ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣೆ
ಸಂಜೆವಾಣಿ ವಾರ್ತೆ
ದಾವಣಗೆರೆ, ಸೆ.4; ಮಹಿಳೆಯ ಆರ್ಥಿಕ ಸ್ವಾವಲಂಬನೆ, ಕುಟುಂಬಗಳ ಆರ್ಥಿಕ ಸಬಲತೆಗಷ್ಟೇ ಅಲ್ಲ, ಬಡ, ಮಧ್ಯಮ ವರ್ಗದ ಪ್ರತಿಭಾವಂತ ಮಕ್ಕಳಿಗೆ ವೃತ್ತಿ ಮತ್ತು ತಾಂತ್ರಿಕ ಶಿಕ್ಷಣಕ್ಕೆ ಅನುವಾಗುವಂತೆ 3ರಿಂದ 4 ವರ್ಷ ಅವದಿಗೆ ಪ್ರತಿ ತಿಂಗಳು ಕೋರ್ಸ್‌ಗಳನ್ನು ಆದರಿಸಿ 400ರಿಂದ 1 ಸಾವಿರ ರು. ನೀಡುವ ಮೂಲಕ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಮಕ್ಕಳ ಭವಿಷ್ಯ ಕಟ್ಟಿಕೊಡುವ ಕೆಲಸವನ್ನೂ ಮಾಡುತ್ತಿದೆ ಎಂದು ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ, ಕನ್ನಡಪ್ರಭ ಹಿರಿಯ ಪ್ರಧಾನ ವರದಿಗಾರ ನಾಗರಾಜ ಎಸ್.ಬಡದಾಳ್ ಹೇಳಿದರು.ನಗರದ ಎಸ್ಸೆಸ್ ಹೈಟೆಕ್ ಬಡಾವಣೆಯ ಸದ್ಭಾವನಾ ಸೌಧದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌, ದಾವಣಗೆರೆ ಮತ್ತು ದೇವನಗರಿ ಯೋಜನಾ ಕಚೇರಿಯಿಂದ ಹಮ್ಮಿಕೊಂಡಿದ್ದ 2023-24ನೇ ಸಾಲಿನಲ್ಲಿ 389 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಡಾ.ಹೇಮಾವತಿ ಹೆಗ್ಗಡೆಯವರ ಸಾಮಾಜಿಕ ಬದ್ಧತೆ, ಬಡ, ಮಧ್ಯಮ ವರ್ಗದ ಮಕ್ಕಳಿಗೆ ಉಜ್ವಲ ಭವಿಷ್ಯ ಕಟ್ಟಿಕೊಡುವ ನಿಟ್ಟಿನಲ್ಲಿ ಸುಜ್ಞಾನ ನಿಧಿ ಶಿಷ್ಯ ವೇತನ ನೀಡಿ, ಇತರರಿಗೂ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ ಎಂದರು. ಕೇವಲ ಮಹಿಳಾ ಸಬಲೀಕರಣ, ಆರ್ಥಿಕ ಪುನಶ್ಚೇತನಕ್ಕಷ್ಟೇ ಸೀಮಿತವಾಗದೇ ಸಮಾಜಮುಖಿ ಕಾರ್ಯಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದೆ. ಸ್ವಯಂ ಉದ್ಯೋಗ, ಗೃಹ ಕೈಗಾರಿಕೆ ಹೀಗೆ ಮಹಿಳೆಯರು ಆರ್ಥಿಕ ಚಟುವಟಿಕೆಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಬಡ, ಮಧ್ಯಮ ವರ್ಗದ ನಗರ, ಪಟ್ಟಣ, ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೃತ್ತಿ ಮತ್ತು ತಾಂತ್ರಿಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವುದು ನಿಮಗೂಸಹ ಪ್ರೇರಣೆಯಾಗಿದೆ. ಇಂತಹ ನೆರವು ಪಡೆದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉದ್ಯೋಗ ಗಳಿಸಿ, ಬದುಕು ಕಟ್ಟಿಕೊಂಡ ನಂತರ ಕನಿಷ್ಟ ಒಂದಿಬ್ಬರು ಬಡ ವಿದ್ಯಾರ್ಥಿಗಳ ಓದಿಗೆ ನೆರವಾದರೆ ಸುಜ್ಞಾನ ನಿಧಿ ಶಿಷ್ಯ ವೇತನ ಪಡೆದಿದ್ದು ಸಾರ್ಥಕವಾಗುತ್ತದೆ ಎಂದು ಅವರು ತಿಳಿಸಿದರು. ಕೊರೋನಾ ಪೂರ್ವದಲ್ಲಿದ್ದ ಜನರ ಬಾಳು ಕೊರೋನಾ ಮಹಾಮಾರಿ ಬಂದು ಹೋದ ನಂತರ ಇಲ್ಲ. ಅದೆಷ್ಟೋ ಅಮಾಯಕ ಜೀವಗಳು ಕೊರೋನಾಗೆ ಬಲಿಯಾದವು. ಅದೆಷ್ಟೋ ಬಡ, ಮಧ್ಯಮ ವರ್ಗದ ಕುಟುಂಬಗಳಕನಸನ್ನೇ ಮಹಾಮಾರಿ ನಾಶಪಡಿಸಿತು. ಅದೆಷ್ಟೋ ಜನರು ನೌಕರಿ ಕಳೆದುಕೊಂಡು ಬೀದಿ ಪಾಲಾದರು. ಅದೆಷ್ಟೋ ಕುಟುಂಬ ತನ್ನವರನ್ನೆಲ್ಲಾ ಕಳೆದುಕೊಂಡಿತು. ಅಂತಹ ಪರಿಸ್ಥಿತಿಯಲ್ಲೂ ಶ್ರೀಕ್ಷೇತ್ರದ ಸುಜ್ಞಾನ ನಿಧಿ ಶಿಷ್ಯ ವೇತನ ನೀಡುವುದನ್ನು ಸಂಸ್ಥೆ ನಿಲ್ಲಿಸಲಿಲ್ಲ. ತಿಂಗಳಿಗೆ ಒಂದು ಸಾವಿರ ಆವತ್ತು ಅಲ್ಪ ಮೊತ್ತವೇ ಆಗಿದ್ದರೂ ಅದೆಷ್ಟೋ ಕುಟುಂಬಗಳನ್ನು ಸಾಕುವ ಕೆಲಸಕ್ಕೂ ಅದು ಸದ್ಭಳಕೆಯಾಗಿದೆ ಎಂದು ಅವರು ಹೇಳಿದರು. ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆಯು ನೀಡುವ ಆರ್ಥಿಕ ನೆರವು ಸಹಸ್ರಾರು ಕುಟುಂಬಗಳ ಆರ್ಥಿಕ ಚಟುವಟಿಕೆಗೆ ಕಾರಣವಾಗಿದೆ. ಅದೆಷ್ಟೋ ಮಹಿಳೆಯರು ಸ್ವಾವಲಂಬಿಯಾಗಿ ಬಾಳಲು ಕಾರಣವಾಗಿದೆ. ದೇವರ ದುಡ್ಡು ಅಂತಲೇ ಜನರಲ್ಲಿದ್ದು, ಅಂತಹ ಹಣ ದುಡಿಮೆಗೆ ಸದ್ಭಳಕೆಯಾಗುತ್ತಿದೆ. ಸಂಸ್ಥೆಯ ಆರ್ಥಿಕ ನೆರವಿನಿಂದ ಅದೆಷ್ಟೋ ಕುಟುಂಬಗಳು ಇಂದು ನೆಮ್ಮದಿಯ ಬದುಕನ್ನು ಕಟ್ಟಿಕೊಟ್ಟಿದೆ. ದೇವರ ದುಡ್ಡು ಅನ್ನುವ ನಂಬಿಕೆಯೇ ಇಂದು ಅದೆಷ್ಟೋ ಕುಟುಂಬಗಳಿಗೆ ದುಡಿಮೆಗೆ ಪ್ರೇರಣೆಯೂ ಆಗಿದೆ ಎಂದು ನಾಗರಾಜ ಬಡದಾಳ್ ವಿವರಿಸಿದರು.ಸಂಸ್ಥೆಯ ನಿರ್ದೇಶಕ ಎಂ.ಲಕ್ಷ್ಮಣ್ ಮಾತನಾಡಿ, ಬಡತನ, ಸೂಕ್ತ ಪ್ರೋತ್ಸಾಹ, ಮಾರ್ಗದರ್ಶನ, ಮೂಲಭೂತ ಸೌಲಭ್ಯಗಳ ಕೊರತೆ, ದೂರದಲ್ಲಿರುವ ಶಿಕ್ಷಣ ಸಂಸ್ಥೆಗಳು ಇನ್ನಿತರೆ ಕಾರಣಕ್ಕೆ ಗ್ರಾಮೀಣ ವಿದ್ಯಾರ್ಥಿಗಳುವೃತ್ತಿ ಮತ್ತು ತಾಂತ್ರಿಕ ಶಿಕ್ಷಣದಿಂದ ಹೊರಗುಳಿಯಬಾರದೆಂದ ಕಾರಣಕ್ಕೆ ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು, ಮಾತೃಶ್ರೀ ಡಾ.ಹೇಮಾವತಿ ವಿ.ಹಗ್ಗಡೆಯವರು14.4.2007ರಂದು ಸುಜ್ಞಾನ ನಿಧಿಶಿಷ್ಯ ವೇತನ ಯೋಜನೆಗೆ ಚಾಲನೆ ನೀಡಿದ್ದರು. ವಿದ್ಯಾರ್ಥಿಗಳಿಗೆ ತಾಂತ್ರಿಕ, ವೃತ್ತಿ ಶಿಕ್ಷಣಗಳಿಗೆ ಸಂಸ್ಥೆ ನಿಗದಿಪಡಿಸಿದ ಆಯ್ದ ಕೋರ್ಸ್‌ಗೆ 400 ರು.ನಿಂದ 1 ಸಾವಿರ ರು.ವರೆಗೆ ಮಾಸಿಕ ಶಿಷ್ಯ ವೇತನ ನೀಡಲಾಗುತ್ತಿದೆಎಂದರು. ದಾವಣಗೆರೆ ಜಿಲ್ಲಾದ್ಯಂತ ಆರ್ಥಿಕ ವರ್ಷದಲ್ಲಿ 2163 ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಪಾವತಿಸಲಾಗುತ್ತಿದೆ. ಈವರೆಗೆ ಜಿಲ್ಲೆಯ 5002 ವಿದ್ಯಾರ್ಥಿಗಳಿಗೆ 8.59 ಕೋಟಿ ಶಿಷ್ಯ ವೇತನ ನೀಡಲಾಗಿದೆ. ರಾಜ್ಯಾದ್ಯಂತ 97 ಸಾವಿರಕ್ಕೂ ಅದಿಕ ವಿದ್ಯಾರ್ಥಿಗಳಿಗೆ 114.50 ಕೋಟಿ ಶಿಷ್ಯ ವೇತನ ನೀಡಿದೆ. ದಾವಣಗೆರೆ ಹಾಗೂ ದೇವನಗರಿ ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಪ್ರಸ್ತುತ ವರ್ಷ 2023-24ರಲ್ಲಿ ಒಟ್ಟು 389 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿಯಡಿ ಶಿಷ್ಯ ವೇತನ ಮಂಜೂರಾಗಿದೆ. ಈವರೆಗೆ ಒಟ್ಟು 1812 ವಿದ್ಯಾರ್ಥಿಗಳಿಗೆ ಒಟ್ಟು 1.94 ಲಕ್ಷ ರು. ಶಿಷ್ಯ ವೇತನ ನೀಡಲಾಗಿದೆ. ಶಿಷ್ಯ ವೇತನ ಪಡೆದ ಅದೆಷ್ಟೋ ಬಡ ಮಕ್ಕಳು ವೈದ್ಯರು, ಇಂಜಿನಿಯರ್‌, ಉನ್ನತ ಶಿಕ್ಷಣ ಪಡೆದು ಸಾಧನೆ ಮಾಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಜಿಲ್ಲಾ ಜನ ಜಾಗೃತಿ ವೇದಿಕೆಯ ಗೌಡ್ರ ಚನ್ನಬಸಪ್ಪ ಸಮಾರಂಭ ಅಧ್ಯಕ್ಷತೆ ವಹಿಸಿದ್ದರು. ಎಸ್‌ಬಿಐನ ಪ್ರಧಾನ ವ್ಯವಸ್ಥಾಪಕ ಲಕ್ಷ್ಮಣ ಕೆ.ನಂದೀಶ್ವರ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆ ಸದಸ್ಯರಾದ ಎಸ್.ಟಿ.ಕುಸುಮಶ್ರೇಷ್ಠಿ, ಚೇತನಾ ಶಿವಕುಮಾರ, ಜಿ.ಎಚ್‌.ಮಹಾಂತೇಶ, ದೇವನಗರಿ ಯೋಜನಾಧಿಕಾರಿ ಬಾಲಕೃಷ್ಣ, ಅಣಬೇರು ಮಂಜಣ್ಣ ಇತರರು ಇದ್ದರು. ಇದೇ ವೇಳೆ 2023-24ನೇ ಸಾಲಿನಲ್ಲಿ 389 ವಿದ್ಯಾರ್ಥಿಗಳ ಸುಜ್ಞಾನ ನಿಧಿ ವೇತನ ಮಂಜೂರಾತಿ ಪತ್ರ ವಿತರಿಸಲಾಯಿತು.
—