ಪತ್ರಿಕಾ ವಿತರಕರಿಗೆ ಸೇವಾ ಭದ್ರತಾ ಸೌಲಭ್ಯಗಳು ದೊರೆಯಲಿ
ಕಲಬುರಗಿ:ಸೆ.04: ಜ್ಞಾನದ ನಿಧಿಗಳಾದ ಪತ್ರಿಕೆಗಳನ್ನು ಮಳೆ, ಚಳಿ, ಬಿಸಲು, ಗಾಳಿ, ಹಗಲು, ರಾತ್ರಿಯನ್ನದೇ, ಓದುಗರ ಮನೆ ಬಾಗಿಲಿಗೆ ನೇರವಾಗಿ ತಲುಪಿಸುವ ಮೂಲಕ ಕಾರ್ಯ ಮಾಡುತ್ತಿರುವ ಪತ್ರಿಕೆ ವಿತರಕರಿಗೆ ಸಾಮೂಹಿಕ ವಿಮೆ, ಭವಿಷ್ಯ ನಿಧಿ, ಕನಿಷ್ಟ ವೇತನ ನಿಗದಿಗೊಳಿಸುವಿಕೆ, ಇಎಸ್‍ಐ ಸೌಲಭ್ಯ, ಪಿಎಫ್‍ನಂತಹ ಸರ್ಕಾರಿ ಸೌಲಭ್ಯಗಳು ನೀಡುವ ಮೂಲಕ ಸೇವೆ, ಜೀವನ ಭದ್ರತೆಯನ್ನು ಒದಗಿಸಬೇಕು ಎಂದು ಹಿರಿಯ ಪತ್ರಿಕಾ ವಿತರಕ ಗುರುರಾಜ ಗುಡ್ಡಾ ಸರ್ಕಾರಕ್ಕೆ ಒತ್ತಾಸೆ ಮಾಡಿದರು.
ನಗರದ ನ್ಯೂ ರಾಘವೇಂದ್ರ ಕಾಲನಿಯಲ್ಲಿರುವ ‘ಶ್ರೀ ವಿವೇಕಾನಂದ ಕೋಚಿಂಗ್ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಏರ್ಪಡಿಸಿದ್ದ ‘ಪತ್ರಿಕಾ ವಿತರಕರ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಿಕಾ ವಿತರಣಾ ಕಾರ್ಯ ಕೀಳೆಂದು ಭಾವಿಸಬಾರದು. ಇದು ಬೆಳೆಗ್ಗೆ ಅಥವಾ ಸಾಯಂಕಾಲ ಅರೆಕಾಲಿಕ ಕೆಲಸವಾಗಿದ್ದು, ಇದರಿಂದ ನಮ್ಮ ಕೆಲಸದ ಜೊತೆಗೆ ಮಾಡಬಹುದಾಗಿದೆ.ಇದರಿಂದ ಆರ್ಥಿಕ ಸಹಾಯವಾಗುತ್ತದೆ. ನಾನು ಕಳೆದ 15 ವರ್ಷಗಳಿಂದ ಇದೇ ಕಾರ್ಯವನ್ನು ಮಾಡಿ, ನನ್ನ ಶಿಕ್ಷಣವನ್ನು ಪೂರೈಸಿರುತ್ತೇನೆ. ಈ ಕಾರ್ಯ ನನ್ನ ಜೀವನವನ್ನು ರೂಪಿಸಿದ್ದು, ನಾನೆಂದಿಗೂ ನನ್ನ ಕರ್ತವ್ಯ ಮರೆಯುವಂತಿಲ್ಲವೆಂದು ತಮ್ಮ ಮನದಾಳದ ಆಶಯವನ್ನು ವ್ಯಕ್ತಪಡಿಸಿದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಪತ್ರಿಕಾ ವಿತರಣಾ ಕಾರ್ಯ ಲಾಭದ ಉದ್ದೇಶದಿಂದಲ್ಲ. ಅದರಲ್ಲಿ ಸಮಾಜ ಸೇವಾ ಮನೋಭಾವನೆ ಅಡಗಿದೆ. ವಿತರಕರು ಪತ್ರಿಕೆಯ ಸೇನಾನಿಗಳು. ಜ್ಞಾನ ಪ್ರಸರಣ ಕಾರ್ಯ ಮಾಡುತ್ತಾರೆ. ತಮ್ಮ ವೈಯಕ್ತಿಕ ಜೀವನವನ್ನು ಬದಿಗೊತ್ತಿ ದಿನಾಲೂ ಜ್ಞಾನ ದಾಸೋಹ ಕಾರ್ಯ ಮಾಡುತ್ತಾರೆ. ಅವರ ಕೆಲಸಕ್ಕೆ ಸೂಕ್ತ ಗೌರವ ದೊರೆಯಬೇಕು. ಸರ್ಕಾರವು ಸೌಲಭ್ಯಗಳನ್ನು ನೀಡಿ ಪತ್ರಿಕಾ ವಿತರಕರ ಜೀವನಕ್ಕೆ ಭದ್ರತೆಯನ್ನು ಒದಗಿಸಬೇಕೆಂದು ನುಡಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಸಂಸ್ಥೆಯ ಅಧ್ಯಕ್ಷ ಬಸವರಾಜ ಮಳ್ಳಿ, ಶಿಕ್ಷಕಿ ಅಕ್ಷತಾ ಹಾಗೂ ವಿದ್ಯಾರ್ಥಿಗಳಿದ್ದರು.