ಅಂಗನವಾಡಿ ಕೇಂದ್ರಕ್ಕೆ ಮುರಂ ಹಾಕಿಸಲು ಆಗ್ರಹ
ಚಿಂಚೋಳಿ,ಸೆ.4- ತಾಲ್ಲೂಕಿನ ಸೊಮನಿಂಗದಳ್ಳಿ ಗ್ರಾಮದಲ್ಲಿ ನಿರಂತರವಾಗಿ ಸುರಿದ ಮಳೆಗೆ ಗ್ರಾಮದ ಬಹುತೇಕ ಕಡೆಗಳಲ್ಲಿ ನೀರು ನುಗ್ಗಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಗ್ರಾಮದಲ್ಲಿನ ಅಂಗನವಾಡಿ ಕೇಂದ್ರದ ಆವರಣದಲ್ಲೂ ನೀರು ತುಂಬಿಕೊಂಡಿದ್ದು ಮಕ್ಕಳಿಗೆ ಅಂಗನವಾಡಿ ಕೇಂದ್ರಕ್ಕೆ ಹೋಗಲು ಪ್ರವೇಶವೇ ಇಲ್ಲದಂತಹ ಪರಿಸ್ಥಿತಿ ಉಂಟಾಗಿದೆ.
ಗ್ರಾಮದಲ್ಲಿ 20 ರಿಂದ 25 ರಷ್ಟು ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ಹೋಗುವವರಿದ್ದು ಪ್ರತಿಸಲ ಮಳೆ ಬಂದಾಗಲೆಲ್ಲ ಇದೆ ರೀತಿಯಾಗಿ ಕೇಂದ್ರದ ಆವರಣದಲ್ಲಿ ಮಳೆನೀರು ತುಂಬಿಕೊಂಡು ಈ ತರ ಪರಿಸ್ಥಿತಿ ಉಂಟಾಗಿ ನೀರು ಇಂಗಿ ಹೋಗುವವರೆಗೂ ಕೇಂದ್ರವನ್ನು ತೆರೆಯುವದಕ್ಕಾಗದೆ ಮುಚ್ಚಿಡಬೇಕಾದಂತಹ ಪರಿಸ್ಥಿತಿ ಎದುರಾಗುತ್ತಿದೆ. ಸದ್ಯ ಮಳೆ ಬಂದು ನೀರು ಅಂಗನವಾಡಿ ಕೇಂದ್ರದ ಒಳಗಡೆ ಹೊಕ್ಕಿಕೊಂಡು ಸಾಮಾಗ್ರಿಗಳು ಹಾಳಾಗಬಾರದೆಂದು ಅಲ್ಲಿರುವ ಸಾಮಾಗ್ರಿಗಳನ್ನೆಲ್ಲ ಮೇಲ್ವಿಚಾರಕರು ಬಾಡಿಗೆ ಕೊಠಡಿಗೆ ಸ್ಥಳಾಂತರಿಸಿದ್ದಾರೆ. ಆದ್ದರಿಂದ ಕೂಡಲೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಸಮಸ್ಯೆಯತ್ತ ಗಮನಹರಿಸಿ ಇದನ್ನು ಗಂಭೀರವಾಗಿ ತೆಗೆದುಕೊಂಡು ಶಾಲೆಯ ಆವರಣದಲ್ಲಿ ನೀರು ನಿಲ್ಲದಂತೆ ಮರಂ ಹಾಕಿಸಿ ಪುಟ್ಟ ವಿದ್ಯಾರ್ಥಿಗಳಿಗೆ ಅನುಕೂಲ ವ್ಯವಸ್ಥೆ ಮಾಡಿಕೊಟ್ಟು ಅವರ ಸ್ವಾಸ್ಥ್ಯ ಕಾಪಾಡಬೇಕೆಂದು ಗ್ರಾಮದ ಯುವ ಮುಖಂಡ ವೀರಭದ್ರ ಸೋಮನಿಂಗದಳ್ಳಿ ಆಗ್ರಹಿಸಿದ್ದಾರೆ.