ಜಿಲ್ಲಾ ಶೈಕ್ಷಣಿಕ ಸಮ್ಮೇಳನ ಸರ್ವಾಧ್ಯಕ್ಷೆಗೆ ಆಹ್ವಾನ
ಬೀದರ್:ಸೆ.4: ಸೆಪ್ಟೆಂಬರ್ 6 ರಂದು ನಗರದಲ್ಲಿ ನಡೆಯಲಿರುವ ಜಿಲ್ಲಾ ಪ್ರಥಮ ಶೈಕ್ಷಣಿಕ ಸಾಹಿತ್ಯ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷೆ ಡಾ. ಪೂರ್ಣಿಮಾ ಜಾರ್ಜ್ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಪದಾಧಿಕಾರಿಗಳು ಮಂಗಳವಾರ ಸಮ್ಮೇಳನಕ್ಕೆ ಆಹ್ವಾನಿಸಿದರು.
ನಗರದ ಆದರ್ಶ ಕಾಲೊನಿಯಲ್ಲಿ ಇರುವ ಅವರ ಮನೆಗೆ ತೆರಳಿದ ಪದಾಧಿಕಾರಿಗಳು, ಶಾಲು ಹೊದಿಸಿ ಸನ್ಮಾನಿಸಿ, ಆಮಂತ್ರಣ ಪತ್ರಿಕೆ, ಫಲ ಪುಷ್ಪ, ಅವರ ಕುರಿತ ಕವನದ ಸ್ಮರಣಿಕೆ ನೀಡಿ ಆಮಂತ್ರಣ ನೀಡಿದರು.
ಶಿಕ್ಷಣ, ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಪೂರ್ಣಿಮಾ ಜಾರ್ಜ್ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಸರ್ವ ಸಮ್ಮತದಿಂದ ಆಯ್ಕೆ ಮಾಡಲಾಗಿದೆ ಎಂದು ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಹೇಳಿದರು.
ಪೂರ್ಣಿಮಾ ಅವರು ಸಾಹಿತ್ಯ ಲೋಕಕ್ಕೆ ಎರಡು ಕೃತಿಗಳನ್ನು ಅರ್ಪಿಸಿದ್ದಾರೆ. ಜ್ಞಾನಸುಧಾ ಶಿಕ್ಷಣ ಸಂಸ್ಥೆ ಮೂಲಕ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ಮಾಡುತ್ತಿದ್ದಾರೆ. ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಗಟ್ಟಿ ನೆಲೆ ಇದೆ. 12ನೇ ಶತಮಾನದಲ್ಲಿ ಬಸವಾದಿ ಶರಣರು ವಚನ ಸಾಹಿತ್ಯ ರಚಿಸಿದ್ದರು. 15ನೇ ಶತಮಾನದಲ್ಲಿ ಮಹಮೂದ್ ಗವಾನ್ ಸ್ಥಾಪಿಸಿದ್ದ ವಿಶ್ವವಿದ್ಯಾಲಯದಲ್ಲಿ ವಿವಿಧ ದೇಶಗಳ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದರು. ಶೈಕ್ಷಣಿಕ ಸಮ್ಮೇಳನವು ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಗಳು, ಶಿಕ್ಷಣ ಕ್ಷೇತ್ರದ ಸಮಸ್ಯೆ-ಸವಾಲುಗಳ ಮೇಲೆ ಬೆಳಕು ಚೆಲ್ಲಲಿದೆ. ಚಿಂತನ ಮಂಥನಕ್ಕೆ ವೇದಿಕೆ ಕಲ್ಪಿಸಲಿದೆ ಎಂದು ಹೇಳಿದರು.
ವಿಜಯಪುರದಿಂದ ಜಿಲ್ಲೆಗೆ ಸೊಸೆಯಾಗಿ ಬಂದ ನನ್ನನ್ನು ಮಗಳಾಗಿ ಸ್ವೀಕರಿಸಿದ ಜಿಲ್ಲೆಯ ಜನರಿಗೆ ಚಿರಋಣಿಯಾಗಿರುವೆ ಎಂದು ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷೆ ಪೂರ್ಣಿಮಾ ಚಾರ್ಜ್ ನುಡಿದರು.
ಬಾಲ್ಯದಿಂದಲೂ ಸಾಹಿತ್ಯ, ಸಮಾಜ ಸೇವೆ ಆಸಕ್ತಿ ಇತ್ತು. ಜ್ಞಾನಸುಧಾ ಸಂಸ್ಥೆ ಮೂಲಕ ಜಿಲ್ಲೆಯಲ್ಲಿ ಸಾಧ್ಯವಾದ ಶೈಕ್ಷಣಿಕ ಸೇವೆ ಕೈಗೊಂಡಿರುವೆ. ಶೈಕ್ಷಣಿಕ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ಒಲಿದು ಬಂದಿರುವುದು ನನ್ನ ಸೌಭಾಗ್ಯ ಎಂದು ಹೇಳಿದರು.
ಪರಿಷತ್ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಪೆÇ್ರ. ಶಿವಕುಮಾರ ಕಟ್ಟೆ ಮಾತನಾಡಿದರು.
ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಭಾರತಿ ವಸ್ತ್ರದ್, ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಪಾರ್ವತಿ ಸೋನಾರೆ, ಮಹಿಳಾ ಬಸವ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷೆ ವಿದ್ಯಾವತಿ ಬಲ್ಲೂರ, ಎನ್.ಜಿ.ಒ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಬಾಲಾಜಿ ಬಿರಾದಾರ, ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ, ಉದ್ಯಮಿ ಶಂಕರರಾವ್ ಕೊಟ್ಟರಗಿ, ರಾಜ್ಯ ವೈಜ್ಞಾನಿಕ ಪರಿಷತ್ ಸಂಯೋಜಕ ಬಾಬುರಾವ್ ದಾನಿ, ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ನಿರ್ದೇಶಕ ಮುನೇಶ್ವರ ಲಾಖಾ, ಎಂಜಿನಿಯ???ಗಳಾದ ರವಿ ಮೂಲಗೆ, ಹಾವಶೆಟ್ಟಿ ಪಾಟೀಲ, ಚಿತ್ರ ನಿರ್ಮಾಪಕ ಬಿ.ಜೆ. ವಿಷ್ಣುಕಾಂತ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ರಾಜೇಂದ್ರ ಮಣಗೆರೆ, ನಾಗರಾಜ ಜೋಗಿ, ಡಾ. ಶ್ರೇಯಾ ಮಹೇಂದ್ರಕರ್, ಸಕಲೇಶ್ವರಿ ಚನಶೆಟ್ಟಿ, ಅನಿತಾ ಶೇರಿಕಾರ್, ಸ್ವರೂಪರಾಣಿ ನಾಗೂರೆ ಮತ್ತಿತರರು ಇದ್ದರು.
ಪರಿಷತ್ ಜಿಲ್ಲಾ ಘಟಕದ ಗೌರವ ಕೋಶಾಧ್ಯಕ್ಷ ಶಿವಶಂಕರ ಟೋಕರೆ ನಿರೂಪಿಸಿದರು. ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಪಾಟೀಲ ವಂದಿಸಿದರು.
ಜಿಲ್ಲಾ ಪ್ರಥಮ ಶೈಕ್ಷಣಿಕ ಸಾಹಿತ್ಯ ಸಮ್ಮೇಳನದ ಅರ್ಥಪೂರ್ಣ ಆಯೋಜನೆಗೆ ಭರದ ಸಿದ್ಧತೆಗಳು ನಡೆದಿವೆ. ಪರಿಷತ್ ಪದಾಧಿಕಾರಿಗಳು ಉತ್ಸಾಹದಿಂದ ಸಿದ್ಧತಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಸುರೇಶ ಚನಶೆಟ್ಟಿ
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ
ಜಿಲ್ಲಾ ಪ್ರಥಮ ಶೈಕ್ಷಣಿಕ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿರುವುದು ಸಂತಸ ಉಂಟು ಮಾಡಿದೆ. ನನ್ನ ಜವಾಬ್ದಾರಿಯನ್ನು ಇಮ್ಮಡಿಗೊಳಿಸಿದೆ.
ಡಾ. ಪೂರ್ಣಿಮಾ ಜಾರ್ಜ್
ಸಮ್ಮೇಳನ ಸರ್ವಾಧ್ಯಕ್ಷೆ