ಅಧಿಕಾರಿಗಳಿಗೆ ಬೆವರಿಳಿಸಿದ ತುಕರಾಂ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.04:  ಲೋಕಸಭಾ ಸದಸ್ಯರಾಗಿ ಮೊದಲ ಬಾರಿಗೆ ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ  ಇಂದು ದಿಶಾ ಸಮತಿ ಸಭೆ ನಡೆಸಿದ ಇ.ತುಕರಾಂ ಅವರು ತಮ್ಮ ಪ್ರಶ್ನೆಗಳ ಮೂಲಕ ಹಲವು ಇಲಾಖೆಯ ಅಧಿಕಾರಿಗಳಿಗೆ ಬೆವರಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಟಾನ ಕುರಿತು ದಾಖಲೆಗಳ ಸಮೇತ ಪ್ರಶ್ನೆ ಕೇಳಿದ ಸಂಸದರಿಗೆ ಸೂಕ್ತ ಉತ್ತರ ನೀಡಲು ಜಿಲ್ಲಾ ಮಟ್ಟದ ಅಧಿಕಾರಿಗಳು ತಡಕಾಡುತ್ತಿದ್ದರು. ಆಗ ನೋಡೀ..ನಾನು ಎಂಪಿ ಹೊಸದಾಗಿ ಆಗಿರಬಹದು, ಆದರೆ ನಾಲ್ಕು ಬಾರಿ ಶಾಸಕನಾಗಿ, ಸಚಿವನಾಗಿ ಜನರ  ಕೆಲಸ ಮಾಡಿದ ಅನುಭವ ಇದೆ. ಸುಮ್ನೆ ಸಭೆ ಇದೆ ಎಂದು ಕಡತ ತಂದು ಸಭೆಗೆ ಬಂದರೆ ಸಾಲದು. ಯೋಜನೆಗಳ ಅನುಷ್ಟಾನ, ಅವುಗಳ ಭೌತಿಕ ಪರಿಶೀಲನೆ ಎಲ್ಲವುದರ ಬಗ್ಗೆಯೂ ಸಮಗ್ರ ಮಾಹಿತಿ ಹೊಂದಿರಬೇಕು. ಯಾವುದನ್ನೂ ನಾನು ಅರ್ಧಕ್ಕೆ ಬಿಡುವುದಿಲ್ಲ. ಲಾಜಿಕಲ್ ಎಂಡ್ ಗೆ ತೆಗೆದುಕೊಂಡು ಹೋಗಬೇಕಿದೆ. ಇಲ್ಲದಿದ್ದರೆ ನಾನು ಸಭೆ ನಡೆಸಿ ಉಪ ಯೋಗವಿಲ್ಲದಂತಾಗುತ್ತದೆಂದರು.
ಶಿಕ್ಷಣ ಇಲಾಖೆಯ ಡಿಡಿಪಿಐ ಉಮಾದೇವಿ  ಅವರು ಸಂಸದರ ಪ್ರಶ್ನೆಗೆ ಸೂಕ್ತ ಮಾಹಿತಿಯನ್ನು ನೀಡದೇ ತಡಬಡಾಯಿಸಿದ್ದು ಸಂಸದರ ಆಕ್ರೋಶಕ್ಕೂ ಕಾರಣ ಆಯ್ತು.
ಸಭೆ ಮುಂದುವರೆದಿತ್ತು. ಸಭೆಯಲ್ಲಿ ಶಾಸಕ ಗಣೇಶ, ಡಿಸಿ ಪ್ರಶಾಂತ್ ಕುಮಾರ್ ಮಿಶ್ರ, ಜಿಪಂ ಸಿಈಓ ರಾಹುಲ್ ಶರಣಪ್ಪ ಸಂಕನೂರು, ಎಸ್ಪಿ ಡಾ.ಶೋಭಾರಾಣಿ ಇದ್ದರು.