆಸಬೇಕು ಎಂದು ಸಲಹೆ ನೀಡಿದರು.