ಅಂಚೆ ಸೌಲಭ್ಯ ಗ್ರಾಮೀಣ ಜನರಿಗೆ ವರದಾನ; ಕೆ.ಎಸ್.ಬಸವಂತಪ್ಪ
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೫: ಅಂಚೆ ಇಲಾಖೆಯ ಸೇವೆ ಕೇವಲ ಪತ್ರ ವ್ಯವಹಾರಕ್ಕೆ ಸೀಮಿತವಾಗಿರದೆ ಜನತೆಗೆ ಆರ್ಥಿಕ ಸದಢತೆ ಒದಗಿಸಲೂ ಶ್ರಮಿಸುತ್ತಿದೆ ಎಂದು ಶಾಸಕ ಜೆ.ಎಸ್.ಬಸವಂತಪ್ಪ ಹೇಳಿದರು. ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ತಾಲೂಕಿನ ಕಂದನಕೋವಿ ಗ್ರಾಮದಲ್ಲಿ ಬುಧವಾರ ಅಂಚೆ ಅಧೀಕ್ಷಕರ ಕಾರ್ಯಾಲಯ ದಾವಣಗೆರೆ ವಿಭಾಗ ಹಾಗೂ  ಕಂದನಕೋವಿ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಆಯೋಜಿಸಿದ್ದ ಕಂದನಕೋವಿ ಶಾಖಾ ಅಂಚೆ ಉದ್ಘಾಟಿಸಿ ಮಾತನಾಡಿದ ಅವರು,  ಅಂಚೆ ಇಲಾಖೆಯ ಸೇವೆಗಳು ಜನತೆಯೊಂದಿಗೆ ಪ್ರಾಚಿನ ಕಾಲದಿಂದ ಇಂದಿನ ಆಧುನಿಕ ಕಾಲದವರೆಗೆ ಪ್ರಸ್ತುತ ಇವೆ. ಈ ನಿಟ್ಟಿನಲ್ಲಿ ಅಂಚೆ ಇಲಾಖೆಯ ಸೌಲಭ್ಯ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ಗ್ರಾಮಸ್ಥರಿಗೆ ಕಿವಿಮಾತು ಹೇಳಿದರು.ಕೇಂದ್ರ ಸರ್ಕಾರದ ಸೌಲಭ್ಯಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ಸಮರ್ಪಕವಾಗಿ ತಲುಪಿಸಿದ ಇಲಾಖೆ ಎಂದರೆ, ಅದು ಅಂಚೆ ಇಲಾಖೆಯಾಗಿದೆ. ಇಂದೂ ಕೂಡ ಕೇಂದ್ರ ಸರ್ಕಾರ ಉತ್ತಮ ಯೋಜನೆಗಳನ್ನು ಜಾರಿಗೊಳಿಸಿದ್ದು, ಅಂಚೆ ಸೇವೆಯನ್ನು ಮನೆ ಬಾಗಿಲಿಗೆ ಕೊಂಡೊಯ್ಯುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.ಉಳಿತಾಯ ಖಾತೆ ತೆರೆಯುವಿಕೆ, ಐಪಿಪಿಬಿ ಖಾತೆ ತೆರೆಯುವಿಕೆ, ಆಧಾರ್ ನೋಂದಣಿ, ತಿದ್ದುಪಡಿ, ಉಳಿತಾಯ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ, ಮೈ ಸ್ಟಾಂಪ್, ಮೈಲ್ಸ್ , ಅಂಚೆ ಜೀವ ವಿಮೆ ಸೇರಿದಂತೆ ಹಲವಾರು ಸೌಲಭ್ಯಗಳು ಅಂಚೆ ಇಲಾಖೆಯಲ್ಲಿ ಲಭ್ಯವಿದ್ದು ಸದುಪಯೋಗ ಮಾಡಿಕೊಳ್ಳಬೇಕೆಂದರು.ರಾಜ್ಯ ಸರ್ಕಾರ ಐದು ಗ್ರಾರಂಟಿ ಜಾರಿಗೊಳಿಸಿದ್ದು, ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ಅವರ ಖಾತೆಗೆ ಜಮಾ ಮಾಡಲಾಗುತ್ತಿದೆ. ಮಹಿಳೆಯರು ಬರುವ ಎರಡು ಸಾವಿರ ರೂ.ನಲ್ಲಿ ಕನಿಷ್ಠ 500 ರೂ. ಅಂಚೆಯಲ್ಲಿ ಆರ್.ಡಿ. ಮಾಡಿಸಿ, ನಿಮ್ಮ ಮಕ್ಕಳ ಶಿಕ್ಷಣಕ್ಕೆ ಕೂಡಿಟ್ಟರೆ ಅವರ ಭವಿಷ್ಯ ರೂಪಿಸಲು ಸಹಕಾರಿಯಾಗುತ್ತದೆ. ಜೊತೆಗೆ ಆರ್ಥಿಕವಾಗಿ ಸದೃಢರಾಗಬಹುದು ಎಂದು ಸಲಹೆ ನೀಡಿದರು.ದಾವಣಗೆರೆ ವಿಭಾಗದ ಅಂಚೆ ಅಧೀಕ್ಷಕ  ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮಣ್ಣ, ಉಪಾಧ್ಯಕ್ಷೆ ದೀಪಾ, ಉಪ ತಹಸೀಲ್ದಾರ್ ರಾಮಸ್ವಾಮಿ, ಪಂಚಾಯತ್ ರಾಜ್ ಎ ಇ ಇ ಶಿವಮೂರ್ತಿ, ಗ್ರಾಪಂ ಪಿಡಿಒ ರಂಗಸ್ವಾಮಿ, ಅಂಚೆ ಅಧಿಕಾರಿಗಳಾದ ನರೇಂದ್ರ ನಾಯ್ಕ ,ಅಶ್ವತ್ಥ್, ಗ್ರಾಮದ ಮುಖಂಡರಾದ ದೇವೇಂದ್ರಪ್ಪ, ದ್ಯಾಮಣ್ಣ ,ಜಗಣ್ಣ, ಕಾಶೆಪ್ಪ, ಕೆಂಚವೀರಪ್ಪ, ಮಹೇಶಣ್ಣ, ಜಯಣ್ಣ, ಶಿವಕುಮಾರ್ ಇನ್ನಿತರರಿದ್ದರು.