ಕುವೆಂಪು ವಿವಿ ಸಮಸ್ಯೆಗಳ ಪರಿಹಾರಕ್ಕೆ ಹಂತ ಹಂತವಾಗಿ ಕ್ರಮ : ಮಧು ಬಂಗಾರಪ್ಪ
ಸಂಜೆವಾಣಿ ವಾರ್ತೆ
ಶಿವಮೊಗ್ಗ ಸೆ.5; ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಮಸ್ಯೆ, ಅಂಕಪಟ್ಟಿ ಪಡೆಯುವಲ್ಲಿನ ವಿಳಂಬ, ಕೇಂದ್ರೀಕೃತ ಯುಯುಸಿಎಂಎಸ್ ಪೋರ್ಟಲ್ ನಿಂದಾಗುತ್ತಿರವ ತೊಡಕುಗಳು ಸೇರಿದಂತೆ ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ಇರುವ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದುಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಹೇಳಿದರು.ಕುವೆಂಪು ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವಿವಿ ಹಣಕಾಸು ವಿಷಯದಲ್ಲಿ  ಸಂಕಷ್ಟದಲ್ಲಿದ್ದು  ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಆಡಳಿತವನ್ನು ವಿವಿ ನಿಯಮಾವಳಿ ಪ್ರಕಾರ, ಎಲ್ಲರನ್ನು  ವಿಶ್ವಾಸಕ್ಕೆ ತೆಗೆದುಕೊಂಡು ಜಾರಿಗೊಳಿಸಬೇಕು. ತ್ವರಿತ ವಾಗಿ ಕೈಗೊಳ್ಳಬೇಕಾದ ಹಣಕಾಸು ವಿಷಯಗಳನ್ನು ಕೈಗೆತ್ತಿಕೊಳ್ಳಬೇಕು.‌ ಏನೇ ಸಮಸ್ಯೆ ಇದ್ದರೂ ನನ್ನನ್ನು ಕರೆಯಿರಿ. ವಿವಿ ಅಭಿವೃದ್ದಿಯಲ್ಲಿ ನಾವೆಲ್ಲ ಭಾಗಿಯಾಗೋಣ ಎಂದು ಮನವಿ ಮಾಡಿದರು.ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಶರತ್ ಅನಂತಮೂರ್ತಿ ಮಾತನಾಡಿ, ವಿವಿ‌ ಸಂಪೂರ್ಣವಾಗಿ ಸರ್ಕಾರಿ ಹಣದ ಮೇಲೇ ಅವಲಂಬಿಸದೆ ಸಕ್ರಿಯರಾಗಿ  ಸಿ ಎಸ್ ಆರ್ ನಿಧಿ ಹಾಗೂ ಇತರೆ ಚಟುವಟಿಕೆ ಮೂಲಕ ಅಭಿವೃದ್ಧಿ ಗೆ ಶ್ರಮಿಸಲಾಗುವುದು.ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ ವಿವಿ ವ್ಯಾಪ್ತಿಗೆ ಬರುತ್ತದೆ.   ಪ್ರಥಮ ದರ್ಜೆ ಕಾಲೇಜುಗಳ ಅಫಿಲಿಯೇಷನ್ ಗಾಗಿ ಸರ್ಕಾರಕ್ಕೆ ಅರ್ಜಿ  ೩೫ ಪ್ರಸ್ತಾವನೆ ಕಳುಹಿಸಿದ್ದೆವು. ಅಫಿಲಿಯೇಷನ್ ದೊರಕದೆ ಕಾಲೇಜು ಆರಂಭಿಸಲು ಸಾಧ್ಯವಿಲ್ಲ.೧೭ ಸರ್ಕಾರಿ ಕಾಲೇಜು ಅನುಮೋದನೆ ಆಗಿದೆ. ೧೮ ಕಾಲೇಜು ಅನುಮೋದನೆಯಾಗದ ಕಾರಣ ದಾಖಲಾತಿ ಸಾಧ್ಯವಾಗುತ್ತಿಲ್ಲ ವೆಂದರು.ಫಲಿತಾಂಶ ಬೇಗ ನೀಡಲು ಸ್ವಲ್ಪ ತೊಡಕು ಇದೆ.‌ ಯುಯುಸಿಎಂಎಸ್ ಸೆಂಟ್ರಲೈಸ್ಡ್ ಸಾಫ್ಟ್ವೇರ್ ನಿಂದ ಸಣ್ಣಪುಟ್ಟ ಬದಲಾವಣೆ ಕೂಡ ಅತ್ಯಂತ ಕಷ್ಟ ಆಗುತ್ತಿದೆ. ೩ ವರ್ಷದಿಂದ ಸ್ನಾತಕೋತ್ತರ ಪದವಿ ಅಂಕಪಟ್ಟಿ ಸಹ ಬಂದಿಲ್ಲ . ವಿಕೇಂದ್ರೀಕರಣ ಆದರೆ ಅನುಕೂಲವಾಗುತ್ತದೆ. ಯುಯುಸಿಎಂಎಸ್ ಪೋರ್ಟಲ್ ನಲ್ಲಿ ದಾಖಲಾತಿ ಹಾಗೂ ಅಂಕಪಟ್ಟಿ ಪಡೆಯುವಲ್ಲಿ ಅನೇಕ ತೊಂದರೆಗಳಿವೆ.  ಪಿಯು ಫಲಿತಾಂಶ ಬಂದು ೪ ತಿಂಗಳಾದರೂ ದಾಖಲಾತಿ ಸಾಧ್ಯವಾಗಿಲ್ಲ ಎಂದರು.ಪ್ರಾಧ್ಯಾಪಕರು ಮಾತನಾಡಿ, ಅಫಿಲಿಯೇಷನ್ ದೊರಕದ ಪ್ರಥಮ ದರ್ಜೆ ಕಾಲೇಜುಗಳಿಗೆ ದಾಖಲಾತಿ ಆಗುತ್ತಿಲ್ಲ. ಹಾಗೂ ಸರ್ಕಾರದ ಕೆಲವು ನೀತಿಗಳಿಂದಾಗಿ ವಿಶ್ವವಿದ್ಯಾಲಯದಿಂದ ದೂರ ಶಿಕ್ಷಣ ನಿಲ್ಲಿಸಲಾಗಿದ್ದು ವಿದ್ಯಾರ್ಥಿಗಳು ಮತ್ತು ವಿವಿ ಗೆ ಹಿನ್ನಡೆಯಾಗಿದೆ ಎಂದರು.