ಜಿಟಿಜಿಟಿ ಮಳೆಗೆ ಬೇಸತ್ತ ಜನತೆ; ಸೂರ್ಯಕಂಡು ಪುಳಕಿತರಾದ ಜನ
ದೇವದುರ್ಗ:ಸೆ೦೪: ನಾಲ್ಕೈದು ದಿನಗಳಿಂದ ಬೆಂಬಿಡದ ಸುರಿಯುತ್ತಿದ್ದ ಹುಬ್ಬಿ ಮಳೆಗೆ ತಾಲೂಕಿನ ರೈತರು ಹಾಗೂ ಸಾರ್ವಜನಿಕರು ಹೈರಾಣು ಆಗಿದ್ದು, ನಾಲ್ಕು ದಿನಗಳ ನಂತರ ಮಂಗಳವಾರ ಸೂರ್ಯ ದರ್ಶನವಾಗಿದೆ. ನಾಲ್ಕೈದು ದಿನಗಳಿಂದ ಮಲೆನಾಡಿನಂತಾಗಿದ್ದ ದೇವದುರ್ಗ ತಾಲೂಕು ನಾನಾ ರೋಗ ತಂದಿತ್ತು. ಸೂರ್ಯ ದರ್ಶನ ಜನರಿಗೆ ತುಸು ನೆಮ್ಮದಿ ತಂದಿದೆ.
ಪದೇಪದೆ ಸುರಿಯುತ್ತಿದ್ದ ಜಿಟಿಜಿಟಿ ಮಳೆಗೆ ಜನರು ಬೇಸತ್ತಿದ್ದರು. ಮಕ್ಕಳು ಸೇರಿ ಹಿರಿಯರಿಗೆ ನೆಮಡಿ, ಕೆಮ್ಮು, ಜ್ವರ ಸೇರಿ ಸಾಂಕ್ರಾಮಿಕ ರೋಗ ಆವರಿಸಿದ್ದವು. ನಿತ್ಯ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು ಮಲೇರಿಯಾ, ಟೈಪರ್ಡ್ ಸೇರಿ ಜ್ವರದಿಂದ ಜನರು ಬಳಲಿದ್ದರು. ನಾಲ್ಕು ದಿನಗಳ ನಂತರ ಸೂರ್ಯ ಮೋಡದ ಮೊರೆಯಿಂದ ಆಚೆಬಂದಿದ್ದು ಜನರಿಗೆ ತುಸು ನೆಮ್ಮದಿ ತಂದಿದೆ.
ವಿಪರೀತ ಮಳೆಯಿಂದ ಪಟ್ಟಣದ ಬಹುತೇಕ ರಸ್ತೆಗಳು ಕೊಳಚೆಯಂತಾಗಿ, ಸಂಚಾರಕ್ಕೆ ಸಮಸ್ಯೆಯಾಗಿತ್ತು. ಇಲ್ಲಿನ ಬಸ್ ನಿಲ್ದಾಣದಲ್ಲಿ ಮಳೆ ನೀರು ನಿಂತು ಕೆರೆಯಂತಾಗಿತ್ತು. ಬಸ್ ನಿಲ್ದಾಣ ರಸ್ತೆ, ಸಿದ್ದರಾಮೇಶ್ವರ ಕಾಲನಿ, ಜೆಪಿ ವೃತ್ತ, ಮಿನಿವಿಧಾನಸೌಧ ಏರಿಯಾ, ಅಬ್ಬು ಮೊಹಲ್ಲಾ, ಕಟಕರ ಕಟ್ಟೆ ಏರಿಯಾ, ರಾಷ್ಟ್ರಪತಿ ಓಣಿ ಸೇರಿ ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ನೀರು ನಿಂತು ಜನರು ಸಮಸ್ಯೆ ಎದುರಿಸಿದರು.
ಚರಂಡಿಯಲ್ಲಿ ಹೂಳು ಸಮರ್ಪಕವಾಗಿ ತೆಗೆಯದ ಕಾರಣ ಮಳೆನೀರು ಮುಂದಕ್ಕೆ ಹರಿಯದೆ ಎಲ್ಲೆಂದರಲ್ಲಿ ನಿಂತು ದುರ್ನಾತ ಬೀರುತ್ತಿತ್ತು. ಬಸ್ ನಿಲ್ದಾಣ ಸಂಪೂರ್ಣ ಗಲೀಜ್‌ಆಗಿದ್ದು, ಮೇಲಧಿಕಾರಿಗಳಿಗೆ ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ. ನಾಲ್ಕು ದಿನಗಳ ನಂತರ ಮೋಡ ಮುಸುಕಿದ ವಾತಾವರಣ ಕಡಿಮೆಯಾಗಿದ್ದು ಬಿಸಿಲು ಬಿದ್ದಿದೆ.
ರೋಗದ ಭೀತಿ:
ಅತಿಯಾದ ಮಳೆಯಿಂದ ಜಮೀನುಗಳಲ್ಲಿ ತೇವಾಂಶ ಹೆಚ್ಚಾಗಿ ಬೆಳೆಗಳು ಒಣಗುವ ಆತಂಕ ರೈತರನ್ನು ಕಾಡುತ್ತಿದೆ. ನಿರಂತರ ಮಳೆಯಿಂದ ಜಮೀನನಲ್ಲಿ ನೀರು ನಿಂತು ಹತ್ತಿ ಬೆಳೆಗಳು ಕೊಳೆಯುವ ಸ್ಥಿತಿಗೆ ಬಂದಿವೆ. ಇನ್ನೊಂದೆಡೆ ರೋಗದ ಪ್ರಮಾಣಕೂಡ ಹೆಚ್ಚಾಗಿದೆ. ಹತ್ತಿ ಬೆಳೆಗೆ ತಾಮ್ರ ರೋಗ, ಎಲೆಮುದುರುವ ರೋಗ ಬಾಧಿಸುತ್ತಿದೆ. ಇನ್ನು ನೀರು ನಿಂತು ತೊಗರಿ ಬೆಳೆ ಒಣಗುತ್ತಿದ್ದು ಅನ್ನದಾತರು ಆತಂಕಕ್ಕೆ ಒಳಗಾಗಿದ್ದಾರೆ. ಇತ್ತೀಚೆಗೆ ನಾಟಿ ಮಾಡಿದ ಮೆಣಿಸಿನಕಾಯಿ ಬೆಳೆಕೂಡ ಮೋಡ ಮುಸುಕಿದ ವಾತಾವರಣದಿಂದ ರೋಗಕ್ಕೆ ತುತ್ತಾಗುತ್ತಿವೆ. ಇನ್ನಾದರೂ ಮಳೆರಾಯ ಕರುಣೆತೋರಿ ಹೊರಪು ಆಗಲಿ ಎಂದು ರೈತರು ಆಶಯವಾಗಿದೆ.
ಕೋಟ್
ನಾಲ್ಕೈದು ದಿನಗಳಿಂದ ವಿಪರೀತ ಮಳೆಯಾಗುತ್ತಿದ್ದು ಬೆಳೆಗಳು ಕೊಳೆಯುತ್ತಿವೆ. ಹತ್ತಿ ಬೆಳೆಗೆ ತಾಮ್ರರೋಗ, ಎಲೆ ಮುದುರುವ ರೋಗ ಬರುತ್ತಿದೆ. ಅಲ್ಲದೆ ತೊಗರಿ ಬೆಳೆ ನೀರು ನಿಂತು ತೇವಾಂಶ ಹೆಚ್ಚಾಗಿ ಒಣಗುತ್ತಿವೆ. ಮೋಡ ಮುಸುಕಿದ ವಾತಾವರಣದಿಂದ ಜನರಿಗೆ ನೆಗಡಿ, ಕೆಮ್ಮು, ಜ್ವರ ಸೇರಿ ನಾನಾ ರೋಗ ಬರುತ್ತಿವೆ. ಸದ್ಯ ಮಳೆ ಅವಶ್ಯಕತೆಯಿಲ್ಲ. ನಿಂತರೆ ರೈತರು ಮಾತ್ರವಲ್ಲ ಜನರಿಗೂ ಅನುಕೂಲವಾಗಲಿದೆ.
| ಸೋಮರೆಡ್ಡಿ ಹಣಗಿ
ಕರಿಗುಡ್ಡ ಗ್ರಾಮದ ರೈತ
ಕೋಟ್=
ಮಳೆ ಜಾಸ್ತಿಯಾಗಿದ್ದರಿಂದ ವಾತಾವರಣದಲ್ಲಿ ಬದಲಾವಣೆಯಾಗಿ ಮಕ್ಕಳು ಹಾಗೂ ವೃದ್ಧರ ಆರೋಗ್ಯದಲ್ಲಿ ಏರುಪೇರು ಆಗಿದೆ. ನೆಗಡಿ, ಕೆಮ್ಮು, ಸಾಮಾನ್ಯ ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಜನರು ಹೆಚ್ಚಾಗಿ ಬಿಸಿನೀರು, ಸೊಂಟಿ ಚಹಾ ಸೇರಿ ಬಿಸಿ ಆಹಾರ ಸೇವನೆ ಮಾಡಬೇಕು. ವೈದ್ಯರ ಸಲಹೆ ಪಡೆದು ಔಷಧ ಪಡೆಯಬೇಕು.
| ಡಾ.ಬನದೇಶ್ವರ
ತಾಲೂಕು ವೈದ್ಯಾಧಿಕಾರಿ ದೇವದುರ್ಗ