ಹೃದಯಾಘಾತ ವರ ಸಾವು
ಬೆಳಗಾವಿ,ಸೆ.೪-ಮದುವೆಗೆ ಒಂದು ದಿನ ಮುನ್ನ ನವ ವರ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಅಥಣಿ ತಾಲೂಕಿನಲ್ಲಿ ನಡೆದಿದೆ.
ಅಥಣಿಯ ಝುಂಜರವಾಡ ಆರ್‌ಸಿ ಗ್ರಾಮದ ನಿವಾಸಿ ಸದಾಶಿವ ರಾಮಪ್ಪ ಹೋಸಲ್ಕಾರ (೩೧) ಮೃತಪಟ್ಟವರು. ನಾಳೆ ಮೃತ ಯುವಕನ ಮದುವೆ ನಿಶ್ಚಯವಾಗಿತ್ತು. ಕುಟುಂಬ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡಿದ್ದರು.
ಮನೆ ಮುಂದೆ ಮದುವೆಪೂರ್ವ ಸಿದ್ಧತೆಗಳನ್ನು ನಿನ್ನೆ ರಾತ್ರಿ ನಡೆಸಲಾಗುತ್ತಿತ್ತು. ಸದಾಶಿವ ಸ್ನೇಹಿತನ ಜೊತೆಗೆ ಮದುವೆ ಕೆಲಸದ ಬಗ್ಗೆ ದೂರವಾಣಿಯಲ್ಲಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಹಠಾತ್ ಹೃದಯಾಘಾತ ಸಂಭವಿಸಿದ್ದು, ಸ್ಥಳದಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅಥಣಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ, ಅಷ್ಟರಲ್ಲೇ ಯುವಕನ ಪ್ರಾಣಪಕ್ಷಿ ಹಾರಿ ಹೋಗಿದೆ.
ಮನೆಗೆ ಆಸರೆಯಾಗಿದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಐಗಳಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.