ನಿರಂತರ ಸುರಿದ ಮಳೆ: ಕಟಾವಿಗೆ ಮೊದಲೇ ಮೊಳಕೆಯೊಡೆದ ಹೆಸರು
ಚಿಂಚೋಳಿ,ಸೆ.4- ತಾಲೂಕಿನಾದ್ಯಂತ ಎಡೆಬಿಡದೆ ಸುರಿದ ಮಳೆಗೆ ಊರು,ಗದ್ದೆ ಎನ್ನದೇ ಎಲ್ಲಾ ಕಡೆಗಳಲ್ಲಿ ನೀರು ತುಂಬಿಕೊಂಡಿವೆ. ಈ ಮಳೆಗೆ ಬರೀ ಜನಜೀವನವಷ್ಟೇ ಅಲ್ಲದೇ, ಜನರ ಆರ್ಥಿಕತೆಯ ಮೂಲವಾದ ಕೃಷಿಯ ಮೇಲೆ ಕೂಡ ಪರಿಣಾಮ ಬೀರಿದೆ.
ತಾಲ್ಲೂಕಿನ ಅಣವಾರ ಗ್ರಾಮದ ರೈತರ ಹೊಲಗಳಲ್ಲಿ ನೀರು ತುಂಬಿಕೊಂಡಿದ್ದು ಬೆಳೆಗಳು ಸಂಪೂರ್ಣ ನಾಶಗೊಂಡಿವೆ. ಹೆಸರು, ಉದ್ದು ಸೇರಿದಂತೆ ಅನೇಕ ಬೆಳೆಗಳು ನೀರಿನಲ್ಲಿ ಜಲಾವೃತವಾಗಿದ್ದು ಇದನ್ನು ಬೆಳೆದ ರೈತರು ಕಂಗಾಲಾಗಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ ಬೆಳೆದ ಬೆಳೆಯ ಫಸಲು ಕೈ ಸೇರುತ್ತದೆ ಎಂದು ಖುಷಿಪಟ್ಟಿದ್ದ ರೈತರ ಮುಖದಲ್ಲಿ ದುಃಖದ ಗೆರೆಗಳು ಕಾಣುತ್ತಿವೆ. ಗ್ರಾಮದಲ್ಲಿ ಹಲವು ಹೊಲ ಗದ್ದೆಗಳಿಗೆ ನೀರು ತುಂಬಿಕೊಂಡು ಇನ್ನು ಕೆಲವೇ ದಿನದಲ್ಲಿ ಕಟಾವು ಮಾಡಿ ರಾಶಿ ಮಾಡಬೇಕೆಂದುಕೊಂಡಿದ್ದ ಬೆಳೆಗಳು ಕಟಾವಿಗೆ ಮುಂಚೆಯೇ ಮೊಳಕೆಯೊಡೆದು ಹಾಳಾಗಿ ಬಿಟ್ಟಿವೆ.
ಗ್ರಾಮದ ಸರ್ವೇ ನಂಬರ್ 10 ಪುಣ್ಯವತಿ ಗಂಡ ಶಿವಪ್ಪ ಎನ್ನುವ ರೈತರಿಗೆ ಸೇರಿದ ಹೊಲದಲ್ಲಿ 3 ಎಕರೆ ಹೆಸರು ಬೆಳೆಯನ್ನು ಹಾಕಲಾಗಿದ್ದು, ಕಳೆದ ದಿನಗಳಿಂದ ಸುರಿಯುತ್ತಿರುವ ಮಳೆಗೆ ಹೆಸರು ಬೇಳೆ ಸಂಪೂರ್ಣ ನಾಶವಾಗಿದ್ದು, ಕಟಾವಿಗೆ ಮುಂಚೆಯೇ ಹೆಸರು ಕಾಳುಗಳು ಮೊಳಕೆಯೊಡೆದು ಹಾಳಾಗಿವೆ. ಸರ್ವೇ ನಂಬರ್ 10/5 ಪ್ರಶಾಂತ ಸೇರಿದಂತೆ ಇನ್ನು ಹಲವು ರೈತರ ಹೊಲಗಳಿಗೆ ನೀರು ನುಗ್ಗಿ ಬೆಳೆ ಹಾಳಾಗಿದ್ದಕ್ಕೆ ದುಃಖದಿಂದ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.