ಮನಸ್ಸನ್ನು ನಿಯಂತ್ರಣ ಮಾಡಲು ಬಸವಾದಿ ಶರಣರ ವಚನಗಳು ಬೇಕು; ಬಸವಪ್ರಭು ಶ್ರೀ
ಸಂಜೆವಾಣಿ ವಾರ್ತೆ
ದಾವಣಗೆರೆ. ಸೆ.5; ಮಾನವ ಜೀವನವೆಂಬುದು ಒಂದು ತುಂಬಿದ ಬಂಡಿಯಂತೆ  ಈ ಬದುಕೆಂಬ ಬಂಡಿಯು ಇಂದು ನಿಯಂತ್ರಣ ತಪ್ಪಿ ಅಪಘಾತಕ್ಕೆ ಈಡಾಗುತ್ತಿದೆ ಕಾರಣ ಏನೆಂದರೆ ಬದುಕೆಂಬ ಬಂಡಿಯ ಗಾಲಿಗಳು ನಿಯಂತ್ರಣ ಇಲ್ಲ ಈ ಗಾಲಿಗಳೇ ನಮ್ಮ ಮನಸ್ಸು ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.ನಗರದ ವಿರಕ್ತಮಠದಲ್ಲಿ ಜರುಗಿದ ಕಲ್ಯಾಣದಿಂದ ಉಳವಿಯಡೆಗೆ  ಪ್ರವಚನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಮನಸ್ಸಿನ ಮೇಲೆ ನಿಯಂತ್ರಣ ವಿಲ್ಲದ್ದರಿಂದ ಈ ಬದುಕು ಅಪಘಾತವಾಗಿದೆ . ಅವಸರವನ್ನು ಬಿಟ್ಟು ಸಮಾಧಾನವಾಗಿ ಚಲಿಸಬೇಕಾಗಿದೆ ಮನಸ್ಸನ್ನು ನಿಯಂತ್ರಣದಲ್ಲಿಟ್ಟು ಕೊಂಡು ಪ್ರಯಾಣಿಸಬೇಕು . ಮನಸ್ಸನ್ನು ನಿಯಂತ್ರಣ ಮಾಡಲು ಬಸವಾದಿ ಶರಣರ ವಚನಗಳು ಬೇಕು. ಶರಣರ ವಚನಗಳನ್ನು ಅಧ್ಯಯನ ಮಾಡಿ ಅದರಂತೆ ನಡೆದರೆ ಮಾನವನ ಮನಸ್ಸನ್ನು ನಿಯಂತ್ರಿಸಲು ಸಾಧ್ಯ ಬದುಕು ಅಪಘಾತವಾಗುವುದಿಲ್ಲ ಎಂದರು.ಬಸವಾದಿ ಶರಣರ ವಚನಗಳು ಜೀವನದ ಎಡರು ತೊಡರುಗಳನ್ನು , ಕಷ್ಟ ನೋವು , ಸಮಸ್ಯೆಗಳನ್ನು ಸಮಚಿತ್ತದಿಂದ ಎದುರಿಸುವ , ನೋವು – ನಲಿವನ್ನು , ಹೊಗಳಿಕೆ ತೆಗಳಿಕೆಯನ್ನು ಸಮದೃಷ್ಟಿಯಿಂದ ಕಾಣುವ ಕಲೆಯನ್ನು ಕಲಿಸುತ್ತದೆ .ಬದುಕು ಸುಗಮವಾಗಿ ಸಾಗಲು ಕಾಯಕ ಬೇಕು ಆ ಕಾಯಕ ಯಾವುದಾದರೂ ಆಗಲಿ ಅದರೊಳಗೆ ಆನಂದವನ್ನು ಕಂಡರೆ ಅದಕ್ಕಿಂತ ಬೇರೆ ಕೈಲಾಸವಿಲ್ಲ ಜೀವನದಲ್ಲಿ ಖಿನ್ನತೆಗೆ ಒಳಗಾಗಿ ,ಅತಿಯಾದ ಹೊಯ್ದಾಟಕ್ಕೆ ಒಳಗಾದ ಇಂದಿನ ಯುವ ಸಮುದಾಯದವರು , ದುಡಿಯುವ ಜನರು , ವ್ಯಾಪಾರಸ್ಥರು , ಗೃಹಿಣಿಯರು , ವೃತ್ತಿಪರರು , ವಿದ್ಯಾರ್ಥಿಗಳು ಹೀಗೆ ವಿವಿಧ ಸ್ತರದಲ್ಲಿರುವವರಿಗೂ ನಿರಾಳದ ಬದುಕಿಗೆ ಅಡಿಪಾಯವನ್ನು ಒದಗಿಸುತ್ತದೆ ಶಾರೀರಿಕ ಆರೋಗ್ಯ ವನ್ನು ಪಡೆಯುವುದರೊಂದಿಗೆ ಮಾನಸಿಕ , ಸಾಮಾಜಿಕ , ಆಧ್ಯಾತ್ಮಿಕ ಆರೋಗ್ಯವನ್ನು ಸಾಧಿಸಿ ನೆಮ್ಮದಿ ಸಂತೃಪ್ತಿಯ ಜೀವನವನ್ನು ನಡೆಸಲು ನಮಗೆ ಬಸವಾದಿ ಶರಣರ ವಚನಗಳು ಬೇಕು.ಮನುಷ್ಯನ ಬದುಕಿಗೆ ಒಂದು ದಿನ ಸಾವಿದೆ ಸಾವನ್ನು ಗೆಲ್ಲಬೇಕಾದರೆ ಬಸವಾದಿ ಶರಣರ ಜೀವನ ಚರಿತ್ರೆಯನ್ನು ಯಾರು ಕೇಳುತ್ತಾರೋ ಅವರು ಸಾವನ್ನು ಗೆಲ್ಲುತ್ತಾರೆ ಸಾವನ್ನು ಗೆದ್ದು ಇಂದಿಗೂ ಬಸವಾದಿ ಶರಣರು ಬದುಕಿದ್ದಾರೆ ಹಾಗಾಗಿ ಬಸವಾದಿ ಶರಣರು ಅಳಿದು ಹೋದ ಜೀವಗಳು ಅಲ್ಲ , ಉಳಿದ ಜೀವಗಳು ಅರ್ಥಾತ್ ಸಾವಿಲ್ಲದ ಜೀವಗಳು ಅವರು ಸೂರ್ಯ ಚಂದ್ರರಿರವರೆಗೂ ಶಾಶ್ವತ ಚೇತನವಾಗಿದ್ದಾರೆ ಎಂದು ಬಸವಪ್ರಭು ಸ್ವಾಮೀಜಿ ಹೇಳಿದರು.