ಭಾರಿ ವಾಹನಗಳ ಸಂಚಾರ ನಿರ್ಬಂಧಕ್ಕೆ ಎಸ್‍ಡಿಪಿಐ ಒತ್ತಾಯ
ಕಲಬುರಗಿ,ಸೆ.4-ನಗರದ ಖರ್ಗೆ ವೃತ್ತದಿಂದ ಹುಮನಾಬಾದ್ ವೃತ್ತದವರೆಗೆ ಇರುವ ರಿಂಗ್ ರಸ್ತೆಯ ಮೇಲೆ ಭಾರಿ ವಾಹನಗಳ ಸಂಚಾರವನ್ನು ನಿರ್ಬಂಧಿಸಬೇಕು ಎಂದು ಎಸ್‍ಡಿಪಿಐ ಜಿಲ್ಲಾ ಅಧ್ಯಕ್ಷ ಸೈಯದ್ ದಸ್ತಗೀರ್, ರಾಜ್ಯ ಕಾರ್ಯದರ್ಶಿ ಅಬ್ದುಲ್ ರಹೀಮ್ ಪಟೇಲ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖರ್ಗೆ ವೃತ್ತದಿಂದ ಹುಮನಾಬಾದ ವೃತ್ತದವರೆಗಿನ ರಿಂಗ್ ರಸ್ತೆಯಲ್ಲಿ ಆಗುತ್ತಿರುವ ಅಪಘಾತಗಳನ್ನು ತಪ್ಪಿಸಲು ಸೇವಾ ರಸ್ತೆ (ಸರ್ವಿಸ್ ರೋಡ್) ಬಾಕಿ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಬೇಕು ಎಂದು ಅವರು ಒತ್ತಾಯಿಸಿದರು.
ಕೆಟ್ಟ ಗುಣಮಟ್ಟದ ರಸ್ತೆ ಕಾರಣದಿಂದಾಗಿ ಅಪಘಾತಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಅಂದರೆ ಕಳೆದ ತಿಂಗಳು ಆಗಸ್ಟ್ 31 ರಂದು ಯುವಕನೊಬ್ಬ ಇದೇ ರಸ್ತೆಯಲ್ಲಿ ಭಾರೀ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇಂತಹ ಘಟನೆಗಳು ಮೇಲಿಂದ ಮೇಲೆ ಸಂಭವಿಸುತ್ತಲಿವೆ. ಆದ್ದರಿಂದ ಈ ರಸ್ತೆಯಲ್ಲಿ ಭಾರಿ ವಾಹನಗಳ ಓಡಾಟ ನಿಲ್ಲಿಸಬೇಕು ಮತ್ತು ಸರ್ವಿಸ್ ರಸ್ತೆ ಕಾಮಗಾರಿಯನ್ನು ತಕ್ಷಣವೇ ಆರಂಭಿಸಬೇಕು ಎಂದು ಅವರು ಆಗ್ರಹಿಸಿದರು
ಖರ್ಗೆ ವೃತ್ತದಿಂದ ಹುಮನಾಬಾದ ವೃತ್ತದವರೆಗೆ ಭಾರಿ ವಾಹನಗಳ ಓಡಾಟವನ್ನು ತಕ್ಷಣವೇ ನಿಲ್ಲಿಸಬೇಕು, ಬಾಕಿ ಇರುವ ಸೇವಾ ರಸ್ತೆ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಬೇಕು, ಆ.31 ರಂದು ಭಾರಿ ವಾಹನ ಡಿಕ್ಕಿ ಹೊಡೆದು ಮೃತಪಟ್ಟ ಯುವಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಸಿದರು. ಈ ಬೇಡಿಕೆಗಳನ್ನು ಈಡೇರಿಸದೇ ಹೋದಲ್ಲಿ ಅಕ್ಟೋಬರ್ 2 ರಂದು ಟಿಪ್ಪು ಚೌಕ್ ಮತ್ತು ಹುಮನಾಬಾದ ವೃತ್ತದಲ್ಲಿ ರಸ್ತೆ ತಡೆ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಎಸ್‍ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಲೀಂ ಇಲಾಹಿ, ಹಿರಿಯ ನಾಯಕ ಮೊಹ್ಸಿನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.