ಪತ್ರಿಕೋದ್ಯಮ ಕೇವಲ ಪಠ್ಯಕ್ರಮಕ್ಕೆ ಮಾತ್ರ ಸೀಮಿತವಲ್ಲ: ಪ್ರೊ. ಜಿ.ಬಿ. ಸೋನಾರ
ವಿಜಯಪುರ,ಸೆ.4:ಪತ್ರಿಕೋದ್ಯಮ ಎನ್ನುವುದು ಕೇವಲ ಪಠ್ಯಕ್ರಮಕ್ಕೆ ಮಾತ್ರ ಸೀಮಿತವಲ್ಲ, ಇದು ವೃತ್ತಿಪರತೆಯ ಆಧಾರದ ಮೇಲೆ ನಿರ್ಮಿತವಾದ ಒಂದು ಪ್ರಮುಖ ಕ್ಷೇತ್ರವಾಗಿದೆ ಎಂದು ಮಹಿಳಾ ವಿವಿಯ ಡಿ.ಪಿ.ಎ.ಆರ್ ವಿಶೇಷಾಧಿಕಾರಿ ಪ್ರೊ. ಜಿ.ಬಿ. ಸೋನಾರ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸೋಮವಾರ ಆಯೋಜಿಸಿದ್ದ ಅಂತಿಮ ವರ್ಷದ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಿಕೋದ್ಯಮ ವಿಭಾಗವು ತುಂಬಾನೇ ಕ್ರಿಯಾಶೀಲವಾಗಿದ್ದು, ಪ್ರಾಮಾಣಿಕತೆಯಿಂದ ತನ್ನ ಎಲ್ಲಾ ಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತದೆ. ವಿಶ್ವವಿದ್ಯಾಲಯದಲ್ಲಿ ಬೇರೆ ವಿಭಾಗಗಳಿಗೆ ಹೋಲಿಸಿದರೆ, ಪತ್ರಿಕೋದ್ಯಮ ವಿಭಾಗವು ಬಹಳಷ್ಟು ಕ್ರೀಯಾಶೀಲತೆಯಿಂದ ಹೊಂದಿದೆ. ವಿದ್ಯಾರ್ಥಿಗಳು ಇಲ್ಲಿರುವ ಆರೋಗ್ಯಕರ ವಾತಾವರಣದಲ್ಲಿ ತಮ್ಮ ಕೌಶಲ್ಯ ಮತ್ತು ಜ್ಞಾನವನ್ನು ಸರ್ವತೋಮುಖವಾಗಿ ವೃದ್ಧಿಸಿಕೊಂಡು ಮುಂದೆ ಬೆಳೆಸಿಕೊಳ್ಳಬೇಕು. ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಿ, ತಮ್ಮ ಗುರುಗಳಿಗೆ ಹೆಮ್ಮೆಯನ್ನು ತಂದುಕೊಡುವಂತಾಗಬೇಕು. ಜೊತೆಗೆ, ವೃತ್ತಿ ಮತ್ತು ವೈಯಕ್ತಿಕ ಜೀವನಗಳ ನಡುವೆ ಸಮತೋಲನವನ್ನು ಸಾಧಿಸಿ ಮುಂದುವರಿಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪೆÇ್ರ. ಓಂಕಾರ ಕಾಕಡೆ ಮಾತನಾಡಿ, ಬದುಕಿನಲ್ಲಿ ಹಲವು ಅಡಚಣೆಗಳು ಎದುರಾಗುತ್ತವೆ, ಆದರೆ ಅಂತಹ ಸಮಯಗಳಲ್ಲಿ ಮನೋಬಲವನ್ನು ರೂಢಿಸಿಕೊಂಡರೆ ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯ. ಜೀವನದಲ್ಲಿ ಯಾವಾಗಲೂ ಎಲ್ಲವೂ ನಿರೀಕ್ಷಿತ ರೀತಿಯಲ್ಲಿ ನಡೆಯದು, ಕೆಲವೊಮ್ಮೆ ಅಡೆತಡೆಗಳು ಮತ್ತು ವೈಫಲ್ಯಗಳು ಎದುರಾಗುತ್ತವೆ. ಆದರೆ ಅವುಗಳನ್ನೂ ಸಹ ಸಾಮಥ್ರ್ಯವನ್ನಾಗಿ, ಹೊಸ ಕಲಿಕೆ ಮತ್ತು ಉತ್ತೇಜನದ ದಾರಿಯನ್ನಾಗಿ ಪರಿವರ್ತಿಸಬೇಕು. ನೀವು ಎದುರಿಸುತ್ತಿರುವ ಸಮಸ್ಯೆಗಳು, ಸವಾಲುಗಳು ಅಥವಾ ತೊಂದರೆಗಳು ನಿಮಗೆ ನಕಾರಾತ್ಮಕವಾಗಿ ಕಾಣಿಸಿದರೂ, ಅವುಗಳು ಒಳ್ಳೆಯ ಮಾರ್ಗಕ್ಕೆ ದಾರಿ ಮಾಡಿಕೊಡುವ ಶಕ್ತಿ ಹೊಂದಿರುತ್ತವೆ ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ. ತಹಮೀನಾ ನಿಗಾರ ಸುಲ್ತಾನಾ ಹಾಗೂ ಸಂದೀಪ ನಾಯಕ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗದ ಸಂಶೋಧನಾ ವಿದ್ಯಾರ್ಥಿನಿಯರು ಮತ್ತು ಸ್ನಾತಕ ಸ್ನಾತಕೋತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ರತ್ನಾಂಜಿಲಿ ವಾಲಿಕರ ಸ್ವಾಗತಿಸಿದರು. ಆಸ್ಮಾ ಪಲಟ್ಟನ್ ಅತಿಥಿಯರನ್ನು ಪರಿಚಯಿಸಿದರು. ಶಿಲ್ಪಾ ಪವಾರ ನಿರೂಪಿಸಿದರು. ಸುನಂದಾ ಪಟ್ಟಣಶೆಟ್ಟಿ ವಂದಿಸಿದರು.