ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವಂತೆ ರೈಲ್ವೆ ಸಚಿವರಿಗೆ ಕರವೇ ಮನವಿ
ಸೈದಾಪುರ:ಸೆ.4:ಸಮೀಪದ ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆ ಮಾಡಲಾದ ರೈಲು ಬೋಗಿ ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ ಪ್ರಧಾನ ಕಾರ್ಯದರ್ಶಿ ಸುರೇಶ ಬೆಳಗುಂದಿ ಅವರ ನೇತೃತ್ವದಲ್ಲಿ ಕೇಂದ್ರ ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು.
ಕೈಗಾರಿಕಾ ಪ್ರದೇಶಕ್ಕೆ ಆಗಮಿಸಿದ್ದ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಕರವೇ ಕಾರ್ಯಕರ್ತರು ಉದ್ಯೋಗದ ಭರವಸೆಯಿಂದ ಜಮೀನು ನೀಡಿದ ರೈತರು ಕಂಗಾಲಾಗಿದ್ದಾರೆ, ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸೈದಾಪುರ ರೈಲು ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯಗಳು ಇಲ್ಲದೆ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಕೂಡಲೇ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಬೇಕು. ಜತೆಗೆ, ಶೌಚಾಲಯ, ಕುಡಿಯುವ ನೀರು, ವಿಶ್ರಾಂತಿ ಕೋಣೆಗಳ ದುರಸ್ತಿ ಮಾಡಬೇಕು. ಇದಲ್ಲದೆ ರೈಲು ಗೇಟ್ ಹತ್ತಿರ ಹಳಿ ದಾಟಲು ನಿತ್ಯ ಹತ್ತಾರು ಗ್ರಾಮಗಳ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ವಾಹನಗಳು ಸುಲಭವಾಗಿ ತೆರಳಲು ಮೇಲು ಸೇತುವೆ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕರವೇ ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಬಸ್ಸು ನಾಯಕ, ಸಾಗರ್ ಹುಲ್ಲೆರ್, ಮಲ್ಲು ಬಾಡಿಯಾಳ, ತಿರುಪತಿ ಕಡೇಚೂರು, ನರೇಶ್ ಸೈದಾಪುರ, ವೆಂಕಟೇಶ್ ಬಾಡಿಯಾಳ, ಮಹೇಶ್, ಅನಿಲ್ ಕಡೇಚೂರು, ವೆಂಕಟೇಶ್ ಕಡೇಚೂರು ಸೇರಿದಂತೆ ಇತರೆ ಕಾರ್ಯಕರ್ತರು ಇದ್ದರು.