ಪೋಲಾಗುತ್ತಿದೆ ಭಾರೀ ನೀರು… ನಿರ್ಲಕ್ಷ್ಯ ವಹಿಸಿದ ಪಾಲಿಕೆ ಅಧಿಕಾರಿಗಳು: ಗಮನಕ್ಕೆ ತಂದರೂ ಸ್ಪಂದಿಸದಿದ್ದಕ್ಕೆ ಜನಾಕ್ರೋಶ…!
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೫; ಮಹಾನಗರ ಪಾಲಿಕೆ ವ್ಯಾಪ್ತಿಯ ಕೆಲ ವಾರ್ಡ್ ಗಳಲ್ಲಿ ಈಗಲೂ ವಾರಕ್ಕೊಮ್ಮೆ ಕುಡಿಯುವ ನೀರು ಬಿಡಲಾಗುತ್ತಿದೆ. ರಾಜನಹಳ್ಳಿಯಿಂದ ಜಾಕ್ವೆಲ್ ಮೂಲಕ ನೀರು ಬರುತ್ತದೆ. ಆದ್ರೆ, ಪಿ. ಬಿ. ರಸ್ತೆಯಲ್ಲಿ ಪೈಪ್ ಲೈನ್ ಒಡೆದು ಅಪಾರ ನೀರು ಪೋಲಾಗಿದೆ. ಕಳೆದ ಹದಿನೈದು ದಿನಗಳಿಂದ ನೀರು ಪೋಲಾಗುತ್ತಿದ್ದರೂ ಬೇಜವಾಬ್ದಾರಿತನ ತೋರಿದ ಅಧಿಕಾರಿಗಳ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ. ಪಿ. ಬಿ. ರಸ್ತೆಯ ಜಿಎಂಐಟಿ ಪಕ್ಕದಲ್ಲಿನ ಲಾರಿ ನಿಲ್ಲಿಸುವ ಸ್ಥಳದ ಸಮೀಪದಲ್ಲಿ ನೀರು ಹರಿದು ಹೋಗುತ್ತಿದೆ. ಸ್ಥಳೀಯರು ಹೇಳುವ ಪ್ರಕಾರ 2 ಬಾರಿ ಕುಂದುವಾಡ ಕೆರೆ ತುಂಬಿಸುವಷ್ಟು ನೀರು ಪೋಲಾಗಿದೆ. ದಾವಣಗೆರೆ ನಗರಕ್ಕೆ ನಾಲ್ಕು ದಿನಕ್ಕೊಮ್ಮೆ, ವಾರಕ್ಕೊಮ್ಮೆ, ಹತ್ತು ದಿನಗಳಿಗೊಮ್ಮೆ ನೀರು ಬಿಡುವ ಪರಿಪಾಟಲು ಇದೆ. ಕೆಲವೊಮ್ಮೆ ಈ ಬಗ್ಗೆ ಕಾರಣ ಕೇಳಿದರೆ ವಿದ್ಯುತ್ ಇಲ್ಲ, ಪೈಪ್ ಲೈನ್ ಒಡೆದು ಹೋಗಿದೆ, ನೀರು ಪಂಪ್ ಆಗುತ್ತಿಲ್ಲ ಎಂದೆಲ್ಲಾ ಸಬೂಬು ಹೇಳುವ ಅಧಿಕಾರಿಗಳು ಪೈಪ್ ಲೈನ್ ಒಡೆದು ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿರುವ ಬಗ್ಗೆ ಗಮನಕ್ಕೆ ತಂದಿದ್ದರೂ ಕ್ಯಾರೇ ಎನ್ನದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ನೀರು ವೇಸ್ಟ್ ಆಗುತ್ತಿರುವ ಕುರಿತಂತೆ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಫೋನ್ ಮಾಡಿ ಮಾಹಿತಿ ನೀಡಲಾಗಿದೆ. ಕಳೆದ ಹದಿನೈದು ದಿನಗಳಿಂದಲೂ ಈ ಮಾತು ಹೇಳುತ್ತಲೇ ಬರಲಾಗುತ್ತಿದೆ. ಎಂಜಿನಿಯರ್ ಗಳು ಮೇಲಾಧಿಕಾರಿಗಳ ಜೊತೆ ಮಾತನಾಡುತ್ತೇವೆ, ಸ್ಥಳಕ್ಕೆ ಬರುತ್ತೇವೆ, ನೀರು ನಿಲ್ಲಿಸುತ್ತೇವೆ ಎಂಬ ಮಾತು ಬಿಟ್ಟರೆ ಸರಿಪಡಿಸುವ ಗೋಜಿಗೆ ಹೋಗದಿರುವುದು ಜನರ ಬೇಸರಕ್ಕೆ ಕಾರಣವಾಗಿದೆ. ಈ ಬಾರಿ ಉತ್ತಮ ಮಳೆಯಾಗಿದೆ, ಭದ್ರಾ ಜಲಾಶಯವು ತುಂಬಿದೆ. ತುಂಗಾಭದ್ರಾ ನದಿಗೂ ನೀರು ಬರುತ್ತಿದೆ. ಹಾಗಾಗಿ, ನೀರು ಪೋಲಾಗುತ್ತಿರುವುದರಿಂದ ಯಾವುದೇ ಸಮಸ್ಯೆ ಆಗಿಲ್ಲವೆನಿಸಿದರೂ ಕುಡಿಯುವ ನೀರು ವಾರ್ಡ್ ಗಳ ಜನರಿಗೆ ನೀಡದೇ ಪೈಪ್ ಲೈನ್ ಒಡೆದು ಹೋಗುತ್ತಿದ್ದರೂ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತಾಳಿರುವುದು ಜನರ ಸಿಟ್ಟು ನೆತ್ತಿಗೇರುವಂತೆ ಮಾಡಿದೆ. ಸ್ಥಳೀಯರೊಬ್ಬರು ನೀಡಿರುವ ಮಾಹಿತಿ ಪ್ರಕಾರ ಕಳೆದ 20 ದಿನಗಳಿಂದ ನಗರಕ್ಕೆ ಪೂರೈಸುವ ಕುಡಿಯವ ನೀರಿನ ಪೈಪ್ ಲೈನ್ ಒಡೆದು ನೀರು ಹೊರ ಹೋಗಿದೆ. ಸುಮಾರು 2 ಬಾರಿ ಕುಂದುವಾಡ ಕೆರೆ ತುಂಬುವಷ್ಟು ಕುಡಿಯುವ ನೀರು ಹರಿದು ಹೋಗಿದೆ. ಈ ಬಗ್ಗೆ ಪಾಲಿಕೆ ಎಂಜಿನಿಯರ್ ಅವರಿಗೆ ಮಾಹಿತಿ ನೀಡಿದ್ದೇವೆ. ಆದ್ರೂ ಸ್ಪಂದಿಸುತ್ತಿಲ್ಲ. ಯಾಕಿಷ್ಟು ಬೇಜವಾಬ್ದಾರಿತನ ವರ್ತನೆ ತೋರುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕುಡಿಯುವ ನೀರಿಗೆ ಕೆಲ ವಾರ್ಡ್ ಗಳಲ್ಲಿಯೂ ಈಗಲೂ ವಾರಕ್ಕೊಮ್ಮೆ, ನಾಲ್ಕೈದು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಈ ನೀರು ಉಳಿಸಿ ವಾರದಲ್ಲಿ ಎರಡು ಬಾರಿ ನೀರು ಹರಿಸಬಹುದು. ಅಧಿಕಾರಿಗಳು ಯಾಕೆ ಇದುವರೆಗೆ ಸ್ಥಳಕ್ಕೆ ಭೇಟಿ ನೀಡಿಲ್ಲ. ಎಲ್ಲಾ ವಿಚಾರಗಳನ್ನೂ ಶಾಸಕರು, ಸಚಿವರು, ಸಂಸದರ ಗಮನಕ್ಕೆ ತರಲು ಸಾಧ್ಯವಾಗದು. ಪೈಪ್ ಲೈನ್ ಒಡೆದಿರುವುದನ್ನು ಒಂದು ದಿನದಲ್ಲಿ ಸರಿಪಡಿಸಬಹುದು. ಆದ್ರೆ. ಈಗ ಹರಿದು ಹೋಗಿರುವ ನೀರು ಮತ್ತೆ ಶೇಖರಿಸಿ ಎಂದರೆ ಅಧಿಕಾರಿಗಳಿಂದ ಸಾಧ್ಯವಾಗುತ್ತದೆಯಾ? ಇರುವ ಸಂಪನ್ಮೂಲ ಉಳಿಸಿಕೊಂಡು ಜನರಿಗೆ ಅನುಕೂಲ ಮಾಡಿಕೊಡುವುದನ್ನು ಬಿಟ್ಟು ಅವರ ಮೇಲೆ ಇವರು, ಇವರ ಮೇಲೆ ಅವರು ಎಂಬಂತೆ ವರ್ತನೆ ತೋರುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ದಾವಣಗೆರೆ ನಗರದಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂಬುದು ಕಂಡುಬರುತ್ತಿದೆಯಾದರೂ ವಾರಕ್ಕೊಮ್ಮೆ ಯಾಕೆ ಕುಡಿಯುವ ನೀರು ಬಿಡಲಾಗುತ್ತಿದೆ. ಈ ನೀರನ್ನು ಉಳಿಸಿ ಹಳೇಪೇಟೆ, ವಿನೋಬನಗರ ಸೇರಿದಂತೆ ಕೆಲ ವಾರ್ಡ್ ಗಳಲ್ಲಿ ನೀರು ನೀಡಬಹುದು. ಜನರ ಬವಣೆ ನಿವಾರಿಸಬಹುದು. ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಒಡೆದು ಹೋಗಿರುವ ಪೈಪ್ ಲೈನ್ ದುರಸ್ತಿಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.