ಸಮತೋಲಿತ ಆಹಾರ ಸೇವನೆಯಿಂದ ಸದೃಢ ಆರೋಗ್ಯ
ಕಲಬುರಗಿ:ಸೆ.04: ಯಾವುದೇ ಒಂದು ರಾಷ್ಟ್ರದ ಅಭಿವೃದ್ದಿಯಲ್ಲಿ ಆರೋಗ್ಯ ಭರಿತ, ಸದೃಢ ಮಾನವ ಸಂಪನ್ಮೂಲ ತುಂಬಾ ಅವಶ್ಯಕವಾಗಿದೆ. ಮಗುವಿದ್ದಾಗಲೇ ಅದಕ್ಕೆ ಎಲ್ಲಾ ಪೋಷಕಾಂಶಗಳುಳ್ಳ ಸಮತೋಲಿತ ಆಹಾರ ನೀಡಬೇಕು. ಇದರಿಂದ ಆ ಮಗು ಮುಂದೆ ದೈಹಿಕವಾಗಿ, ಮಾನಸಿಕವಾಗಿ, ಸಧೃಢವಾಗಿ ಬೆಳೆಯಲು ಸಾಧ್ಯವಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಹೇಳಿದರು.
ನಗರದ ಶೇಖರೋಜಾ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ಬುಧವಾರ ಹಮ್ಮಿಕೊಳ್ಳಲಾಗಿದ್ದ ‘ರಾಷ್ಟ್ರೀಯ ಪೋಷಕಾಂಶ ಸಪ್ತಾಹ ಹಾಗೂ ಪೋಷಣಾ ಅಭಿಯಾನ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಹದಿಹರೆಯದವರು ಮತ್ತು ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರು ಸಾಮಾನ್ಯವಾಗಿ ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದ ಅವರ ಹಾಗೂ ಜನಿಸುವ ಮಕ್ಕಳ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಅದಕ್ಕಾಗಿ ಸರ್ಕಾರ ಸಾಕಷ್ಟು ಹಣ ವೆಚ್ಚ ಮಾಡಿ ಪೋಷಣಾ ಯೋಜನೆಯನ್ನು ಒಂದು ಅಭಿಯಾನದ ರೂಪದಲ್ಲಿ ಯುವತಿಯರು, ಗರ್ಭಿಣಿಯರು ಮತ್ತು ಮಕ್ಕಳಿಗೆ ಪೋಷಕಾಂಶಗಳ ಆಹಾರವನ್ನು ನೀಡಿ ಅನೀಮಿಯಾ ಮುಕ್ತ ಭಾರತ ಮಾಡಲು ಪ್ರಯತ್ನಿಸುತ್ತಿದ್ದು, ಇದಕ್ಕೆ ಸಹಕಾರ ಅಗತ್ಯವಾಗಿದೆಯೆಂದರು.
ಅಪೌಷ್ಟಿಕತೆಯೆಂಬುದು ಒಂದು ವರ್ತುಲವಾಗಿದೆ. 2.5 ಕೆ.ಜಿ.ಗಿಂತ ಕಡಿಮೆ ತೂಕದ ಮಗು ಜನಿಸಿದರೆ, ಮುಂದೆ ಅದರ ಬೆಳವಣಿಗೆ ಕುಂಠಿತವಾಗುತ್ತದೆ. ಪ್ರೌಢಾವಸ್ಥೆ ಹಂತÀ ತಲುಪಿದ ನಂತರವು ಪೌಷ್ಠಿಕಾಂಶ ಕೊರತೆಯಿಂದ ಬಳಲುತ್ತಿರುವ ವ್ಯಕ್ತಿಯು ದೊರೆಯುತ್ತಾರೆ. ಅಂತಹ ತಾಯಿಗೆ ಜನಿಸಿದ ಮಗುವು ಸಹಜವಾಗಿಯೇ ಅಪೌಷ್ಟಿಕತೆಯನ್ನು ಎದುರಿಸುತ್ತದೆ. ಅನೇಕ ಮಕ್ಕಳು ಕ್ಷೀಣವಾಗಿ ಹಾಗೂ ಅತೀ ಕಡಿಮೆ ತೂಕ ಹೊಂದಿರುವುದಕ್ಕೆ ತಾಯಿಯು ಎದುರಿಸುತ್ತಿರುವ ಅಪೌಷ್ಠಿಕತೆ ಕಾರಣವಾಗಿದೆ. ಆದ್ದರಿಂದ ತಾಯಿಯು ಹಸಿರು ಸೊಪ್ಪು, ತರಕಾರಿಗಳು, ಹಣ್ಣು-ಹಂಪಲುಗಳು, ಮೊಳಕೆ ಕಾಳುಗಳು, ದ್ವಿದಳ ಧಾನ್ಯಗಳು, ಸಮತೋಲಿತ ಆಹರವನ್ನು ನಿಯಮಿತವಾಗಿ ಸೇವಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಪ್ರಮುಖರಾದ ಗಂಗಾಜ್ಯೋತಿ ಗಂಜಿ, ಮಂಗಳಾ ಚಂದಾಪುರ, ಸುನಂದಾ ಮಠಪತಿ, ಸಿದ್ದಮ್ಮ ಕಮಲಾಪುರ ಸೇರಿದಂತೆ ಇನ್ನಿತರರಿದ್ದರು.