ಸ್ವಾತಂತ್ರ ಸಂಗ್ರಾಮಕ್ಕೆ ಸಂಗೊಳ್ಳಿ ರಾಯಣ್ಣರ ಕೊಡುಗೆ ಅಪಾರ
ವಿಜಯಪುರ,ಸೆ.4:ದೇಶದ ಸ್ವಾತಂತ್ರದ ಸಮಯದಲ್ಲಿ ಎಷ್ಟೋ ಜನ ಸಂತ, ಸೇನಾನಿಗಳು ಜನರಲ್ಲಿ ದೇಶಭಕ್ತಿ, ರಾಷ್ಟ್ರಭಿಮಾನ ಮೂಡಿಸುವಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪರೋಕ್ಷವಾಗಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ತಮ್ಮದೇ ಆದ ಕೊಡುಗೆಯನ್ನು ಕೊಟ್ಟಿದ್ದಾರೆ. ಅವರಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರು ಒಬ್ಬರು ಎಂದು ಉಪನ್ಯಾಸಕ ಬಸವರಾಜ ಕುಂಬಾರ ಅಭಿಪ್ರಾಯಪಟ್ಟರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದವರು ಏರ್ಪಡಿಸಿದ ಮಾಸಿಕ ಶಿವಾನುಭವ ಗೋಷ್ಟಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ದೇಶಾಭಿಮಾನ ಬಗ್ಗೆ ಕುರಿತು ಮಾತನಾಡಿ. ದೇಶ ಬಿಟ್ಟು ತೊಲಗಿ ಎಂದು ಬ್ರಿಟಿಷ ಸರಕಾರದ ವಿರುದ್ದ ಸಂಘರ್ಷಕ್ಕಿಳಿದು ಕ್ರಾಂತಿಕಾರಿ ಚಳವಳಿ ಆರಂಭಿಸಿದ ರಾಯಣ್ಣ ಒಬ್ಬ ದೇಶಭಕ್ತ, ಚತುರ ನಾಯಕ, ಧೈರ್ಯಶಾಲಿ ದೇಶದ ಸ್ವಾತಂತ್ರ್ಯಕ್ಕಾಗಿ ಶೌರ್ಯ, ತ್ಯಾಗದಿಂದ ಕಿತ್ತೂರು ಚನ್ನಮ್ಮಳ ಜೊತೆ ಕಾಡು ಜನರ ಸೈನ್ಯ ಕಟ್ಟಿಕೊಂಡು ಗೆರಿಲ್ಲಾ ಮಾದರಿ ಯುದ್ದಮಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಕೊನೆಗೆ ರಾಯಣ್ಣ ಸಹವರ್ತಿಗಳ ಕುತಂತ್ರದಿಂದ ಸೆರೆಯಾಗಿ 1831ರಲ್ಲಿ ವೀರಮರಣ ಹೊಂದಿದ್ದು, ರಾಯಣ್ಣನ ಧೈರ್ಯ, ಸಾಹಸ, ದಿಟ್ಟತನ ,ಹೋರಾಟ ಮೆಚ್ಚುವಂತಹದ್ದು. ದೀಪದಂತೆ ಉರಿದು ದೇಶಕ್ಕಾಗಿ ಮಡಿದವರು. ಇಂದಿನ ಮಕ್ಕಳಿಗೆ, ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕಾಗಿದೆ ಎಂದು ಹೇಳಿದರು.
ಜಿ.ಬಿ. ಸಾಲಕ್ಕಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ದೇಶಾಭಿಮಾನ ಬೆಳಿಸಿಕೊಳ್ಳಲು ರಾಯಣ್ಣನ ತ್ಯಾಗ, ಪರಾಕ್ರಮ, ಬಲಿದಾನ ಸ್ಮರಿಸುವ ವಿಚಾರಗಳನ್ನು ಯುವಕರಿಗೆ ತಿಳಿಯಪಡಿಸಬೇಕಾಗಿದೆ ಎಂದರು.
ನ್ಯಾಯವಾದಿ ವಿದ್ಯಾವತಿ ಅಂಕಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಗೊಳ್ಳಿ ರಾಯಣ್ಣ ಮೌಢ್ಯಗಳನ್ನು ಧಿಕ್ಕರಿಸುವಂತಹ ನಾಯಕ. ಅವರೊಬ್ಬ ದ್ಯೆತ್ಯ ಶಕ್ತಿ. ನಾವಿಂದು ಸಂತರ, ಹುತಾತ್ಮರ, ಶರಣರ ಚಿಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವನ ಪಾವನಗೊಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಸಾಹಿತಿ ಸಂಗಮೇಶ ಬದಾಮಿ ನಿರೂಪಿಸಿದರು. ವಿಠ್ಠಲ ತೇಲಿ ವಂದಿಸಿದರು. ಕೋಶಾಧ್ಯಕ್ಷ ಸಹದೇವ ನಾಡಗೌಡರ, ರವೀಂದ್ರ ಬ್ಯಾಕೋಡ, ಮಲ್ಲಿಕಾರ್ಜುನ ಅಮರಣ್ಣವರ, ಕೆ. ಎಫ್. ಅಂಕಲಗಿ, ನೂತನ ಬ್ಯಾಕೋಡ, ರಮೇಶ ತೇಲಿ, ಎಂ.ಎಂ. ಅವರಾಧಿ, ಎಸ್. ಎನ್.ಶಿವಣಗಿ, ಕಸಬೇಗೌಡರ ಉಪಸ್ಥಿತರಿದ್ದರು.